ಜನಸ್ನೇಹಿ ಆಡಳಿತಕ್ಕಾಗಿ ಶುಕ್ರವಾರ ಸುದಿನ

| Published : Nov 08 2024, 01:18 AM IST / Updated: Nov 08 2024, 01:19 AM IST

ಸಾರಾಂಶ

ಆಡಳಿತ ಯಂತ್ರವನ್ನು ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಜನಜೀವನದ ಮೇಲೆ ನೇರವಾಗಿ ಪರಿಣಾಮ ಉಂಟು ಮಾಡಬಹುದಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ(ಆರ್‌ಡಿಪಿಆರ್)ಯನ್ನು ಮತ್ತಷ್ಟು ಜನರ ಬಳಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ವಿನೂತನ ಯೋಜನೆಯೊಂದನ್ನು ರೂಪಿಸಲಾಗಿದೆ.

ರವಿ ಕಾಂಬಳೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಆಡಳಿತ ಯಂತ್ರವನ್ನು ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಜನಜೀವನದ ಮೇಲೆ ನೇರವಾಗಿ ಪರಿಣಾಮ ಉಂಟು ಮಾಡಬಹುದಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ(ಆರ್‌ಡಿಪಿಆರ್)ಯನ್ನು ಮತ್ತಷ್ಟು ಜನರ ಬಳಿಗೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ವಿನೂತನ ಯೋಜನೆಯೊಂದನ್ನು ರೂಪಿಸಲಾಗಿದೆ.

ವಾರದ ಪ್ರತಿ ಶುಕ್ರವಾರ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮತ್ತು ಗ್ರಾಮ ಆಡಳಿತ ಅಧಿಕಾರಿ (ತಲಾಠಿ) ಅವರನ್ನೊಳಗೊಂಡ ಸ್ಥಳೀಯ ಮಟ್ಟದ ವಿವಿಧ ಇಲಾಖೆಗಳ ಪ್ರಮುಖರು ಒಂದೇ ಸೂರಿನಡಿ ಲಭ್ಯವಿರುವ ಕಾರ್ಯಕ್ರಮ ಜಾರಿಗೆ ಭರದ ಸಿದ್ಧತೆ ನಡೆದಿದೆ.

ಹುಕ್ಕೇರಿ ತಾಲೂಕಿನ 52 ಗ್ರಾಮ ಪಂಚಾಯತಿಗಳಲ್ಲಿ ಶೀಘ್ರವೇ ಜಾರಿಗೊಳಿಸಲು ಉದ್ದೇಶಿಸಿರುವ ಈ ವಿಶಿಷ್ಟ ಯೋಜನೆಗೆ ಶುಕ್ರವಾರ ಸುದಿನ ಎಂದು ಹೆಸರಿಸಲಾಗಿದೆ. ಈ ಹೊಸ ಯೋಜನೆ ಅನುಷ್ಠಾನಕ್ಕೆ ಎಲ್ಲ ಸಿದ್ಧತೆಗಳು ಅಂತಿಮ ಹಂತದಲ್ಲಿದೆ. ಜನರ ಧ್ವನಿಗೆ ಕಿವಿಯಾಗಲು ಮತ್ತು ಪರಿಣಾಮಕಾರಿ ಆಡಳಿತ ಸೇವೆ ಒದಗಿಸುವುದು ಈ ಯೋಜನೆ ಮೂಲ ಉದ್ದೇಶವಾಗಿದೆ.

ಅಧಿಕಾರಿ-ಸಿಬ್ಬಂದಿಯಲ್ಲಿ ಚುರುಕುತನ ಮೂಡಿಸಲು ಸರ್ಕಾರಿ ಸೇವಾದಿನಗಳ ಇತರೆ ದಿನಗಳ ಹೊರತಾಗಿಯೂ ಶುಕ್ರವಾರವನ್ನೇ ವಿಶೇಷ ದಿನವನ್ನಾಗಿ ಆಯ್ದುಕೊಂಡು ಈ ಯೋಜನೆ ಸಾಕಾರಕ್ಕೆ ಮುಂದಡಿ ಇಡಲಾಗಿದೆ. ಇದರೊಂದಿಗೆ ಜನರ ಕೆಲಸ ಮಾಡಿಕೊಡುವಲ್ಲಿ ಗ್ರಾಮೀಣ ಮಟ್ಟದ ಅಧಿಕಾರಿಗಳ ನಿಷ್ಕ್ರಿಯತೆ, ವಿಳಂಬ ಧೋರಣೆ, ಭ್ರಷ್ಟಾಚಾರ ಕಡಿವಾಣಕ್ಕೆ ಹುಕ್ಕೇರಿ ತಾಲೂಕು ಪಂಚಾಯತಿ ಮುಂದಾಗಿದೆ.

ಜನಸ್ಪಂದನ, ಗ್ರಾಮವಾಸ್ತವ್ಯ ಮಾದರಿಯಲ್ಲಿಯೇ ರೂಪುಗೊಂಡಿರುವ ಈ ಯೋಜನೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಹೊಸದೊಂದು ಭಾಷ್ಯ ಬರೆಯಲು ಸೂಕ್ತ ವೇದಿಕೆ ರಚಿಸುವ ಮಹತ್ತರ ಕಾರ್ಯ ನಡೆದಿದೆ. ಹಲವು ಮಹತ್ವಾಕಾಂಕ್ಷೆಗಳನ್ನು ಹೊತ್ತು ಆರಂಭದ ಒಂದೇ ಹೆಜ್ಜೆಗಾಗಿ ಕಾದಿರುವ ಈ ಶುಕ್ರವಾರ ಸುದಿನ ಎಂಬ ವಿಶೇಷ ಯೋಜನೆ ರಾಜ್ಯದ ಇತರೆ ತಾಲೂಕುಗಳಿಗೆ ಮಾದರಿಯಾಗುವ ಸಾಧ್ಯತೆ ಹೆಚ್ಚಿಸಿದೆ.

ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ರಸ್ತೆ, ಚರಂಡಿ, ಕುಡಿಯುವ ನೀರು, ನರೇಗಾ, ಬೀದಿದೀಪ, ವೈದ್ಯಕೀಯ ಸೇವೆ, ಶಾಲೆ-ಅಂಗನವಾಡಿ ದುರಸ್ತಿ, ಸ್ಮಶಾನ, ಪಹಣಿ, ಹದ್ದುಬಸ್ತು, ಅಕ್ರಮ ಮದ್ಯ ಮಾರಾಟ, ಪಿಂಚಣಿ, ಅಕ್ರಮ ಗಣಿಗಾರಿಕೆ, ಗ್ಯಾರಂಟಿ ಯೋಜನೆಗಳು ಹೀಗೆ ಗ್ರಾಮದ ಮೂಲ ಸೌಲಭ್ಯಗಳಿಂದ ಹಿಡಿದು ಇತರೆ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಅವಕಾಶವಿದೆ.

ಜನರ ಸಮಸ್ಯೆಗಳನ್ನು ಆಲಿಸುವ ಮತ್ತು ಸ್ಥಳೀಯದಲ್ಲಿಯೇ ಪರಿಹಾರ ನೀಡುವ ಉದ್ದೇಶದಿಂದ ರೂಪಿಸಿರುವ ಈ ಯೋಜನೆಯಿಂದ ಸಾರ್ವಜನಿಕರಿಗೆ ಅನೇಕ ಸೇವೆಗಳು ಸುಲಭವಾಗಿ ಲಭಿಸುವ ಆಶಾಭಾವ ಮೂಡಿಸಿದೆ. ಜೊತೆಗೆ ಸ್ಥಳೀಯ ಅಧಿಕಾರಿಗಳು ಜನರ ಕೈಗೆ ಸಿಗುತ್ತಿಲ್ಲ ಎಂಬ ಕೂಗು ನಿವಾರಣೆಯಾಗಲಿದೆ.

ಜನರಿಗೆ ಮತ್ತಷ್ಟು ಹತ್ತಿರವಾಗುವ ದಿಸೆಯಲ್ಲಿ ತಾಪಂ ಇಒ ಟಿ.ಆರ್.ಮಲ್ಲಾಡದ ಅವರು ಶುಕ್ರವಾರ ಸುದಿನ ಎಂಬ ಹೊಸ ಪರಿಕಲ್ಪನೆ ಅನುಷ್ಠಾನದ ರೂವಾರಿ ಎನಿಸಿದ್ದಾರೆ. ಬಹುನಿರೀಕ್ಷಿತ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯಲ್ಲಿ ಹೊಸದೊಂದು ಸಂಚಲನ ಮೂಡಿಸಲು ಹುಕ್ಕೇರಿ ತಾಲೂಕು ಪಂಚಾಯಿತಿ ಮಹತ್ವದ ಹೆಜ್ಜೆ ಇಟ್ಟಿದೆ.

ಗ್ರಾಮೀಣ ಜನರ ಅಹವಾಲು ಆಲಿಕೆಗೆ ವಿಶೇಷ ವೇದಿಕೆ ಸಿದ್ಧಗೊಳಿಸಲು ಈ ರೀತಿಯ ಹೊಸದೊಂದು ಚಿಂತನೆ ಕಂಡುಕೊಂಡಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಇಂಥದ್ದೊಂದು ಯೋಜನೆ ಜನರ ಜೀವನಮಟ್ಟ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ನಡುವೆ ಪಿಡಿಒ ಮತ್ತು ವಿಎ ಹುದ್ದೆಗಳ ಕೊರತೆ ನಡುವೆಯೂ ಈ ಯೋಜನೆ ಯಶಸ್ವಿಯಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.ಹುಕ್ಕೇರಿ ತಾಲೂಕಿನ ಎಲ್ಲ ಗ್ರಾಪಂಗಳಲ್ಲಿ ಪಿಡಿಒ ಮತ್ತು ವಿಎ ಅವರನ್ನು ಸೇರಿದಂತೆ ವಿವಿಧ ಇಲಾಖೆಗಳ ಗ್ರಾಮೀಣ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಜನರಿಗೆ ಲಭ್ಯ ಇರುವಂತೆ ಶುಕ್ರವಾರ ಸುದಿನ ಎಂಬ ಕಾರ್ಯಕ್ರಮ ರೂಪಿಸಲಾಗಿದೆ. ಈ ವಿನೂತನ ಯೋಜನೆ ಶೀಘ್ರ ಜಾರಿಗೊಳಿಸಲಾಗುವುದು. ಸರ್ಕಾರದ ವಿವಿಧ ಸೇವೆಗಳನ್ನು ಜನರಿಗೆ ತಲುಪಿಸುವ ಪ್ರಯತ್ನ ನಡೆಯಲಿದೆ.

- ಟಿ.ಆರ್.ಮಲ್ಲಾಡದ, ಇಒ ತಾಪಂ ಹುಕ್ಕೇರಿ