ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸ್ನೇಹ ಮತ್ತು ಬಾಂಧವ್ಯ ಶುದ್ಧ ರೂಪದ್ದಾಗಿದ್ದು ರಕ್ತ ಸಂಬಂಧವಲ್ಲವಾದರೂ ಪ್ರೀತಿಯಿಂದ ಕೂಡಿದೆ. ಯಾವುದೇ ಜಾತಿ, ಬಣ್ಣ, ಜನಾಂಗ, ಸಂಸ್ಕೃತಿಯ ಬೇಧವಿಲ್ಲದೇ ಸ್ನೇಹದ ಬಲವಾದ ಬಂಧ ಮತ್ತು ಪ್ರೀತಿಯ ಪ್ರಾಮುಖ್ಯತೆಯನ್ನು ಸಾರಲು ಸಧ್ಯ ಕುಂಟೋಜಿ ಗ್ರಾಮದ ನಾಗಲಿಂಗಯ್ಯ ರುದ್ರಯ್ಯ ಮಠ ಹಾಗೂ ಮಲಕಪ್ಪ ದೇಸಾಯಿ ಹುಲಬೆಂಚಿ ಸ್ನೇಹಿತರೇ ಸಾಕ್ಷಿ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಹೇಳಿದರು.ಮುದ್ದೇಬಿಹಾಳ ಹಾಗೂ ತಾಲೂಕಿನ ಕುಂಟೋಜಿ ಗ್ರಾಮದ ವ್ಯಾಪ್ತಿಯ ವಿಶಾಲ ಮೈದಾನದಲ್ಲಿ ಸಂಗನಬಸವ ಕಲ್ಯಾಣ ಮಂಟಪ ಲೋಕಾರ್ಪಣೆ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಎಲ್ಲ ಸಂಬಂಧಕ್ಕಿಂತಲೂ ಸ್ನೇಹ ಸಂಬಂಧ ಅತ್ಯಂತ ಪವಿತ್ರ. ನಮಗೆ ಯಾವುದೇ ಸಮಸ್ಯೆಯಿದ್ದರೂ ಅದಕ್ಕೊಂದು ಪರಿಹಾರ ಗೆಳೆಯರ ಬಳಿ ಇರುತ್ತದೆ ಎಂಬ ಬಲವಾದ ನಂಬಿಕೆ. ಸುಖ, ದುಃಖ, ಸಂತೋಷ ನೋವುಗಳಲ್ಲೂ ನಮ್ಮ ಕುಟುಂಬದವರಂತೆ ನಮ್ಮೊಂದಿಗೆ ಇರುವವರು ಸ್ನೇಹಿತರು. ಜಗತ್ತಿನಲ್ಲಿ ಸ್ನೇಹವಿಲ್ಲದ ವ್ಯಕ್ತಿಗಳೇ ಇಲ್ಲ. ಪುರಾಣ ಕತೆಗಳಲ್ಲೂ ಸ್ನೇಹದ ಮಹತ್ವ ಉಲ್ಲೇಖವಿದ್ದು, ಕೃಷ್ಣ-ಕುಚೇಲ, ಕರ್ಣ-ದುರ್ಯೋಧನ, ಕೃಷ್ಣ-ಅರ್ಜುನ ಗೆಳೆತನಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ ಎಂದರು.ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಮಾತನಾಡಿ, ಈ ಭಾಗದ ಜನರಿಗೆ ಸಾಂಸ್ಕೃತಿಕ ಸಮಾರಂಭಗಳಿಗೆ ಮಂಗಲ ಮಂಟಪ ಅಗತ್ಯವಾಗಿತ್ತು. ಸಧ್ಯ ಸ್ನೇಹಿತರಿಬ್ಬರು ಕೂಡಿ ಸುಂದರವಾದ ಮಂಗಲ ಮಂಟಪ ನಿರ್ಮಿಸಿದ್ದು ಅನುಕೂಲವಾಗಿದೆ. ಇದು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದರು.ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು. ತಾಲೂಕಾ ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಬಿ.ಕೆ.ಬಿರಾದಾರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಎಂಜಿನಿಯರ್ ಗುರುರಾಜ ನಾಗೂರ, ರಾಚಪ್ಪ ಜಗಲಿ, ಕುಮಾರ ಸೂಳಿಭಾವಿ, ರವಿ ಜಗಲಿ, ಗುರಲಿಂಗ ಸುಳ್ಳಳ್ಳಿ, ಸಿದ್ದು ಕೋಲಕಾರ, ಭೀಮಣ್ಣ ಹಳ್ಳೂರ, ಗುರುಪಾದ ಹೆಬ್ಬಾಳ, ಮಲ್ಲಿಕಾರ್ಜನ ನಾಟಿಕಾರ, ಮುದುಕಣ್ಣ ಆರೇಶಂಕರ ಸೇರಿ ಹಲವರು ಇದ್ದರು.