ಕನ್ನಡಪ್ರಭ ವಾರ್ತೆ ಬೇಲೂರುಹಿಂದಿನ ಚುನಾವಣೆಯಲ್ಲಿ ನಡೆದ ಸೋಲಿನ ತಪ್ಪುಗಳನ್ನು ಅರಿತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಶಿವರಾಂ ಅವರನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡುವ ಮೂಲಕ ಕಾಂಗ್ರೆಸ್ ಪಕ್ಷದ ಒಗ್ಗಟ್ಟನ್ನು ತೋರಿಸಬೇಕು ಎಂದು ಸಂಸದ ಶ್ರೇಯಸ್ ಪಟೇಲ್ ಹೇಳಿದರು.ಪಟ್ಟಣದ ವಿ ಆರ್ ಕನ್ವೆನ್ಷನ್ ಹಾಲ್‌ನಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಮುಂದಿನ ಯಾವುದೇ ಚುನಾವಣೆ ಆಗಿರಲಿ ಕಾಂಗ್ರೆಸ್ ಪಕ್ಷ ಖಂಡಿತವಾಗಿ ಗೆಲ್ಲಲಿದೆ. ಇದರಲ್ಲಿ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಜವಾಬ್ದಾರಿ ಇದೆ. ಬೂತ್ ಮಟ್ಟದ ಏಜೆಂಟರು ಮತ್ತು ಕಾರ್ಯಕರ್ತರೇ ನಮ್ಮ ಪಕ್ಷದ ನಿಜವಾದ ಆಸ್ತಿ. ಗ್ಯಾರಂಟಿ ಯೋಜನೆಗಳ ಕುರಿತು ಕಾರ್ಯಕರ್ತರು ಮನೆಮನೆಗೆ ತೆರಳಿ ಜನರಿಗೆ ಸರಿಯಾದ ಮಾಹಿತಿ ತಲುಪಿಸಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಜನರ ವಿಶ್ವಾಸ ಇನ್ನಷ್ಟು ಹೆಚ್ಚುತ್ತದೆ. ನಮಗೂ ಕೆಲವೆಡೆ ಬೇಸರವಾಗಿದ್ದರೂ, ಎದೆಗುಂದದೆ ಕಾರ್ಯಕರ್ತರ ಬೆನ್ನೆಲುಬಾಗಿ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಸಂಸದರು ತಿಳಿಸಿದರು.ಮಾಜಿ ಸಚಿವ ಬಿ ಶಿವರಾಮ್ ಮಾತನಾಡಿ, ಗ್ಯಾರಂಟಿ ಯೋಜನೆಗಳೇ ಮುಂದಿನ ಚುನಾವಣೆಯ ಆಸ್ತ್ರವಾಗಿದ್ದು ಭೂತ್ ಮಟ್ಟದಿಂದಲೇ ಸಂಘಟನೆ ಬಲಪಡಿಸಿ, ಸಮರ್ಥ ಏಜೆಂಟ್‌ಗಳನ್ನು ನೇಮಕ ಮಾಡಬೇಕು. ಚುನಾವಣೆಯ ದಿನ ಮಾತ್ರವಲ್ಲ, ಇಂದಿನಿಂದಲೇ ಕಾರ್ಯಾರಂಭ ಮಾಡಬೇಕು. ರಾಜ್ಯ ಸರ್ಕಾರ ಅನುಷ್ಠಾನ ತಂದಿರುವ ಐದು ಗ್ಯಾರಂಟಿ ಯೋಜನೆಗಳೇ ಮುಂದಿನ ಎಲ್ಲಾ ಚುನಾವಣೆಗೆ ಅಸ್ತ್ರವಾಗಲಿದೆ. ಆದ್ದರಿಂದ ಕಾರ್ಯಕರ್ತರು ಗ್ಯಾರಂಟಿ ಯೋಜನೆ ಫಲಗಳನ್ನು ಮತದಾರರಿಗೆ ತಿಳಿಸಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಪರಿವರ್ಥಿಸುವ ಕೆಲಸ ಮಾಡಬೇಕು. ಮನೆಮನೆಗೆ ತೆರಳಿ ಮತದಾರರೊಂದಿಗೆ ನೇರ ಸಂಪರ್ಕ ಬೆಳೆಸಬೇಕು ಎಂದರು.ಕೆಪಿಸಿಸಿ ವಕ್ತಾರ ವಿಜಯಕುಮಾರ್ ಮಾತನಾಡಿ, ಇತ್ತೀಚಿನ ಚುನಾವಣಾ ಸೋಲಿನ ಕುರಿತು ಆತ್ಮಪರಿಶೀಲನೆ ಮಾಡಿಕೊಳ್ಳುವುದು ಅಗತ್ಯವಾಗಿದೆ, ನಾವು ಚುನಾವಣೆಯಲ್ಲಿ ಏಕೆ ಸೋತಿದ್ದೇವೆ ಎಂಬುದರ ಕುರಿತು ಗಂಭೀರ ಆತ್ಮ ವಿಮರ್ಶೆ ಮಾಡಬೇಕು. ಈ ಹಿಂದೆ ಒಕ್ಕಲಿಗರ ಹಳ್ಳಿಗಳಲ್ಲಿ ೫ಕ್ಕೆ ೫ ಗೆಲುವು ಸಾಧಿಸಿದ್ದೆವು. ಆದರೆ ಈ ಬಾರಿ ಕೆಲವೆಡೆ ತುಂಬಾ ಹಿನ್ನಡೆ ಅನುಭವಿಸಿದ್ದೇವೆ. ಇಂತಹ ಪರಿಸ್ಥಿತಿ ಮರುಕಳಿಸಬಾರದು ಎಂದರು.ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಶಶಿಧರ್ ಮಾತನಾಡಿ, ನಮ್ಮ ಸ್ವಾರ್ಥಕ್ಕಾಗಿ ಕಾರ್ಯಕರ್ತರನ್ನು ಬಲಿಕೊಡಬಾರದು. ಕಾಂಗ್ರೆಸ್ ಪಕ್ಷವೇ ಒಂದು ಜಾತಿ. ಇಲ್ಲಿ ಎಲ್ಲರೂ ಒಂದೇ ಕುಟುಂಬದವರು. ಕಾರ್ಯಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಬಿ. ಶಿವರಾಂ ಮಾಡುತ್ತಿದ್ದಾರೆ. ಇಂತಹ ನಾಯಕರನ್ನು ಗೆಲ್ಲಿಸಿ ಶಾಸಕರಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ ಆರ್ ವೆಂಕಟೇಶ್ ಮಾತನಾಡಿ, ಒಬ್ಬರಿಂದ ಪಕ್ಷ ಇಲ್ಲ, ಕಾರ್ಯಕರ್ತರೆ ನಿಜವಾದ ಪಕ್ಷದ ಆಧಾರ, ತಮ್ಮ ಸ್ವಪ್ರತಿಷ್ಠೆ ಬದಿಗೊತ್ತಿ ಎಲ್ಲರೂ ಜೊತೆಗೂಡಿ ಹೋರಾಡಿದರೆ ಮಾತ್ರ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯವೆಂದರು.
ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಕೆಪಿಸಿಸಿ ಮಾಜಿ ಸದಸ್ಯ ಧರ್ಮೇಗೌಡ, ಬ್ಲಾಕ್ ಕಾಂಗ್ರೆಸ್ ತಾಲೂಕು ಅಧ್ಯಕ್ಷ ನಿಶಾಂತ್, ಕೆಡಿಪಿ ಸದಸ್ಯೆ ಸೌಮ್ಯ ಆನಂದ್, ತುಳಸೀದಾಸ್, ಬಿ ಸಿ ಸಂತೋಷ್, ಸತೀಶ್, ಮಂಜುನಾಥ್, ಅಬ್ದುಲ್ ಸಮದ್, ಯಮಸಂಧಿ ಪಾಪಣ್ಣ, ಪುರಸಭೆ ಅಧ್ಯಕ್ಷರಾದ ಉಷಾ ಸತೀಶ್, ಸದಸ್ಯರಾದ ಜಮಾಲ್, ಭರತ್, ಗಿರೀಶ್, ಶಾಂತಕುಮಾರ್ ಸೇರಿದಂತೆ ಇತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಗ್ರಾಮ ಪಂಚಾಯ್ತಿ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.==== *ಬಾಕ್ಸ್ ನ್ಯೂಸ್ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೈ ಎನ್ ಕೃಷ್ಣೇಗೌಡ, ಗ್ರಾನೈಟ್ ರಾಜಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಈ ಎಚ್ ಲಕ್ಷ್ಮಣ್, ಕೆ ಪಿ ಶೈಲೇಶ್, ವೈಟಿ ದಾಮೋದರ್, ಮಾದೇಗೌಡ, ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ತೌಫಿಕ್, ಪುನೀತ್, ಪುರಸಭೆ ಸದಸ್ಯರಾದ ದಾನಿ, ಅಶೋಕ್, ಗೈರಾಗಿದ್ದು, ತಾಲೂಕಿನ ಕಾಂಗ್ರೆಸ್ ಪಕ್ಷದಲ್ಲಿ ಈಗಲೂ ಎಲ್ಲವೂ ಸರಿ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬಂತು.