21ರಿಂದ ನೀನಾಸಮ್‌ನಲ್ಲಿ ಕಲೆಗಳ ಸಂಗಡ ಮಾತುಕತೆ ವಿನೂತನ ಕಾರ್ಯಕ್ರಮ

| Published : Oct 09 2023, 12:45 AM IST

21ರಿಂದ ನೀನಾಸಮ್‌ನಲ್ಲಿ ಕಲೆಗಳ ಸಂಗಡ ಮಾತುಕತೆ ವಿನೂತನ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ಗಣ್ಯರು ಭಾಗಿ
ಕನ್ನಡಪ್ರಭ ವಾರ್ತೆ ಸಾಗರ ಕಳೆದ ಎರಡೂವರೆ ದಶಕದಿಂದ ಪ್ರತಿವರ್ಷ ಚಲನಚಿತ್ರ-ಸಂಸ್ಕೃತಿ ಶಿಬಿರ ಆಯೋಜಿಸುತ್ತಿದ್ದ ತಾಲೂಕಿನ ಹೆಗ್ಗೋಡಿನ ನೀನಾಸಮ್ ಕಳೆದ ವರ್ಷದಿಂದ ಅದರ ಪರಿಷ್ಕೃತ ರೂಪವಾಗಿ ಕಲೆಗಳ ಸಂಗಡ ಮಾತುಕತೆ ಎಂಬ ವಿನೂತನ ಕಾರ್ಯಕ್ರಮವನ್ನು ಸಂಘಟಿಸುತ್ತಿದೆ. ಈ ವರ್ಷ ಅ.21ರಿಂದ 5 ದಿನ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ನಾಟಕ ವೀಕ್ಷಣೆ, ಹಿಂದುಸ್ತಾನಿ ಸಂಗೀತ, ಜಾನಪದ ಕಲೆ, ಕಾವ್ಯ ಸಾಹಿತ್ಯ ಹಾಗೂ ರಾಜಕೀಯ ಕೃತಿಗಳ ಪ್ರಸ್ತುತಿ, ಯಾಂತ್ರಿಕ ಬುದ್ಧಿಮತ್ತೆಯ ಪಠ್ಯಗಳ ಕುರಿತ ಚರ್ಚೆ, ಚಲನಚಿತ್ರ ಪ್ರದರ್ಶನ, ಕೂಡಿಯಾಟ್ಟಂ ಪ್ರದರ್ಶನ ಮತ್ತು ಇವೆಲ್ಲ ವಿಷಯಗಳ ಮೇಲೆ ಚರ್ಚೆ ಇರಲಿದೆ. ಹಿಂದಿನ ಸಂಸ್ಕೃತಿ ಶಿಬಿರದಲ್ಲಿ ನಡೆಯುತ್ತಿದ್ದ ನಿರ್ದಿಷ್ಟ ವಿಷಯಗಳ ಕುರಿತ ಉಪನ್ಯಾಸ, ಗೋಷ್ಠಿ, ಸಂವಾದಗಳ ಬದಲಾಗಿ ರಂಗಭೂಮಿ, ಸಾಹಿತ್ಯ, ಸಂಗೀತ, ಸಿನಿಮಾ, ಚಿತ್ರಕಲೆ ಮೊದಲಾದ ಕಲಾಪಠ್ಯಗಳ ಪ್ರಸ್ತುತಿ ಮತ್ತು ಅವುಗಳ ಕುರಿತ ಚರ್ಚೆಗೆ ಆದ್ಯತೆ ನೀಡಲಾಗಿದೆ. ಪ್ರತಿದಿನ ಸಂಜೆ ತಿರುಗಾಟ ಮತ್ತು ನೀನಾಸಮ್ ನಾಟಕಗಳು ಸೇರಿದಂತೆ ಕಲಾ ಪ್ರಯೋಗಗಳ ಪ್ರದರ್ಶನ ಇರುತ್ತದೆ. ಸಂಪನ್ಮೂಲ ವ್ಯಕ್ತಿಗಳಾಗಿ ಟಿ.