ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸತ್ಯ ಮತ್ತು ಅಹಿಂಸೆಯ ಮೂಲಕ ಮಹಾತ್ಮಾಗಾಂಧಿ ಬ್ರಿಟೀಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀಯವರ ಜಯಂತಿಯಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಸತ್ಯಮೇವ ಜಯತೆ ಎಂಬುದು ಮಹಾತ್ಮಾಗಾಂಧಿಯ ಧ್ಯೇಯವಾಗಿತ್ತು. ಲಾಲ್‌ಬಹದ್ದೂರ್ ಶಾಸ್ತ್ರೀ ಹಾಗೂ ಗಾಂಧಿಜಿಯವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದರು.ಅಹಿಂದಾ ನಾಯಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಲು ವಿರೋಧ ಪಕ್ಷದವರು ಷಡ್ಯಂತ್ರ ನಡೆಸುತ್ತಿದ್ದಾರೆ. ಮೂಡಾ ಹಗರಣದಲ್ಲಿ ಮುಖ್ಯಮಂತ್ರಿಗಳ ಪಾತ್ರವಿಲ್ಲದಿದ್ದರೂ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಸತ್ಯಕ್ಕೆ ಸೋಲಿಲ್ಲ. ಮುಂದೊಂದು ದಿನ ಜಯ ಸಿಕ್ಕೆ ಸಿಗುತ್ತದೆ ಈಗ ಎದುರಾಗಿರುವ ಸಂಕಷ್ಟ ತಾತ್ಕಾಲಿಕವಷ್ಟೇ ಎಂದು ತಿಳಿಸಿದರು.
ಕೆ.ಪಿ.ಸಿ.ಸಿ. ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಮುರಳಿಧರ ಹಾಲಪ್ಪ ಮಾತನಾಡಿ, ದೇಶ ಸಂಕಷ್ಟದಲ್ಲಿದೆ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ರೈತರ ಕರಾಳ ಕಾಯಿದೆ, ನೋಟು ಅಮಾನ್ಯೀಕರಣದಿಂದ ಹಿಡಿದು, ಜಿ.ಎಸ್.ಟಿ.ವರೆಗೆ ದೇಶದ ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಕೇಂದ್ರ ಸರ್ಕಾರಕ್ಕೆ ತರಾಟೆ ತೆಗೆದುಕೊಂಡರು.ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಯುವ ಸಮೂಹವನ್ನು ನಂಬಿಸಿ ಪ್ರಧಾನಿಯಾಗಿರುವ ನರೇಂದ್ರಮೋದಿ ಹತ್ತು ವರ್ಷಗಳಲ್ಲಿ ಒಂದು ಉದ್ಯೋಗವನ್ನು ಕೊಟ್ಟಿಲ್ಲ. ಗಾಂಧಿ ಮತ್ತು ಲಾಲ್‌ಬಹುದ್ದೂರ್ ಶಾಸ್ತ್ರೀ ಅವರ ಹೋರಾಟವನ್ನು ಮುಂದುವರೆಸಿಕೊಂಡು ಹೋಗುವ ಮೂಲಕ ಕೋಮುವಾದಿ ಬಿಜೆಪಿ ತೊಲಗಿಸಿ ದೇಶ ಉಳಿಸಬೇಕಾಗಿದೆ ಎಂದು ಹೇಳಿದರು.ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಚಿತ್ರದುರ್ಗ ಕ್ಷೇತ್ರದ ಉಸ್ತುವಾರಿ ರಾಮಕೃಷ್ಣಪ್ಪ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ, ಉಪಾಧ್ಯಕ್ಷ ಎಸ್.ಎನ್. ರವಿಕುಮಾರ್, ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರುಗಳಾದ ಆರ್.ಕೆ. ಸರ್ದಾರ್, ಬಿ.ಟಿ. ಜಗದೀಶ್, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ಹನುಮಲಿ ಷಣ್ಮುಖಪ್ಪ, ಜೆ.ಜೆ. ಹಟ್ಟಿ ತಿಪ್ಪೇಸ್ವಾಮಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ. ಸಂಪತ್‌ಕುಮಾರ್, ಡಿ.ಎನ್. ಮೈಲಾರಪ್ಪ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.