ಇಡೀ ದಿನ ಎಲ್ಲರ ಪರಿಚಯ, ಗುರುಗಳ ನುಡಿ, ವಿದ್ಯಾರ್ಥಿಗಳ ಭಾವ ವ್ಯಕ್ತಪಡಿಸುವ ಮೂಲಕ 30 ವರ್ಷಗಳ ಹಿಂದಿನ ನೆನಪು ಹಂಚಿ ಭಾವುಕ ಕ್ಷಣಗಳು ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದಂತಿತ್ತು.

ಕೊಟ್ಟೂರು: 22ನೇ ವಯಸ್ಸಿನಲ್ಲಿ ಕಾಲೇಜಿನಿಂದ ನಿರ್ಗಮಿಸಿದ ಯುವಕ, ಯುವತಿಯರು ಪುನಃ 30 ವರ್ಷದ ನಂತರ ಒಂದುಗೂಡುತ್ತಾರೆ ಎಂದು ಯಾರೂ ಕನಸು ಮನಸ್ಸಿನಲ್ಲಿ ಅಂದುಕೊಂಡಿರಲಿಲ್ಲ, ವಾಟ್ಸಪ್ ದುರುಪಯೋಗವಾಗುತ್ತಿರುವ ಇಂದಿನ ದಿನಗಳಲ್ಲಿ ವಾಟ್ಸಪ್ಪಿನಿಂದಲೇ ಗುರು, ಶಿಷ್ಯಬಳಗ ಬೆಸೆಯುವ ಮೂಲಕ ಹೊಸ ಮನ್ವಂತರಕ್ಕೆ ಕೊಟ್ಟೂರಿನಲ್ಲಿ ಓದಿರುವ ಹಳೆಯ ವಿದ್ಯಾರ್ಥಿಗಳು ಮುನ್ನುಡಿ ಬರೆದಿದ್ದಾರೆ.

ಕೊಟ್ಟೂರಿನ ಕೊಟ್ಟೂರೇಶ್ವರ ಕಾಲೇಜಿನಲ್ಲಿ 1991ರಲ್ಲಿ ಪಿಯುಸಿಗೆ ದಾಖಲಾಗಿ 1996 ರಲ್ಲಿ ಬಿಎ ಪದವಿ ಮುಗಿಸಿದ ಎಲ್ಲ ವಿದ್ಯಾರ್ಥಿಗಳು ಸ್ನೇಹ ಸಮ್ಮಿಲನದಲ್ಲಿ ಪಾಲ್ಗೊಂಡಿದ್ದು ಅಲ್ಲದೇ ವಿದ್ಯೆ ಕಲಿಸಿದ ಉಪನ್ಯಾಸಕರನ್ನು ಆಹ್ವಾನಿಸಿ ಗುರುವಂದನೆ ಸಲ್ಲಿಸುವ ಮೂಲಕ ಮಾದರಿಯಾದರು. ಇಡೀ ದಿನ ಎಲ್ಲರ ಪರಿಚಯ, ಗುರುಗಳ ನುಡಿ, ವಿದ್ಯಾರ್ಥಿಗಳ ಭಾವ ವ್ಯಕ್ತಪಡಿಸುವ ಮೂಲಕ 30 ವರ್ಷಗಳ ಹಿಂದಿನ ನೆನಪು ಹಂಚಿ ಭಾವುಕ ಕ್ಷಣಗಳು ಎಲ್ಲರ ಕಣ್ಣಾಲಿಗಳನ್ನು ಒದ್ದೆ ಮಾಡಿದಂತಿತ್ತು. ಮರೆಯಾದ ಸ್ನೇಹಿತರು ಹಾಗೂ ಉಪನ್ಯಾಸಕರನ್ನು ಸ್ಮರಿಸುವ ಮೂಲಕ ಧನ್ಯತಾಭಾವ ಮೂಡಿತು. ಬನ್ನಿ ನನ್ನ ಗೆಳೆಯರೇ,..ಗೆಳತಿಯರೇ ಎಂದು ಸ್ವಾಗತಿಸುವ ಹಳೆಯ ವಿದ್ಯಾರ್ಥಿಗಳು ಪುನಃ ತಾನು ಓದಿದ ಕಾಲೇಜು, ಉಪನ್ಯಾಸಕರ ಪಾಠ, ಕಾಲೇಜಿನಲ್ಲಿ ನಡೆದ ಹಾಸ್ಯಪ್ರಸಂಗ ಹಂಚಿಕೊಂಡರು.

ವಿದ್ಯಾರ್ಥಿಗಳೇ ಈಗ ನಿವೃತ್ತಿಯ ಅಂಚಿನಲ್ಲಿದ್ದರೆ ಅವರಿಗೆ ಪಾಠ ಮಾಡಿದ ಉಪನ್ಯಾಸಕರು ಪೂರ್ಣ ಇಳಿವಯಸ್ಸಿನಲ್ಲಿದ್ದರೂ ವಿದ್ಯಾರ್ಥಿಗಳ ಪ್ರೀತಿಗೆ ಮನಸೋತು ಅವರು ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಬಂದು ತಮ್ಮ ವಿದ್ಯಾರ್ಥಿಗಳ ಜತೆಗೆ ಹೆಜ್ಜೆ ಹಾಕಿ ನಮಗೂ ಇನ್ನೂ ಜೀವಚೈತನ್ಯ ಇದೆ ಎಂದು ತೋರಿಸಿಕೊಟ್ಟರು.

ಕಲಬುರಗಿ ವಿಶ್ವವಿದ್ಯಾಲಯದ ವಿಶ್ರಾಂತ ಇತಿಹಾಸ ಉಪನ್ಯಾಸಕ, ಇತಿಹಾಸ ಸಂಶೋಧಕ ಡಾ. ಬಿ.ಸಿ.ಮಹಾಬಲೇಶ್ವರಪ್ಪ ಸ್ನೇಹ ಸಮ್ಮಿಲನ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದ ಶರಣರು ಇಡೀ ದೇಶಕ್ಕೆ ಮೊದಲು ಜಾತಿ ವ್ಯವಸ್ಥೆ ಕಿತ್ತೊಗೆದು ಸಮಾನತೆ ತಂದವರು ಅಂತಹ ಶರಣರ ಜೀವನಗಳ ಆದರ್ಶನ ಇಂದಿನ ಮಕ್ಕಳಿಗೆ ನಾವು ನೀವು ಕಲಿಸಬೇಕಾಗಿದೆ ಎಂದರು.

ಉಪನ್ಯಾಸಕ ಪೂಜಾರ ಕೊಟ್ರಪ್ಪ, ಸಹದೇವಪ್ಪ, ಪಿ.ಡಿ. ಕೆರೂರ್,ಮಹೇಶ್ವರಮೂರ್ತಿ, ಮಸ್ತಾನಪ್ಪ, ಎಸ್. ಶಶಿಕಿರಣ್, ಜಿ.ಬಿ. ನಾಗನಗೌಡ, ಎಂ.ಕೆ. ಗದ್ದಿಗೇಶ್, ಡಾ. ಕುಸುಮಾ ಸಜ್ಜನ್, ಜೆ.ಬಿ. ಸಿದ್ದನಗೌಡ, ನಿರ್ಮಲ ಶಿವನಗುತ್ತಿ, ಬೋಧಕೇತರ ಸಿಬ್ಬಂಧಿ ಮಂಜುನಾಥ, ಕುಬೇರಪ್ಪ, ದೇವರಮನಿ ಕೊಟ್ರೇಶ್, ಕುಸುಮಾ, ಸೊಕ್ಕೆ ನಾಗರಾಜ್, ಶಂಕರಿ, ವೀರಣ್ಣಗಳಿಗೆ ಗುರುವಂದನೆ ಹಳೆಯ ವಿದ್ಯಾರ್ಥಿಗಳು ಸಲ್ಲಿಸಿದರು.

ಸ್ನೇಹ ಸಮ್ಮಿಲನ ಸಮಿತಿಯ ಅಧ್ಯಕ್ಷ ಡಾ. ಎಂ.ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಕೊಟ್ರೇಶ್ ಹರಪನಹಳ್ಳಿ, ತಹಸೀಲ್ದಾರ್ ಕೊರ್ಲಗುಂದಿ ವಿಜಯಕುಮಾರ್ ಆಗಮಿಸಿದ್ದರು.

ಭೀಮಣ್ಣ ಗಜಾಪುರ ಮತ್ತು ಜಯಶ್ರೀ, ಕೌಶಲ್ಯ, ಕೋಡಿಹಳ್ಳಿ ಪ್ರಕಾಶ್ ಕಾಲೇಜ್ ದಿನಗಳ ನೆನಪು ಹಂಚಿಕೊಂಡರು. ಸ್ನೇಹ ಸಮ್ಮಿಲನ ಸಮಿತಿ ಅಧ್ಯಕ್ಷ ಡಾ. ಹರಪನಹಳ್ಳಿ ಕೊಟ್ರೇಶ್, ಕಾರ್ಯದರ್ಶಿ ಎನ್.ಎಂ. ವಾಗೀಶ್, ಸಂಘಟನಾ ಕಾರ್ಯದರ್ಶಿ ಕೋಡಿಹಳ್ಳಿ ಪ್ರಕಾಶ್, ಉಪಾಧ್ಯಕ್ಷ ವಕೀಲ ಸೀತಾರಾಮ್, ಕೆ.ಎಂ. ಸೋಮಶೇಖರ, ಎಂ. ಮೀನಾಕ್ಷಿ, ಖಜಾಂಚಿ ಆರ್. ಶ್ರೀಧರ್, ಸಿ. ಲೋಕೇಶ್, ಸಂಚಾಲಕ ಎನ್. ಕೆಂಚಪ್ಪ, ಓಂಕಾರೇಶ್ವರ ಗೌಡ, ಜಂಬೂರು ಕೊಟ್ರೇಶ್, ಆರ್.ಎಂ. ವೀರಭದ್ರಯ್ಯ, ಸಿ.ಎಂ. ಕೊಟ್ರೇಶ್, ರಂಗನಾಥನಹಳ್ಳಿ ಶ್ರೀನಿವಾಸ್ ಸೇರಿದಂತೆ ನೂರಾರು ಹಳೆಯ ವಿದ್ಯಾರ್ಥಿಗಳು ಹಾಜರಿದ್ದರು.

ಮಂಗನಹಳ್ಳಿ ನಾಗರಾಜ್ ಸ್ವಾಗತಿಸಿದರು. ಎನ್.ಎಂ. ವಾಗೀಶ, ಆರ್.ಶ್ರೀಧರ ನಿರೂಪಿಸಿದರು. ಅಂಬಳಿ ಲೋಕೇಶ್ ಪ್ರಾರ್ಥಿಸಿದರು. ಡಾ. ಹರಪನಹಳ್ಳಿ ಕೊಟ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಂಬೂರು ಕೊಟ್ರೇಶ್ ವಂದಿಸಿದರು.