ಸಾರಾಂಶ
ಕೊಪ್ಪ: ತಾಲೂಕು ಕಚೇರಿಯಲ್ಲಿ ಸರ್ವರ್ ಸಮಸ್ಯೆ ಯಿಂದ ಅಗತ್ಯವಾದ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ವಿವಿಧ ಗ್ರಾಮಗಳಿಂದ ಒಂದಲ್ಲ ಒಂದು ಕೆಲಸಗಳಿಗೆ ದಿನನಿತ್ಯ ನೂರಾರು ಜನ ಬಂದು ಹೋಗುತ್ತಾರೆ. ಆದರೆ ಸರ್ವರ್ ಸಮಸ್ಯೆಯಿಂದ ಬಂದ ದಾರಿಗೆ ಸುಂಕವಿಲ್ಲವೆಂದು ಹಿಂದಿರುಗುತ್ತಾರೆ. ತಾಲೂಕು ಆಡಳಿತ ಸೌಧದಿಂದ ಹಿಡಿದು ಪ್ರತೀ ಇಲಾಖೆಯಲ್ಲಿರುವ ಸರ್ವರ್ ಸಮಸ್ಯೆಗೆ ಸಾರ್ವಜನಿಕ ವಲಯದಲ್ಲಿ ಬೇಸರ ವ್ಯಕ್ತವಾಗುತ್ತಿವೆ. ಜತೆಗೆ ಕೊಪ್ಪ ತಾಲೂಕು ಕಚೇರಿಗೆ ಬರುವ ತಹಸೀಲ್ದಾರ್ ಪದೇ ಪದೇ ವರ್ಗಾವಣೆಯಾಗುತ್ತಿರುವುದು ಅಭಿವೃದ್ಧಿ ಹಿನ್ನೆಡೆಗೆ ಕಾರಣವಾಗುತ್ತಿದೆ. ಹೆಚ್ಚೆಂದರೆ ೬ ತಿಂಗಳು ಮಾತ್ರ ಕಾರ್ಯನಿರ್ವಹಿಸುವ ಕೊಪ್ಪ ತಾಲೂಕು ತಹಸೀಲ್ದಾರರನ್ನು ಏಕಾಏಕಿ ವರ್ಗಾವಣೆ ಮಾಡಲಾಗುತ್ತಿದೆ. ನೂತನ ತಹಸೀಲ್ದಾರರನ್ನು ತಿಂಗಳು ಕಳೆಯುವ ಮುಂಚೆಯೇ ವರ್ಗಾವಣೆ ಮಾಡಲಾಗಿದೆ. ಈ ಜಾಗಕ್ಕೆ ಬೇರೆ ತಹಸೀಲ್ದಾರ್ ಈವರೆಗೂ ನಿಯೋಜಿಸಿಲ್ಲ. ಆಗಾಗ್ಗೆ ತಹಸೀಲ್ದಾರ್ ಬದಲಾದರೆ ನೂತನ ತಹಸೀಲ್ದಾರ್ ಅಧಿಕಾರ ವಹಿಸಿಕೊಂಡ ಒಂದು ತಿಂಗಳವರೆಗೆ ಯಾವುದೇ ಕೆಲಸ ಕಾರ್ಯ ನಡೆಯಲ್ಲ. ಪ್ರತೀ ಬಾರಿ ತಹಸೀಲ್ದಾರ್ ಬದಲಾವಣೆ ಆದಾಗಲೂ ಈ ಸಮಸ್ಯೆಯಿಂದ ಜನಸಾಮಾನ್ಯರ ಯಾವುದೇ ಕೆಲಸವಾಗದೆ ಪರದಾಡು ವಂತಾಗಿದೆ. ಕೃಷಿ ಪ್ರದಾನ ಪ್ರದೇಶ, ಅತೀ ಹೆಚ್ಚು ಕೂಲಿ ಕಾರ್ಮಿಕರೇ ಇರುವ ಇಲ್ಲಿ ಜನ ಅಗತ್ಯ ಕಾರ್ಯಗಳಿಗಾಗಿ ತಾಲೂಕು ಕಚೇರಿಯನ್ನೇ ಆಶ್ರಯಿಸಿದ್ದು. ಶಾಸಕರು ಸರ್ಕಾರದ ಗಮನ ಸೆಳೆದು ಪದೇ ಪದೆ ತಹಸೀಲ್ದಾರ್ ವರ್ಗಾವಣೆ ತಡೆಯುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.