ಅರಣ್ಯ ಸಂಪತ್ತು ಮತ್ತು ಜೀವ ವೈವಿಧ್ಯದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಜತೆಗೆ ಪರಿಸರ ಸಂರಕ್ಷಣೆಯ ಕಾಳಜಿ ಮೂಡಿಸುವ ಉದ್ದೇಶದಿಂದ ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಕಾಡಿನಿಂದ ಕಾಲೇಜಿಗೆ’ ಎಂಬ ಶೀರ್ಷಿಕೆಯಡಿ ಅರಣ್ಯ ವಸ್ತು ಪ್ರದರ್ಶನ ನಡೆಯಿತು.
ಕಾರ್ಕಳ ; ಅರಣ್ಯ ಸಂಪತ್ತು ಮತ್ತು ಜೀವ ವೈವಿಧ್ಯದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಜತೆಗೆ ಪರಿಸರ ಸಂರಕ್ಷಣೆಯ ಕಾಳಜಿ ಮೂಡಿಸುವ ಉದ್ದೇಶದಿಂದ ಹೆಬ್ರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಕಾಡಿನಿಂದ ಕಾಲೇಜಿಗೆ’ ಎಂಬ ಶೀರ್ಷಿಕೆಯಡಿ ಅರಣ್ಯ ವಸ್ತು ಪ್ರದರ್ಶನ ನಡೆಯಿತು.
ಹೆಬ್ರಿ ಅರಣ್ಯ ವಲಯ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್‌ಎಸ್‌ಎಸ್ ಘಟಕದ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಗಿಡ ನೆಡುವ ಮೂಲಕ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಅರಣ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ. ಯುವಜನರಲ್ಲಿ ಪರಿಸರ ಕಾಳಜಿ ಬೆಳೆಸುವ ಮೂಲಕ ಅರಣ್ಯ ಸಂಪತ್ತಿನ ರಕ್ಷಣೆಗೆ ಕೈಜೋಡಿಸಬೇಕು. ಅರಣ್ಯ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.ಹೆಬ್ರಿ ವಲಯ ಅರಣ್ಯಾಧಿಕಾರಿ ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕಾಡಿನಿಂದ ಕಾಲೇಜಿಗೆ’ ಪರಿಕಲ್ಪನೆಯ ಉದ್ದೇಶ ಹಾಗೂ ಅರಣ್ಯದ ಮಹತ್ವವನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ವಿದ್ಯಾಧರ ಹೆಗ್ಡೆ ಎಸ್. ಅವರು ಅರಣ್ಯ ಮತ್ತು ಮಾನವ ಬದುಕಿನ ನಡುವಿನ ನಿಕಟ ಸಂಬಂಧ ಹಾಗೂ ಅರಣ್ಯ ಪ್ರದೇಶದಂಚಿನ ಜನರ ಜೀವನಾನುಭವಗಳ ಕುರಿತು ಮಾತನಾಡಿದರು.ಎನ್‌ಎಸ್‌ಎಸ್ ಅಧಿಕಾರಿ ಪ್ರವೀಣ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುಷ್ಮಾ ರಾವ್, ಐಕ್ಯೂಎಸಿ ಸಂಚಾಲಕ ಡಾ. ಗಣೇಶ್ ಎಸ್., ಅರಣ್ಯ ಇಲಾಖೆ ಅಧಿಕಾರಿಗಳು, ಕಾಲೇಜಿನ ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅರಣ್ಯ ಸಂಪತ್ತು, ಜೀವವೈವಿಧ್ಯ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ವಸ್ತುಗಳ ಪ್ರದರ್ಶನವು ವಿದ್ಯಾರ್ಥಿಗಳಿಗೆ ಕಾಡಿನ ಮಹತ್ವದ ಕುರಿತು ಪ್ರಾಯೋಗಿಕ ಅರಿವು ಮೂಡಿಸಿತು.