ಸಾರಾಂಶ
ಹುಬ್ಬಳ್ಳಿ:
ಮುಖ್ಯಮಂತ್ರಿ ಬದಲಾಯಿಸುವ ಕುರಿತು ಲಿಂಗಾಯತ ಸ್ವಾಮೀಜಿ ಹಾಗೂ ಒಕ್ಕಲಿಗ ಸ್ವಾಮೀಜಿ ಅವರವರ ಅಭಿಪ್ರಾಯ ಹೇಳಿದ್ದಾರೆ. ಇದರಿಂದ ಸರ್ಕಾರದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸಚಿವ ಸಂತೋಷ ಲಾಡ್ ಹೇಳಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಅವರವರ ಅಭಿಪ್ರಾಯ ಹೇಳಬಹುದಾಗಿದೆ. ಅದೇ ರೀತಿ ಸ್ವಾಮೀಜಿಗಳು ತಮ್ಮ ಅಭಿಪ್ರಾಯಗಳನ್ನು ಹೇಳಿದ್ದಾರಷ್ಟೇ. ಹಾಗಂತ ಸರ್ಕಾರದಲ್ಲಿ ಗೊಂದಲ ಉಂಟಾಗಿದೆ ಎನ್ನುವುದು ಸರಿಯಲ್ಲ. ಸರ್ಕಾರದಲ್ಲಿ ಯಾವುದೇ ಬಗೆಯ ಗೊಂದಲಗಳಿಲ್ಲ ಎಂದರು.
ಏನೇ ಇದ್ದರೂ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಈಗಾಗಲೇ ಮುಖ್ಯಮಂತ್ರಿಗಳೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ನಾನೇನು ಹೇಳುವುದಿಲ್ಲ. ಉಪಚುನಾವಣೆಯಲ್ಲಿ ಯಾರನ್ನು ಅಭ್ಯರ್ಥಿ ಮಾಡಬೇಕೆನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಸರಿಯಾಗಿ ಬರುತ್ತಿಲ್ಲ ಎಂದು ದೂರಿದ ಸಚಿವರು, ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್, ಹಾಲಿನ ದರ ಕಡಿಮೆ ಇದೆ. ನಾವು ಸರ್ಕಾರ ನಡೆಸಬೇಕು. ಅದಕ್ಕೆ ಬೆಲೆ ಏರಿಕೆ ಮಾಡಬೇಕು. ₹ 60 ಸಾವಿರ ಕೋಟಿ ಗ್ಯಾರಂಟಿಗೆ ಆದಾಯ ಬೇಕು. ಗ್ಯಾರಂಟಿ ಯೋಜನೆಗಳಿಂದ ನಮ್ಮ ಶಾಸಕರಿಗೆ ಅನುದಾನ ಸಿಗುತ್ತಿಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ಬಿಜೆಪಿ ಸಂಸದರು ಏನು ಸಂತೋಷವಾಗಿದ್ದಾರಾ? ವೈಯಕ್ತಿಕವಾಗಿ ಒಬ್ಬ ಸಂಸದರು ಎಷ್ಟು ಅನುದಾನ ತಂದಿದ್ದಾರೆ? ಹುಬ್ಬಳ್ಳಿ-ಧಾರವಾಡವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೇನೂ ಸಿಂಗಾಪುರ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.