ವಿಜ್ಞಾನ ಪ್ರದರ್ಶನಗಳು ಕೇವಲ ಮಾದರಿಗಳ ಪ್ರದರ್ಶನವಲ್ಲ, ಯುವ ಮನಸ್ಸುಗಳ, ಸೃಜನಶೀಲ ಚಿಂತನೆಯ ಮತ್ತು ಭವಿಷ್ಯದ ಸಾಧ್ಯತೆಗಳಾಗಿವೆ. ಪ್ರತಿಯೊಂದು ಮಾದರಿಯು ಒಂದು ಪ್ರಶ್ನೆ, ಪ್ರಯೋಗವು ಒಂದು ಅನ್ವೇಷಣೆಯನ್ನು ಪ್ರತಿನಿಧಿಸುತ್ತದೆ.
ಧಾರವಾಡ:
ವಿಜ್ಞಾನ ಪ್ರದರ್ಶನಗಳು ಕೇವಲ ಮಾದರಿಗಳ ಪ್ರದರ್ಶನವಲ್ಲ, ಯುವ ಮನಸ್ಸುಗಳ, ಸೃಜನಶೀಲ ಚಿಂತನೆಯ ಮತ್ತು ಭವಿಷ್ಯದ ಸಾಧ್ಯತೆಗಳಾಗಿವೆ. ಪ್ರತಿಯೊಂದು ಮಾದರಿಯು ಒಂದು ಪ್ರಶ್ನೆ, ಪ್ರಯೋಗವು ಒಂದು ಅನ್ವೇಷಣೆಯನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ನಾವೀನ್ಯತೆಯು ಉತ್ತಮ ಭವಿಷ್ಯದತ್ತ ಇಡುವ ಒಂದು ಹೆಜ್ಜೆಯನ್ನು ಪ್ರತಿನಿಧಿಸುವ ಮೂಲಕ ಪ್ರಯೋಗದಿಂದ ಪ್ರಗತಿಯತ್ತ ಕೊಂಡುಯ್ಯುತ್ತದೆ ಎಂದು ಡಯಟ್ ಪ್ರಚಾರ್ಯ ಜೆ.ಜಿ. ಸೈಯದ್ ಹೇಳಿದರು.ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿದ ಅವರು, ವಿಜ್ಞಾನ ಪ್ರದರ್ಶನಗಳು ಸೃಜನಶೀಲತೆ ಮತ್ತು ನಾವೀನ್ಯತೆ ಬೆಳೆಸುತ್ತದೆ. ಹೊಸ ಮಾದರಿ ವಿನ್ಯಾಸಗೊಳಿಸಲು, ವಿಭಿನ್ನ ಆಲೋಚನೆ ರೂಪಿಸಲು ಮತ್ತು ನೈಜ ಜೀವನದ ಸಮಸ್ಯೆಗಳಿಗೆ ಸೃಜನಾತ್ಮಕ ಪರಿಹಾರ ಕಂಡುಕೊಳ್ಳಲು ಪ್ರೇರೇಪಿಸುತ್ತದೆ. ಮಾಡುತ್ತಾ ಕಲಿಯುವ ಅನುಭವ ನೀಡುತ್ತದೆ. ಕೇವಲ ಕಂಠಪಾಠಕ್ಕೆ ಸೀಮಿತವಾಗದೆ, ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಆಳವಾದ ಜ್ಞಾನ ಪಡೆಯಲು ಸಹಾಯ ಮಾಡುತ್ತದೆ ಎಂದರು.
ಹಿರಿಯ ಉಪನ್ಯಾಸಕ ದೀಪಕ ಕುಲಕರ್ಣಿ ಮಾತನಾಡಿ ವಿದ್ಯಾರ್ಥಿಗಳಿಗೆ ತಮ್ಮ ತರಗತಿಯ ಕಲಿಕೆ ಪ್ರಾಯೋಗಿಕವಾಗಿ ಅನ್ವಯಿಸಲು ಹಾಗೂ ಹೊಸ ಆಲೋಚನೆಗಳನ್ನು ಮಾದರಿಗಳ ರೂಪದಲ್ಲಿ ವ್ಯಕ್ತಪಡಿಸಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಎದುರಾಗುವ ಸಮಸ್ಯೆ ಗುರುತಿಸಿ, ಅವುಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವತ್ತ ದೃಷ್ಟಿಹರಿಸಬೇಕು ಎಂದು ಹೇಳಿದರು.ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಗಣಕಯಂತ್ರ ವಿಜ್ಞಾನ, ಭೂಮಿ ಮತ್ತು ಬಾಹ್ಯಾಕಾಶ ವಿಜ್ಞಾನ, ಪರಿಸರ ವಿಜ್ಞಾನ, ಎಂಜಿನಿಯರಿಂಗ್, ಜೈವಿಕ ವಿಜ್ಞಾನ, ಜೀವರಸಾಯನಶಾಸ್ತ್ರ ವಿಷಯಗಳನ್ನಾಧರಿಸಿದ ಮಾದರಿಗಳು ಪ್ರದರ್ಶನಗೊಂಡವು. ಈ ಮಾದರಿಗಳು ವಿದ್ಯಾರ್ಥಿಗಳ ತಾಂತ್ರಿಕ ಜ್ಞಾನ ಮತ್ತು ಅನ್ವೇಷಣಾ ಸಾಮರ್ಥ್ಯವನ್ನು ಪ್ರತಿಬಿಂಬಿಸಿದವು.
ವಿಜ್ಞಾನ ನಾಟಕದಲ್ಲಿ ಅಣ್ಣಿಗೇರಿಯ ಶ್ರೀಅಮೃತೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ರಾಜೇಶ್ವರಿ ಗುದ್ದಲ್ ಹಾಗೂ ತಂಡ, ವಿಜ್ಞಾನ ವಸ್ತುಪ್ರದರ್ಶನದ ವೈಯಕ್ತಿಕ ವಿಭಾಗದಲ್ಲಿ ಧಾರವಾಡದ ಪ್ರಜೆಂಟೇಷನ್ ಸ್ಕೂಲ್ನ ಅನುಶ್ರೀ ರಾಜೂರ ಪ್ರಥಮ, ಗುಂಪು ವಿಭಾಗದಲ್ಲಿ ಕಲಘಟಗಿಯ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಗಾಯತ್ರಿ ಹೊನ್ನಳ್ಳಿ ಹಾಗೂ ಶ್ರುತಿ ಕುಬಸದ ಪ್ರಥಮ, ಶಿಕ್ಷಕರ ವಿಭಾಗದಲ್ಲಿ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪದ ಸರ್ಕಾರಿ ಆದರ್ಶ ಶಾಲೆಯ ಎಂ.ಎನ್ ಲೋಹಾನಿ ಪ್ರಥಮ ಸ್ಥಾನ ಪಡೆದರು.