ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಜನೋಪಯೋಗಿ ಯೋಜನೆ ಬಗ್ಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಕಳೆದೊಂದು ತಿಂಗಳ ಪರ್ಯಂತವಾಗಿ ತಾಲೂಕಿನಾದ್ಯಂತ 180ಕ್ಕೂ ಹೆಚ್ಚು ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.ಮಂಗಳವಾರ ಹೊನ್ನಾಳಿ ಬಿಜೆಪಿ ಮಂಡಲ ವತಿಯಿಂದ ಹೊನ್ನಾಳಿ ಪಟ್ಟಣದಿಂದ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಕೊನಾಯ್ಕನಹಳ್ಳಿ, ಬಳ್ಳೇಶ್ವರ, ಹನುಮಸಾಗರವರೆಗೆ ಸುಮಾರು ಎಂಟೂವರೆ ಕಿ.ಮೀ. ಪಾದಯಾತ್ರೆ ನಡೆಸಿ, ಬಳಿಕ ಹನುಮಸಾಗರ ಗ್ರಾಮದಲ್ಲಿ ನಡೆದ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ‍್ಯ ಬಂದಾಗಿನಿಂದ ಒಂದೇ ಕುಟುಂಬ ಆಡಳಿತ ನಡೆಸುತ್ತ, ದೇಶದುದ್ದಗಲಕ್ಕೂ ಯೋಜನೆಗಳಿಗೆ ಕೇವಲ ನೆಹರು, ಇಂದಿರಾ ಗಾಂಧಿ, ರಾಜೀವ ಗಾಂಧಿ ಹೆಸರಿಟ್ಟಿರುವುದು ಜನರು ಮರೆತಿಲ್ಲ. ಈಗ ಅಪ್ರಭುದ್ದನಂತೆ ಮಾತನಾಡುವ ರಾಹುಲ್ ಗಾಂಧಿ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಕಾಂಗ್ರೆ ಸ್ ನಾಯಕರು ಮಾತನಾಡುತ್ತಿದ್ದಾರೆ. ಇದು ಅಧಿಕಾರ ಉಳಿಸಿಕೊಳ್ಳುವ ತಂತ್ರ ಎಂದು ವೆಂಗ್ಯವಾಡಿದರು.ವಿಬಿ ಜಿ ರಾಮ್ ಜಿ ಬಗ್ಗೆ ಜನಜಾಗೃತಿ ಹಾಗೂ ಕೂಲಿ ಕಾರ್ಮಿಕರಿಗೆ ಅರಿವು ಮೂಡಿಸಲು ಫೆ.21ರಂದು ತಾಲೂಕಿನ ಘಂಟ್ಯಾಪುರ ಗ್ರಾಮದಿಂದ ತರಗನಹಳ್ಳಿ ಗ್ರಾಮದವರೆಗೆ ಪಾದಯಾತ್ರೆ ನಡೆಸಿ, ಮಧ್ಯಾಹ್ನ 3 ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೆಂದ್ರ ಭಾಗವಹಿಸಲಿದ್ದಾರೆ ಎಂದರು.
ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಇದೇ ಕಾಂಗ್ರೆಸ್‌ನವರು, ಗಾಂಧೀಜಿಯವರನ್ನು ಅವಮಾನ ಮಾಡಿದ್ದಾರೆ. ಇಂತವರು ಬಿಜೆಪಿ ಬಗ್ಗೆ ಮಾತನಾಡುವುದು ಎಷ್ಟು ಸಮಂಜಸ? ರಾಜ್ಯದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್‌ನ ಸಿದ್ದರಾಮಯ್ಯ ಸರ್ಕಾರ ಯಾವುದೇ ಅಭಿವೃದ್ಧಿ ಮಾಡದೇ ಕೇವಲ ಕುರ್ಚಿ ಕಿತ್ತಾಟದಲ್ಲಿ ತೊಡಗಿದೆ. ರಾಜ್ಯ ಸರ್ಕಾರದ ವಿರುದ್ಧ ನಮ್ಮ ಹೋರಾಟ ಪ್ರತಿಭಟನೆಗಳು ನಿರಂತರ ನಡೆಯುತ್ತವೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಅರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಬಿಜೆಪಿ ಹಿಂದುಳಿದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಕುಬೇಂದ್ರಪ್ಪ, ತಾಪಂ ಮಾಜಿ ಉಪಾಧ್ಯಕ್ಷ ಸಿ.ಆರ್.ಶಿವಾನಂದ್ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ಬಾಬು ಹೋಬಳದಾರ್, ಕೆ.ವಿ.ಶ್ರೀಧರ್, ರಂಗಪ್ಪ, ಮುಖಂಡರಾದ ತರಗನಹಳ್ಳಿ ರಮೇಶಗೌಡ, ಮಾರುತಿ ನಾಯ್ಕ, ಕುಂದೂರು ಅನಿಲ್, ಎಸ್.ಎಸ್. ಬೀರಪ್ಪ, ಮಂಜುನಾಥ ಕೊನ್ನಾಯ್ಕನಹಳ್ಳಿ ನೆಲಹೊನ್ನೆ ಮಂಜುನಾಥ್, ಮಹಾಂತೇಶ ಜುಂಜಾನಾಯ್ಕ ಇತರರು ಇದ್ದರು.