ಹಬ್ಬದ ದಿನವೇ ಮನೆಗೆ ನಾನ್‌ವೆಜ್‌ ತಂದು ತಿಂದ ಸ್ನೇಹಿತನ ಕೊಂದ!

| Published : Oct 30 2025, 04:00 AM IST

ಹಬ್ಬದ ದಿನವೇ ಮನೆಗೆ ನಾನ್‌ವೆಜ್‌ ತಂದು ತಿಂದ ಸ್ನೇಹಿತನ ಕೊಂದ!
Share this Article
  • FB
  • TW
  • Linkdin
  • Email

ಸಾರಾಂಶ

ಹಬ್ಬದ ದಿನದಂದು ಮನೆಗೆ ಮಾಂಸಾಹಾರ ತಂದು ಸೇವಿಸಿದ್ದನ್ನು ಪ್ರಶ್ನಿಸಿದ ಸ್ನೇಹಿತನ ಮೇಲೆ ಕಬ್ಬಿಣದ ರಾಡ್‌ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ ಆರೋಪಿಯನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹಬ್ಬದ ದಿನದಂದು ಮನೆಗೆ ಮಾಂಸಾಹಾರ ತಂದು ಸೇವಿಸಿದ್ದನ್ನು ಪ್ರಶ್ನಿಸಿದ ಸ್ನೇಹಿತನ ಮೇಲೆ ಕಬ್ಬಿಣದ ರಾಡ್‌ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ ಆರೋಪಿಯನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ಮೂಲದ ರಾಜೇಶ್‌ (30) ಬಂಧಿತ. ಈತ ಅ.27ರಂದು ತಡರಾತ್ರಿ ಚಿಕ್ಕಜಾಲದ ನವರತ್ನ ಅಗ್ರಹಾರದಲ್ಲಿ ಬಿಹಾರ ಮೂಲದ ಶಂಭು ತಂತಿ(29) ಎಂಬಾತನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಘಟನೆ ವಿವರ:

ಕೂಲಿ ಕಾರ್ಮಿಕರಾದ ರಾಜೇಶ್‌ ಮತ್ತು ಶಂಭು ತಂತಿ ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಚಿಕ್ಕಜಾಲದ ನವರತ್ನ ಅಗ್ರಹಾರದ ಲೇಬರ್‌ ಶೆಡ್‌ನಲ್ಲಿ ವಾಸವಾಗಿದ್ದರು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಛತ್ ಪೂಜಾ ಹಬ್ಬ ನಡೆಯುತ್ತದೆ. ಈ ವೇಳೆ ಯಾರೂ ಮಾಂಸಾಹಾರ ಸೇವಿಸುವುದಿಲ್ಲ. ಅದರಂತೆ ಶಂಭು ಕೂಡ ಎರಡು ದಿನಗಳಿಂದ ಮಾಂಸಾಹಾರ ಸೇವಿಸದೇ ಮನೆಯಲ್ಲಿ ಪೂಜೆ ಮಾಡಿದ್ದ. ಅ.27ರಂದು ಹಬ್ಬದ ಪ್ರಮುಖ ದಿನವಾದ್ದರಿಂದ ಶಂಭು ಪೂಜೆ ಮಾಡಿ ಮನೆಯಿಂದ ಹೊರಗೆ ಹೋಗಿದ್ದ.

ರೊಚ್ಚಿಗೆದ್ದು ಹತ್ಯೆ:

ಈ ವೇಳೆ ಸ್ನೇಹಿತ ರಾಜೇಶ್‌ ಹೊರಗಿನಿಂದ ಮಾಂಸಾಹಾರ ಪಾರ್ಸೆಲ್‌ ತಂದು ಮನೆಯಲ್ಲೇ ಸೇವಿಸಿದ್ದಾನೆ. ಶಂಭು ಮನೆಗೆ ವಾಪಸ್‌ ಆದ ಬಳಿಕ ಮನೆಯಲ್ಲಿ ರಾಜೇಶ್‌ ಮಾಂಸಾಹಾರ ಸೇವಿಸಿರುವ ವಿಚಾರ ಗೊತ್ತಾಗಿದೆ. ಈ ವಿಚಾರವಾಗಿ ಶಂಭು, ರಾಜೇಶ್‌ನನ್ನು ಪ್ರಶ್ನಿಸಿದ್ದಾನೆ. ಈ ವೇಳೆ ಇಬ್ಬರು ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ರೊಚ್ಚಿಗೆದ್ದ ರಾಜೇಶ್‌ ಕಬ್ಬಿಣದ ರಾಡ್‌ ಮತ್ತು ದೊಣ್ಣೆಯಿಂದ ಶಂಭು ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಶಂಭು ಮೃತಪಟ್ಟಿದ್ದಾನೆ. ಬಳಿಕ ರಾಜೇಶ್‌ ಮನೆಯಿಂದ ಪರಾರಿಯಾಗಿದ್ದ.

ಈ ಸಂಬಂಧ ಚಿಕ್ಕಜಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.