ಸಾರಾಂಶ
ಬೆಂಗಳೂರು : ಅತಿ ಕಡಿಮೆ ಸಂಖ್ಯೆಯ ರೋಗಿಗಳು ಬರುವ ನಮ್ಮ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ವಾಸ್ತವ ಸಮಸ್ಯೆ ಅರಿತು, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ವಲಯವಾರು ತಂಡ ರಚಿಸಲಾಗಿದ್ದು, ಸೋಮವಾರದಿಂದ ಪರಿಶೀಲನೆ ಆರಂಭಗೊಳ್ಳಲಿದೆ.
ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಆರಂಭಗೊಂಡ 222 ನಮ್ಮ ಕ್ಲಿನಿಕ್‌ಗಳ ಪೈಕಿ 10 ಕ್ಲಿನಿಕ್‌ಗಳಲ್ಲಿ ದಿನಕ್ಕೆ ಚಿಕಿತ್ಸೆ ಪಡೆಯುತ್ತಿರುವ ರೋಗಳ ಸಂಖ್ಯೆ ಎರಡಂಕಿಯನ್ನೂ ತಲುಪುತ್ತಿಲ್ಲ ಎಂಬುದರ ಕುರಿತು ‘ಕನ್ನಡಪ್ರಭ’ ನ.15 ರಂದು ‘ಹತ್ತು ನಮ್ಮ ಕ್ಲಿನಿಕ್‌ಗಳಲ್ಲಿ ರೋಗಿಗಳ ಕೊರತೆ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು.
ಇದರಿಂದ ಎಚ್ಚೆತ್ತುಕೊಂಡ ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳು ವಲಯ ವಾರು ತಂಡಗಳನ್ನು ರಚನೆ ಮಾಡಿಕೊಂಡು ಅತಿ ಕಡಿಮೆ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ನಮ್ಮ ಕ್ಲಿನಿಕ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಕ್ಕೆ ಮುಂದಾಗಿದ್ದಾರೆ.
ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ವಲಯವಾರು ತಂಡ ರಚನೆ ಮಾಡಿಕೊಳ್ಳಲಾಗಿದೆ. ಪಾಲಿಕೆ ಸಾರ್ವಜನಿಕ ವಿಭಾಗದ ಮುಖ್ಯ ಆರೋಗ್ಯಾಧಿಕಾರಿ, ವಲಯ ಮಟ್ಟದ ಆರೋಗ್ಯ ವಿಭಾಗದ ಅಧಿಕಾರಿಗಳನ್ನು ತಂಡದ ಸದಸ್ಯರಾಗಿ ನೇಮಕ ಮಾಡಿಕೊಳ್ಳಲಾಗಿದೆ.
ಸೋಮವಾರದಿಂದ ಭೇಟಿ:
ನ.25ರ ಸೋಮವಾರದಿಂದ ಪರಿಶೀಲನೆ ಆರಂಭಿಸಲಾಗುತ್ತಿದ್ದು, ಪರಿಶೀಲನೆ ವೇಳೆ ಯಾಕೆ ರೋಗಿಗಳು ನಮ್ಮ ಕ್ಲಿನಿಕ್‌ಗೆ ಬರುತ್ತಿಲ್ಲ, ಸಿಬ್ಬಂದಿ ಸಮಸ್ಯೆಯೇ, ಔಷಧಿ ಕೊರತೆಯೇ?, ನಮ್ಮ ಕ್ಲಿನಿಕ್ ಇರುವ ಸ್ಥಳದ ಸರಿಯಾಗಿಲ್ಲವೇ, ರೋಗಿಗಳಿಗೆ ಸಿಬ್ಬಂದಿಯ ಸ್ಪಂದನೆಯ ಲೋಪ ಇದೆಯೇ ಸೇರಿ ವಿವಿಧ ಅಂಶಗಳನ್ನು ಇಟ್ಟುಕೊಂಡು ಮಾಹಿತಿ ಸಂಗ್ರಹಿಸಲಾಗುವುದು. ಆ ನಂತರ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ತಿಳಿಸಿದ್ದಾರೆ.