ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಡಿಜಿಟಲ್ ಎನ್ನುವುದು ಇಂದಿನ ಅಪಾಯಕಾರಿ ವ್ಯಸನವಾಗಿದೆ. ಇದರಿಂದ ಮನುಷ್ಯರ ವರ್ತನೆಗಳೇ ಬದಲಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಈ ಡಿಜಿಟಲ್ ವ್ಯಸನದಿಂದ ಹೊರಬರುವುದು ನಮ್ಮ ಪ್ರಸ್ತುತದ ಆಯ್ಕೆಯಾಗಬೇಕು ಎಂದು ಎಚ್‌ಎಎಲ್‌ನ ನಿವೃತ್ತ ಚೀಫ್ ಡಿಸೈನರ್ ನೇಮಿಚಂದ್ರ ಸಲಹೆ ನೀಡಿದರು.ನಗರದ ಗಾಂಧಿ ಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆಯಿಂದ ನಡೆದ ನೂತನ ಮಾದರಿ ಪ್ರಶ್ನೆ ಪತ್ರಿಕೆ, ನೀಲನಕ್ಷೆ ಅನ್ವಯಿಕತೆ ಕಾರ್ಯಾಗಾರದಲ್ಲಿ ಆಧುನಿಕ ಬದುಕಿನ ತಲ್ಲಣಗಳಿಗೆ ಆಯ್ಕೆಗಳೇ ಮುಖ್ಯ ಕುರಿತು ಉಪನ್ಯಾಸ ನೀಡಿದರು.
ಡಿಜಿಟಲ್ ವ್ಯಸನದಿಂದ ಮಕ್ಕಳೂ ಸೇರಿದಂತೆ ವಿದ್ಯಾವಂತರು, ವಯಸ್ಕರ ವರ್ತನೆಯಲ್ಲಿ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ತಾವು ಡಿಜಿಟಲ್ ವ್ಯಸನಕ್ಕೆ ಒಳಗಾಗಿದ್ದೇವೆ ಎಂಬ ಅರಿವೇ ಜನರಿಗಿಲ್ಲದಂತಾಗಿದೆ. ಮಕ್ಕಳೂ ಈ ವ್ಯಸನದಿಂದ ಜೀವಕ್ಕೇ ಅಪಾಯ ತಂದುಕೊಳ್ಳುತ್ತಿದ್ದಾರೆ. ಅಪರಾಧ ಕೃತ್ಯದಲ್ಲೂ ತೊಡಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.ಮನುಷ್ಯನ ಮಿದುಳಿನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇಂತಹ ಅಪಾಯಕಾರಿ ವ್ಯಸನದಿಂದ ಪಾರಾಗುವ ದಾರಿಗಳು, ಆಯ್ಕೆಗಳಿದ್ದರೂ ಅವುಗಳತ್ತ ಯೋಚಿಸುವುದಕ್ಕೆ ಯಾರೊಬ್ಬರೂ ಮುಂದಾಗುತ್ತಿಲ್ಲ. ಬದುಕು ಎನ್ನುವುದು ಎಲ್ಲದಕ್ಕಿಂತ ಮುಖ್ಯವಾಗಿರುವುದರಿಂದ ಬದುಕಿನ ಕಡೆಗೆ ಯೋಚಿಸುವುದನ್ನು ಎಲ್ಲರೂ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆಯ್ಕೆಗಳು ಬದುಕನ್ನು ಬದಲಿಸಬಲ್ಲವು:ಜೀವನದಲ್ಲಿ ನಮ್ಮ ನಿರ್ಧಾರಗಳು ಮತ್ತು ಆಯ್ಕೆಗಳು ನಮ್ಮ ಬದುಕನ್ನೇ ಬದಲಿಸುತ್ತವೆ. ಮನೋಬಲ, ಆತ್ಮವಿಶ್ವಾಸ, ನಂಬಿಕೆ ಇದ್ದಾಗ ಮಹತ್ವವಾದುದನ್ನು ಸಾಧಿಸಲು ಪ್ರೇರಣೆ ನೀಡುತ್ತದೆ. ದೇಹದ ಅಂಗಾಂಗಳನ್ನು ಕಳೆದುಕೊಂಡಿದ್ದರೂ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಸಾಧನೆ ಮಾಡಿದವರು ನಮ್ಮ ಕಣ್ಣೆದುರಿಗಿದ್ದಾರೆ. ಕುರುಡರಾಗಿದ್ದರೂ ಕಡುಬಡತನದಿಂದ ಮೇಲೆದ್ದು ಮಲ್ಟಿ ನ್ಯಾಷನಲ್ ಕಂಪನಿಗಳನ್ನು ತೆರೆದು ಸಾವಿರಾರು ಕುರುಡರಿಗೆ ಉದ್ಯೋಗ ನೀಡಿ ಉದ್ಯೋಗದಾತರಾಗಿರುವವರಿದ್ದಾರೆ. ಅರ್ಧ ದೇಹವನ್ನಿಟ್ಟುಕೊಂಡು ಯಾರೆದುರೂ ಕೈಚಾಚದೆ ಸ್ವಾವಲಂಬಿ ಜೀವನವನ್ನು ಮುನ್ನಡೆಸುತ್ತಿರುವ ಜೀವನೋತ್ಸಾಹಿಗಳೂ ನಮ್ಮೊಂದಿಗೆ ಇದ್ದಾರೆ. ಅವರೆಲ್ಲರ ಜೀವನ ನಮಗೆ ಮಾದರಿಯಾಗಬೇಕು ಎಂದರು.
ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸಬೇಕು. ಸೋಲುಗಳನ್ನು ಬದುಕಿನ ಪಾಠಗಳು ಎಂದು ಭಾವಿಸಬೇಕು. ಸವಾಲುಗಳನ್ನು ಸಮರ್ಥವಾಗಿ ಎದುರಿಸಿ, ಸೋಲು ಕಲಿಸಿದ ಪಾಠದಿಂದ ಮತ್ತೆ ಪುಟಿದೆದ್ದು ನಿಲ್ಲುವ ಸಾಮರ್ಥ್ಯವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಬದುಕಿನಲ್ಲಿ ನಾವು ಮಾಡುವ ಆಯ್ಕೆಗಳು, ನಿರ್ಧಾರಗಳು ಸಕಾರಾತ್ಮಕವಾಗಿದ್ದಾಗ ನಮ್ಮ ಬದುಕನ್ನು ಉಜ್ವಲವಾಗಿ ರೂಪಿಸಿಕೊಳ್ಳಬಹುದು ಎಂದರು.ಭಯ, ಆತಂಕಗಳೇ ದೌರ್ಬಲ್ಯಗಳು:
ನಮ್ಮಲ್ಲಿರುವ ಆತಂಕ, ಭಯವೇ ದೌರ್ಬಲ್ಯಗಳು. ಅದನ್ನು ದೂರ ಮಾಡಿಕೊಳ್ಳಬೇಕು. ನಮ್ಮ ಜವಾಬ್ದಾರಿಯನ್ನು ಬೇರೊಬ್ಬರ ಹೆಗಲಿಗೆ ಹೊರಿಸದೆ ನಾವೇ ಅದನ್ನು ನಿಭಾಯಿಸಬೇಕು. ಪ್ರತಿಯೊಂದು ಸಮಸ್ಯೆಗಳಿಗೆ ಪರಿಹಾರವೆಂಬುದು ಇದ್ದೇ ಇರುತ್ತದೆ. ಅವುಗಳಿಗೆ ಪರಿಹಾರ ಹುಡುಕಲು ಹೊರಟರೆ ಹತ್ತು ಹಲವು ದಾರಿಗಳು ಪ್ರತ್ಯಕ್ಷವಾಗುತ್ತವೆ. ಜೀವನದಲ್ಲಿ ಏರು-ಪೇರುಗಳು ಎದುರಾಗುವುದು ಸಹಜ. ಅವುಗಳಿಗೆ ಅಂಜಿ ಕೂರಬಾರದು. ನಂಬಿಕೆ, ವಿಶ್ವಾಸ, ಮನೋಬಲದಿಂದ ಎದುರಿಸಿ ಸಕಾರಾತ್ಮಕ ಚಿಂತನೆಗಳಿಂದ ಮಾನಸಿಕ ಸ್ಥೈರ್ಯವನ್ನು ಹೆಚ್ಚಿಸಿಕೊಳ್ಳುವಂತೆ ಹೇಳಿದರು.ಆತ್ಮಹತ್ಯೆ ಎಂದಿಗೂ ಪರಿಹಾರವಲ್ಲ:
ಜೀವನದಲ್ಲಿ ಎದುರಾಗುವ ಸಮಸ್ಯೆ-ಸವಾಲುಗಳನ್ನು ಎದುರಿಸಲಾಗದೆ ವಿದ್ಯಾವಂತ ಯುವಜನರೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕ್ಷುಲ್ಲಕ ಕಾರಣಗಳಿಗೆ ಬದುಕನ್ನೇ ಕಳೆದುಕೊಳ್ಳುತ್ತಿದ್ದಾರೆ. ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ ಎಂದ ನೇಮಿಚಂದ್ರ, ಜೀವನ ಎಂಬುದು ವಿಶಾಲವಾಗಿದೆ. ಅದನ್ನು ವಿಶಾಲ ದೃಷ್ಟಿಕೋನದಿಂದ ನೋಡಬೇಕು. ಸಾಧಕರ ಪುಸ್ತಕಗಳನ್ನು ಓದುವುದರ ಮೂಲಕ, ಅನುಸರಿಸುವ ಮೂಲಕ ನಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಬೇಕು. ಅಮೂಲ್ಯವಾಗಿ ಸಿಕ್ಕಿರುವ ಜೀವನವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಲೋಕೇಶ್ ಬೆಕ್ಕಳಲೆ ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ್ತಿ ಪಿ.ಗೌರಮ್ಮ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಂಶುಪಾಲರ ಸಂಘದ ಅಧ್ಯಕ್ಷ ಯು.ಎಸ್.ನಟರಾಜು, ಉಪನ್ಯಾಸಕರ ವೇದಿಕೆ ಗೌರವಾಧ್ಯಕ್ಷ ಎಸ್.ಚಂದ್ರಶೇಖರಯ್ಯ ಉಪಸ್ಥಿತರಿದ್ದರು.