ಸಾರಾಂಶ
ಕನ್ನಡಪ್ರಭ ವಾರ್ತೆ ಸೇಡಂ
ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿದ್ದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಹಾಗೂ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪತ್ರಿಕಾ ಸ್ವತಂತ್ರ ಅಗತ್ಯವಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಾಲ್ಯ ಅಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.ಪಟ್ಟಣದ ಸರಕಾರಿ ನೌಕರರ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಸೇಡಂ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಹಾಗೂ ಪತ್ರಕರ್ತ ಲಿ. ಬಿ.ಮಹಾದೇವಪ್ಪ ಸ್ಮರಣೆಯಲ್ಲಿ ಮಾಧ್ಯಮ ಶಕ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಪತ್ರಕರ್ತರು ತಪ್ಪುಗಳ್ನು ಸರಿಪಡಿಸುವುದರ ಜತೆಗೆ ಸಮಾಜದ ಅಭಿವೃದ್ಧಿ, ಏಳ್ಗೆಯ ಬಗ್ಗೆಯೂ ಗಮನಹರಿಸುವ ಕೆಲಸ ಮಾಡಬೇಕು. ಪತ್ರಕರ್ತರ ಪೆನ್ನಿಗೆ ಬಹಳಷ್ಟು ಶಕ್ತಿ ಇದೆ. ಸಮಾಜದಲ್ಲಿನ ಜನಸಾಮಾನ್ಯರ ಆಗು-ಹೋಗುಗಳು ಸೇರಿದಂತೆ ಪ್ರತಿಯೊಂದು ಆಯಾಮಗಳನ್ನು ರಚನಾತ್ಮಕವಾಗಿ ರಚಿಸಿ, ಅವರುಗಳ ಆಶೋತ್ತರಗಳಿಗೆ ಸ್ಪಂದಿಸುವ ಕೊಂಡಿಯ ರೀತಿಯಲ್ಲಿ ಮಾಧ್ಯಮಗಳು ಕೆಲಸ ಮಾಡುತ್ತಿವೆ. ಸಾಮಾಜಿಕ ಜಾಲತಾಣ ಸಾಕಷ್ಟು ತೀವ್ರ ಬೆಳವಣಿಗೆ ಕಂಡಿದ್ದು ಮಾಧ್ಯಮ ಕ್ಷೇತ್ರ ಇನ್ನಷ್ಟು ಆಧುನೀಕರಣಗೊಳ್ಳುವ ಅಗತ್ಯವಿದೆ ಎಂದರು.ಈ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ಪತ್ರಕರ್ತರಿಗೆ ಉಚಿತ ಬಸ್ ಮತ್ತು ಇನ್ನಿತರ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಹಾಗೆಯೇ ಪತ್ರಿಕಾ ಭವನ ನಿರ್ಮಾಣಕ್ಕೆ ನಿವೇಶನ ಕಟ್ಟಡ ನಿರ್ಮಿಸಲು ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ರಾಜಕುಮಾರ ಪಾಟೀಲ್ ಮಾತನಾಡಿ, ಸೇಡಂ ಪರ್ತಕರ್ತರ ಸಂಘ ಸದಾ ವಿನೂತನವಾಗಿ ಕೆಲಸ ಮಾಡುತ್ತಿದೆ. ಕಾವ್ಯ ಬೆಳಕು ಪುಸ್ತಕ ಹಾಗೂ ದಿ. ಮಹಾದೇವಪ್ಪ ಅವರ ಹೆಸರಲ್ಲಿ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು. ಪತ್ರಿಕಾ ವಿತರಕ ಚಾಂದ್ ಪಾಶ ಇಂದನೂರ ಹಾಗೂ ಗ್ರಂಥ ದಾಸೋಹಿ ತಿರುಪತಿ ಶಹಾಬಾದ್ಕರ್ಗೆ ಸತ್ಕರಿಸಲಾಯಿತು.ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ದೇವೇಂದ್ರಪ್ಪ ಅವಂಟಿ, ಪ್ರಶಸ್ತಿ ಪುರಸ್ಕೃತ ರಶ್ಮಿ ಎಸ್ ಮಾತನಾಡಿದರು. ಪತ್ರಕರ್ತರ ಸಂಘದ ಜಿಲ್ಲಾ ಪ್ರ. ಕಾರ್ಯದರ್ಶಿ ಸಂಗಮನಾಥ ರೇವತಗಾಂವ, ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಶಂಕರಯ್ಯಸ್ವಾಮಿ ಇಮಡಾಪೂರ, ಪ್ರಶಸ್ತಿ ಪುರಸ್ಕೃತ ಜಯತಿರ್ಥ ಪಾಟೀಲ್ ವೇದಿಕೆಯಲ್ಲಿದ್ದರು.
ವೀರೇಶ ಭಂಟನಳ್ಳಿ, ಅಭಿಷೇಕ ವಿಶ್ವಕರ್ಮ ಪ್ರಾರ್ಥಿಸಿದರು. ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಶರಣು ಮಹಾಗಂವ ಪ್ರಾಸ್ತವಿಕ ಮಾತನಾಡಿದರು. ಪ್ರ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಆಡಕಿ ಸ್ವಾಗತಿಸಿದರು.ಪತ್ರಕರ್ತರಾದ ನಾಗಯ್ಯಸ್ವಾಮಿ ಬೊಮ್ನಳ್ಳಿ, ಶರಣಯ್ಯಸ್ವಾಮಿ ಬೊಮ್ನಳ್ಳಿ, ಅವಿನಾಶ ಬೊರಂಚಿ, ಸಿದ್ದಲಿಂಗಯ್ಯಸ್ವಾಮಿ ಮಲಕೂಡ, ಶರಣಪ್ಪ ಎಳ್ಳಿ, ರಾಧಾಕೃಷ್ಣ, ಸುನೀಲ ರಾಣಿವಾಲ, ಶಫೀಕ, ಮಹಾಂತಯ್ಯಸ್ವಾಮಿ ಆಡಕಿ ಇದ್ದರು.ಮಾಧ್ಯಮ ಶಕ್ತಿ ಪ್ರಶಸ್ತಿ ಪ್ರದಾನ
ಉಪ-ಸಂಪಾದಕರಾಗಿರುವ ಬೆಂಗಳೂರಿನ ರಶ್ಮಿ ಎಸ್ ಹಾಗೂ ಮುಖ್ಯ ವರದಿಗಾರ ಜಯತೀರ್ಥ ಪಾಟೀಲ್ ಅವರಿಗೆ ನಾಡಿನ ಹಿರಿಯ ಪತ್ರಕರ್ತರಲ್ಲಿ ಒಬ್ಬರಾದ ತಾಲೂಕಿನ ಬೆನಕನಹಳ್ಳಿಯ ಲಿಂ. ಬಿ ಮಹಾದೇವಪ್ಪನವರ ಹೆಸರಿನಲ್ಲಿ ಸ್ಥಾಪಿತಗೊಂಡ ಮೊದಲ ವರ್ಷದ ಮಾಧ್ಯಮ ಶಕ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.