ವ್ಯಕ್ತಿಯನ್ನು ಲೌಕಿಕ ಬಂಧನದಿಂದ ಬಿಡುಗಡೆಗೊಳಿಸುವುದು ನಿಜವಾದ ಕಲೆ: ಡಾ. ನಂದಕುಮಾರ

| Published : Feb 18 2024, 01:33 AM IST / Updated: Feb 18 2024, 01:34 AM IST

ವ್ಯಕ್ತಿಯನ್ನು ಲೌಕಿಕ ಬಂಧನದಿಂದ ಬಿಡುಗಡೆಗೊಳಿಸುವುದು ನಿಜವಾದ ಕಲೆ: ಡಾ. ನಂದಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದಾಪುರ ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಸಪ್ತಸ್ವರ ಘಂಟಾ ಮಂಟಪ ಲೋಕಾರ್ಪಣೆ, ವಸುಧಾ ಕರಣಿಕ್-ವೈಶಾಲಿ ಭಟ್ ಜನ್ಮದಿನೋತ್ಸವದ ನಿಮಿತ್ತ ವಾರ್ಷಿಕ ಕಲಾ ಸನ್ಮಾನ, ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಸಿದ್ದಾಪುರ: ವ್ಯಕ್ತಿಯನ್ನು ಲೌಕಿಕ ಬಂಧನದಿಂದ ಬಿಡುಗಡೆಗೊಳಿಸುವುದು ನಿಜವಾದ ಕಲೆ. ಜೀವನದ ಕಷ್ಟಗಳನ್ನು ಪರಿಹರಿಸಿಕೊಳ್ಳುವ ವಿದ್ಯೆ ಕಲಿತಾಗ ನಾವು ಸುಸಂಸ್ಕೃತರಾಗುತ್ತೇವೆ ಎಂದು ಲಂಡನ್ ಭಾರತೀಯ ವಿದ್ಯಾಭವನದ ನಿರ್ದೇಶಕ ಡಾ. ಮತ್ತೂರು ನಂದಕುಮಾರ ಹೇಳಿದರು.

ಶಿವಮೊಗ್ಗದ ಸುಮಾನಸ ಸಂಸ್ಥೆ ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಆಯೋಜಿಸಿದ ಸಪ್ತಸ್ವರ ಘಂಟಾ ಮಂಟಪ ಲೋಕಾರ್ಪಣೆ, ವಸುಧಾ ಕರಣಿಕ್-ವೈಶಾಲಿ ಭಟ್ ಜನ್ಮದಿನೋತ್ಸವದ ನಿಮಿತ್ತ ವಾರ್ಷಿಕ ಕಲಾ ಸನ್ಮಾನ, ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜೀವನ ಯಜ್ಞಮಯವಾಗದಿದ್ದರೆ ಸ್ವಾರ್ಥವಾಗುತ್ತದೆ. ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಳ್ಳುವ ಮೂಲಕ ಸಾರ್ಥಕತೆ ಪಡೆದುಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಯಕ್ಷಗಾನದ ಪ್ರಸಿದ್ಧ ಕಲಾವಿದ ವಿನಾಯಕ ಹೆಗಡೆ ಕಲಗದ್ದೆ ಅವರನ್ನು ಯಕ್ಷನಾಟ್ಯ ಅಭಿನವಾಂತ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿನಾಯಕ ಹೆಗಡೆ ಕಲಗದ್ದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ರಾಮಾಯಣ, ಮಹಾಭಾರತದಂಥ ಪುರಾಣಗಳನ್ನು ತಲುಪಿಸಿದ್ದು ಯಕ್ಷಗಾನ. ಭಾಷೆ, ಪ್ರಾಂತ್ಯದ ಹಂಗಿಲ್ಲದ ಯಕ್ಷಗಾನ ವಿಶ್ವಗಾನವಾಗುವ ಅರ್ಹತೆ ಹೊಂದಿರುವಂಥದ್ದು. ನಿಜವಾದ, ಶುದ್ಧವಾದ ಸಂಸ್ಕೃತಿಯ ಯಕ್ಷಗಾನ ಕನ್ನಡ ಭಾಷೆಯನ್ನು ಉಳಿಸಿಕೊಂಡುಬಂದಿರುವಂಥದ್ದು. ಯಕ್ಷಗಾನಕ್ಕೆ ಗೌರವ ತಂದವರಲ್ಲಿ ಕೆರೆಮನೆ ಕುಟುಂಬದ ಕಾರ್ಯ ಮಹತ್ವದ್ದು. ನನ್ನ ಗುರುಗಳಾದ ಶಂಭು ಹೆಗಡೆ ಅವರ ಮಾರ್ಗದರ್ಶನ, ಮಹಾಗಣಪತಿಯ ಆಶೀರ್ವಾದದಿಂದ ೮ ಬಾರಿ ಶಸ್ತ್ರಚಿಕಿತ್ಸೆಯಾದರೂ ಈ ವರೆಗೂ ಯಕ್ಷಗಾನದಲ್ಲಿ ತೊಡಗಿದ್ದೇನೆ. ಗುರು ಶಂಭು ಹೆಗಡೆ ಅವರ ಕಲೆಗೆ ಅಪಮಾನವಾಗದ ಹಾಗೇ ನೋಡಿಕೊಳ್ಳಿ ಎನ್ನುವ ಮಾತನ್ನು ಶಕ್ತಿಮೀರಿ ಪಾಲಿಸಿಕೊಂಡು ಬರುತ್ತಿದ್ದೇನೆ ಎಂದರು.

ಇನ್ನೊರ್ವ ಮುಖ್ಯ ಅತಿಥಿ ಬೆಂಗಳೂರಿನ ಹೆಬ್ರಾನ್‌ನ ಕಾ.ನಿ. ನಿರ್ದೇಶಕ ಪ್ರೀನಂದ್ ಪ್ರೇಮಚಂದ್ರನ್ ಜನ್ಮದಿನವನ್ನು ಈ ರೀತಿ ವಿಶಿಷ್ಟವಾಗಿ ಆಚರಿಸಬಹುದು ಎನ್ನುವುದಕ್ಕೆ ಈ ಕಾರ್ಯಕ್ರಮ ನಿದರ್ಶನ ಎಂದರು.

ಶಂಕರಮಠದ ಧರ್ಮಾಧಿಕಾರಿ ದೊಡ್ಮನೆ ವಿಜಯ ಹೆಗಡೆ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸುಮಾನಸ ಸಂಸ್ಥೆಯ ಸಂಚಾಲಕ ಡಾ. ವಿಘ್ನೇಶ ಭಟ್ ಸ್ವಾಗತಿಸಿದರು. ಇನ್ನೋರ್ವ ಸಂಚಾಲಕಿ ಡಾ. ಸುಮಿತ್ರಾ ಭಟ್ ವಂದಿಸಿದರು. ವಸುಧಾ ಕರಣಿಕ್ ನಿರೂಪಿಸಿದರು.

ಈ ಸಂದರ್ಭದಲ್ಲಿ ಹಲವರನ್ನು ಸನ್ಮಾನ ಹಾಗೂ ಡಾ. ಸುಮಿತ್ರಾ ಭಟ್ ಅವರ ನೆನಪು ಮಾಸುವ ಮುನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮಕ್ಕೂ ಮುನ್ನ ಶಂಕರಮಠದ ಆವರಣದಲ್ಲಿ ಡಾ. ವಿಘ್ನೇಶ ಭಟ್ ಹಾಗೂ ಡಾ. ಸುಮಿತ್ರಾ ಭಟ್ ಅವರ ಪ್ರಾಯೋಜಕತ್ವದಲ್ಲಿ ನಿರ್ಮಿಸಲಾದ ಸಪ್ತಸ್ವರ ಘಂಟಾಮಂಟಪವನ್ನು ದೊಡ್ಮನೆ ವಿಜಯ ಹೆಗಡೆ ಲೋಕಾರ್ಪಣಗೊಳಿಸಿದರು.