ಪಿ.ಅಶೋಕ, ಜಸವಂತ ಜಾಧವ್, ಕೆ.ಸಚ್ಚಿದಾನಂದನ್, ಅಬ್ದುಲ್ ರಷೀದ್, ಅಥಣಿಯ ಸಂಗನ ಬಸವ ಶಿವಯೋಗಿ ಹರದೇಶಿ ತಂಡ - ದುರ್ಗಾದೇವಿ ನಾಗೇಶಿ ತಂಡ, ರಮೇಶಎಸ್. ಕತ್ತಿ, ಕೆ.ಜಿ. ಕೃಷ್ಣಮೂರ್ತಿ, ಜಯಂತ ಕಾಯ್ಕಿಣಿ, ಎಂ.ಜಿ. ಹೆಗಡೆ, ಪ್ರಿಯಾ ಪುರುಷೋತ್ತಮ, ಎಚ್.ಕೆ. ಶ್ವೇತಾರಾಣಿ, ಪ್ರಶಾಂತ ಪಂಡಿತ, ಕೃಷ್ಣಮೂರ್ತಿ ಹನೂರು, ತಮಿಳು ಸೆಲ್ವಿ, ಸುಂದರ್ ಸಾರುಕ್ಕೈ, ಕಪಿಲಾ ವೇಣು, ಕೆ.ಪಿ.ಲಕ್ಷ್ಮಣ, ವಿವೇಕ ಶಾನಭಾಗ, ವೈ.ಎನ್. ಮದುಸೂದನ, ನಿತ್ಯಾನಂದ ಬಿ. ಶೆಟ್ಟಿ, ಬಿ.ಅಮರ್, ಮಾಧವ ಚಿಪ್ಪಳಿ, ಬಿ.ಆರ್.ವೆಂಕಟರಮಣ ಐತಾಳ, ಬಿ.ಟಿ.ಜಾಹ್ನವಿ, ವಿದ್ಯಾ ಹೆಗಡೆ ಮೊದಲಾದವರು ಪಾಲ್ಗೊಳ್ಳಲಿದ್ದಾರೆ. ಪ್ರದರ್ಶನಗೊಳ್ಳುವ ನಾಟಕಗಳು: ಪ್ರತಿದಿನ ಸಂಜೆ 7 ಗಂಟೆಯಿಂದ ಶಿವರಾಮ ಕಾರಂತ ರಂಗಮಂದಿರದಲ್ಲಿ ನಾಟಕಗಳ ಪ್ರದರ್ಶನ ನಡೆಯಲಿದೆ. ಅ.21ರಂದು ಕೆ.ಜಿ. ಕೃಷ್ಣಮೂರ್ತಿ ನಿರ್ದೇಶನದ ನೀನಾಸಮ್ ತಿರುಗಾಟದ ನಾಟಕ ಹುಲಿಯ ನೆರಳು, 22ರಂದು ಎಚ್.ಕೆ. ಶ್ವೇತಾರಾಣಿ ನಿರ್ದೇಶನದ ತಿರುಗಾಟದ ನಾಟಕ ಆ ಲಯ ಈ ಲಯ, 23ರಂದು ಬಿ.ಆರ್. ವೆಂಕಟರಮಣ ಐತಾಳ ನಿರ್ದೇಶನದ ನೀನಾಸಮ್ ನಾಟಕ ರಕ್ತಾಕ್ಷಿ, 24ರಂದು ಕೆ.ಪಿ.ಲಕ್ಷ್ಮಣ ನಿರ್ದೇಶನದ ಆಹ್ವಾನಿತ ನಾಟಕ, 25ರಂದು ಸಪನ್ ಶರಣ್ ನಿರ್ದೇಶನದ ಸೇಮ್ ಸೇಮ್ ಬಟ್ ಡಿಫರೆಂಟ್ ಆಹ್ವಾನಿತ ನಾಟಕಗಳು ಪ್ರದರ್ಶನಗೊಳ್ಳಲಿದೆ. - - - -8ಕೆ.ಎಸ್.ಎ.ಜಿ.2: