ಇಂದಿನಿಂದ ನರೇಗಲ್ಲಿಗೂ ಬಂತು ಮೂರನೇ ಕಣ್ಣು!

| Published : Mar 01 2024, 02:19 AM IST

ಸಾರಾಂಶ

ಪೊಲೀಸ್ ಇಲಾಖೆಯ ಮೂರನೇ ಕಣ್ಣು (ಥರ್ಡ್ ಐ) ಮಾರ್ಚ್ 1ರಿಂದ ನರೇಗಲ್ಲಿನಲ್ಲಿಯೂ ಕಾರ್ಯಾರಂಭ ಮಾಡಲಿದ್ದು, ಅದು ನಿಮ್ಮನ್ನೇ ನೋಡಲಿದೆ ಎಂದು ರೋಣ ಸಿಪಿಐ ಎಸ್. ಎಸ್. ಬೀಳಗಿ ಹೇಳಿದರು.

ನರೇಗಲ್ಲ: ಪೊಲೀಸ್ ಇಲಾಖೆಯ ಮೂರನೇ ಕಣ್ಣು (ಥರ್ಡ್ ಐ) ಮಾರ್ಚ್ 1ರಿಂದ ನರೇಗಲ್ಲಿನಲ್ಲಿಯೂ ಕಾರ್ಯಾರಂಭ ಮಾಡಲಿದ್ದು, ಅದು ನಿಮ್ಮನ್ನೇ ನೋಡಲಿದೆ ಎಂದು ರೋಣ ಸಿಪಿಐ ಎಸ್. ಎಸ್. ಬೀಳಗಿ ಹೇಳಿದರು.

ನರೇಗಲ್ಲದ ದುರ್ಗಾ ವೃತ್ತದಲ್ಲಿ ಅವರು ಇಂದು ವಾಹನ ಸವಾರರಿಗೆ ಗುಲಾಬಿ ಹೂ ನೀಡಿ ಈ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾಳೆಯಿಂದ ನರೇಗಲ್ಲ ಪಟ್ಟಣದಲ್ಲಿ ವಾಹನ ಸವಾರರು ಯಾರೂ ಹೆಲ್ಮೆಟ್ ಧರಿಸದೆ ಹೊರಗೆ ಬರುವಂತಿಲ್ಲ. ಒಂದು ವೇಳೆ ನೀವೇನಾದರೂ ಹೆಲ್ಮೆಟ್ ಇಲ್ಲದೆ ವಾಹನ ಚಾಲನೆ ಮಾಡುವ ದೃಶ್ಯ ಈ ಥರ್ಡ್ ಐ ಕ್ಯಾಮೆರಾದಲ್ಲಿ ಸೆರೆಯಾದರೆ ನೇರವಾಗಿ ನಿಮ್ಮ ವಿಳಾಸಕ್ಕೆ 500 ರುಪಾಯಿ ದಂಡ ಕಟ್ಟುವ ನೋಟಿಸ್ ಬರುತ್ತದೆ. ನೀವೇನಾದರೂ ಬೇರೆಯವರಿಗೆ ವಾಹನ ಕೊಟ್ಟು ಕಳಿಸಿದಾಗ, ಅವರು ಹೆಲ್ಮೆಟ್ ಧರಿಸದೆ ಬಂದರೆ ಆಗಲೂ ದಂಡವನ್ನು ವಾಹನ ಮಾಲೀಕರೆ ಕಟ್ಟಬೇಕು. ನೀವು ಎಷ್ಟು ಸಾರೆ ಹೆಲ್ಮೆಟ್ ಇಲ್ಲದೆ ಅಡ್ಡಾಡುತ್ತೀರೋ ಪ್ರತಿ ಸಾರೆ ನೀವು 500 ರುಪಾಯಿ ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಯಾರ ಕೈಲಾದರೂ ವಾಹನ ಕೊಡುವ ಮುಂಚೆ, ಅದರಲ್ಲಿಯೂ ಅಪ್ರಾಪ್ತರ ಕೈಯಲ್ಲಿ ವಾಹನ ಕೊಡುವ ಮುಂಚೆ ಜಾಗರೂಕರಾಗಿರಬೇಕೆಂದು ಸಿಪಿಐ ಬೀಳಗಿ ಹೇಳಿದರು.

ಸಾರ್ವಜನಿಕರೂ ಸಹ ಪೊಲೀಸ್ ಇಲಾಖೆಯ ಜೊತೆಗೆ ಸಹಕರಿಸಿ ಕಾನೂನು ಪಾಲನೆಯಲ್ಲಿ ತೊಡಗಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನರೇಗಲ್ಲ ಠಾಣೆಯ ಪಿಎಸ್‌ಐ ಶಿವಾನಂದ ಬನ್ನಿಕೊಪ್ಪ ಮಾತನಾಡಿ, ಜಿಲ್ಲಾ ವ್ಯಾಪ್ತಿಯ ಪ್ರತಿ ಠಾಣೆಯಲ್ಲಿಯೂ ಈ ಥರ್ಡ್ ಐ ಅಳವಡಿಸಬೇಕೆಂಬ ಸರಕಾರದ ಆದೇಶದಂತೆ ಇಲ್ಲಿಯೂ ಥರ್ಡ್ ಐ ಅಳವಡಿಸಲಾಗಿದೆ ಎಂದರು.

ಸಾರ್ವಜನಿಕರು ಕೇಳಿದ ಹಲವಾರು ಸಂದೇಹಗಳಿಗೆ ಸಿಪಿಐ ಎಸ್. ಎಸ್. ಬೀಳಗಿ ಮತ್ತು ಪಿಎಸ್‌ಐ ಶಿವಾನಂದ ಬನ್ನಿಕೊಪ್ಪ ಸೂಕ್ತ ಪರಿಹಾರಗಳನ್ನು ನೀಡಿದರು. ಈ ಸಂದರ್ಭದಲ್ಲಿ ನರೇಗಲ್ಲ ಎಎಸ್‌ಐ ಕೆ. ಆರ್. ಬೇಲೇರಿ, ಮಹಿಳಾ ಕಾನ್‌ಸ್ಟೇಬಲ್ ಎಸ್. ಆರ್. ನದಾಫ್, ಕಾನ್‌ಸ್ಟೇಬಲ್‌ಗಳಾದ ಕೆ. ವಿ. ಹಿರೇಮಠ, ಎಂ. ವೈ. ಉಪ್ಪಾರ, ವಿಜಯ ಗೋದಿಗನೂರ, ಆರ್. ಎಸ್. ಕಪ್ಪತ್ತನವರ, ಮುತ್ತು ಹಡಪದ ಇದ್ದರು.