ಮಾಜಿ ಸಚಿವ ದೇಶಪಾಂಡೆ, ವಿಪ ಸದಸ್ಯ ಸುನೀಲ ವಲ್ಯಾಪುರ ಭಾಗಿ
ಕನ್ನಡಪ್ರಭ ವಾರ್ತೆ ಹಳಿಯಾಳಪವಿತ್ರ ರಂಜಾನ್ ಮಾಸದಲ್ಲಿ ಪ್ರೀತಿ, ಸ್ನೇಹ, ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆ ಸಾರುವ ಮಹತ್ವದ ಸದುದ್ದೇಶದಿಂದ ಆಯೋಜಿಸುವ ಇಫ್ತಿಯಾರ್ ಕೂಟವನ್ನು ಗುರುವಾರ ಸಂಜೆ ಪಟ್ಟಣದ ಹೊಸೂರಗಲ್ಲಿಯಲ್ಲಿಯ ನೂರಾನಿ ಮಸೀದಿಯ ಬಳಿ ಆಯೋಜಿಸಲಾಗಿತ್ತು.
ಇಫ್ತಿಯಾರ್ ಕೂಟದಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹಾಗೂ ಚಿಂಚೋಳಿ (ಕಲಬುರಗಿ) ವಿಧಾನಪರಿಷತ್ ಸದಸ್ಯ, ಬಿಜೆಪಿ ಮುಖಂಡ ಸುನೀಲ ವಲ್ಯಾಪುರೆ ಭಾಗವಹಿಸಿ, ಸರ್ವರಿಗೂ ಶುಭಾಶಯ ಕೋರಿದರು. ಮರಾಠ, ಲಿಂಗಾಯತ, ಕ್ರಿಶ್ಚಿಯನ್, ಜೈನ ಸೇರಿದಂತೆ ವಿವಿಧ ಧರ್ಮೀಯರು ಭಾಗವಹಿಸಿ, ಭಾವೈಕ್ಯ ಮೆರೆದರು.ಇಫ್ತಿಯಾರ್ ಕೂಟಕ್ಕೂ ಮೊದಲು ನೂರಾನಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ತದನಂತರ ಮುಸ್ಲಿಂ ಹಾಗೂ ಹಿಂದೂ, ಕ್ರೈಸ್ತ, ಜೈನ ಬಾಂಧವರು ಪರಸ್ಪರ ಶುಭಾಶಯ ಕೋರಿ, ಕೂಟದಲ್ಲಿ ಭಾಗಿಯಾದರು. ಭಾಗಿಯಾದ ಶಾಸಕರನ್ನು ಮುಸ್ಲಿಂ ಮುಖಂಡರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸರ್ವರಿಗೂ ಶುಭಾಶಯ ಕೋರಿದ ಶಾಸಕ ದೇಶಪಾಂಡೆ, ಭಾಂದವ್ಯ ಹಾಗೂ ಸಾಮರಸ್ಯದ ಆವಶ್ಯಕತೆ ಸಮಾಜಕ್ಕಿದೆ. ರಂಜಾನ್ ಪವಿತ್ರ ಮಾಸದಲ್ಲಿ ಆಯೋಜಿಸುವ ಇಫ್ತಿಯಾರ್ ಕೂಟಗಳು ಪರಸ್ಪರ ಬಾಂಧವ್ಯ, ಸಾಮರಸ್ಯ ಹೆಚ್ಚಿಸುತ್ತವೆ ಎಂದರು.
ವಿಪ ಸದಸ್ಯ, ಬಿಜೆಪಿ ಮುಖಂಡ ಸುನೀಲ ವಲ್ಯಾಪುರೆ ಮಾತನಾಡಿ, ಸರ್ವರಿಗೂ ಶುಭವಾಗಲಿ ಎಂದರು.
ಹಿರಿಯ ಉದ್ಯಮಿ, ಸಮಾಜ ಸೇವಕ ಆರ್.ಎಂ. ಬಸರಿಕಟ್ಟಿ ಹಾಗೂ ಅವರ ಪುತ್ರರಾದ ಮುಸ್ಲಿಂ ಯುವ ಮುಖಂಡ ಅಲಿಂ ಬಸರಿಕಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಉದ್ಯಮಿ ಆಶ್ರಫ್ ಬಸರಿಕಟ್ಟಿ ಹಾಗೂ ಅಲ್ತಾಫ್ ಬಸರಿಕಟ್ಟಿ ಇಫ್ತಿಯಾರ್ ಕೂಟ ಆಯೋಜಿಸಿದ್ದರು.ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಮಹಮದ್ ಖಯ್ಯಾಂ ಮುಗದ, ಐಟಿಐ ಪ್ರಾಚಾರ್ಯ ಎಂ.ಎ. ಕಾಗದ, ಯುವ ವಕೀಲ ಸಮೀರ ಕಾಗದ, ಮುಸ್ಲಿಂ ಪ್ರಮುಖರಾದ ರಿಜ್ವಾನ್ ಕಿಲ್ಲೆದಾರ, ರಹೀಸ್ ಕೋಟೂರ, ಫಯಾಜ್ ಶೇಖ್, ಇಮ್ತಿಯಾಜ್ ಶೇಖ್, ಸಿಕಂದರ್ ಮುಜಾವರ, ಯೂಸೂಪ ಜಂಗೂಬಾಯಿ, ಅಜರ್ ಹಲಸಿ, ಆರಿಫ್ ಹಲಸಿ, ಇಮ್ತಿಯಾಜ್ ಮನಿಯಾರ, ನಾರಾಯಣ ಮೂಳೆ, ರವಿ ತೋರಣಗಟ್ಟಿ ಇದ್ದರು.
ತಹಸೀಲ್ದಾರ್ ಫಿರೋಜಷಾ ಸೋಮನಕಟ್ಟಿ, ಸಿಪಿಐ ಜಯಪಾಲ ಪಾಟೀಲ, ಪಿಎಸ್‌ಐ ಬಸವರಾಜ ಮಬನೂರ, ಕೃಷ್ಣ ಅರಕೇರಿ ಇದ್ದರು.