ಸಾರಾಂಶ
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಜೀವನ ಎಂಬ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮದ್ಯವರ್ಜನ ಶಿಬಿರದ ಮೂಲಕ ಅವರ ಜೀವನಕ್ಕೆ ಬೇಕಾದ ಮೌಲ್ಯಗಳ ಬಗ್ಗೆ ಅರಿವು ಮೂಡಿಸುತ್ತಾ ನವ ಜೀವನಕ್ಕೆ ದಾರಿ ಮಾಡಿಕೊಡುತ್ತಿದೆ
ಕನ್ನಡಪ್ರಭ ವಾರ್ತೆ ತಿಪಟೂರು
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಜೀವನ ಎಂಬ ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮದ್ಯವರ್ಜನ ಶಿಬಿರದ ಮೂಲಕ ಅವರ ಜೀವನಕ್ಕೆ ಬೇಕಾದ ಮೌಲ್ಯಗಳ ಬಗ್ಗೆ ಅರಿವು ಮೂಡಿಸುತ್ತಾ ನವ ಜೀವನಕ್ಕೆ ದಾರಿ ಮಾಡಿಕೊಡುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್‌ಸುವರ್ಣ ತಿಳಿಸಿದರು. ನಗರದ ಹಳೇಪಾಳ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯಿಂದ ನಡೆದ ನವಜೀವನ ಸಮಿತಿ ಮಾಸಿಕ ಸಭೆ ಹಾಗೂ ಸುಜ್ಞಾನನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಅನೇಕ ಕಾರ್ಯಕ್ರಮಗಳ ಮೂಲಕ ಸಮಾಜದ ಕಡು ಬಡವರಿಗೆ, ನಿರ್ಗತಿಕರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಸ್ವಾವಲಂಬಿ ಬದುಕನ್ನು ಕಟ್ಟಿಕೊಡುವ ಮೂಲಕ ಎಲ್ಲಾ ವರ್ಗದ ಜನರ ಏಳಿಗೆಗೆ ಶ್ರಮಿಸುತ್ತಿದೆ. ರಾಜ್ಯಾದ್ಯಂತ ಸಾವಿರಾರು ಮದ್ಯವರ್ಜನ ಶಿಬಿರಗಳನ್ನು ಏರ್ಪಡಿಸಿ ಅದೆಷ್ಟೋ ಕುಟುಂಬಗಳು ಕತ್ತಲೆಯಿಂದ ಬೆಳಕಿನಡೆಗೆ ಬಂದು ಉತ್ತಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿ ಭಾಗವಹಿಸಿರುವ ಶಿಬಿರಾರ್ಥಿಗಳು ಪುನಃ ಕುಡಿತ, ದುಶ್ಚಟ, ದುರಾಭ್ಯಾಸಕ್ಕೆ ಒಳಗಾಗದೆ ಸ್ವ-ಉದ್ಯೋಗವನ್ನು ಮಾಡುತ್ತಾ ತಮ್ಮ ಕುಟುಂಬದೊಂದಿಗೆ ಉತ್ತಮ ಜೀವನ ನಡೆಸಬೇಕು. ಶ್ರೀಕ್ಷೇತ್ರವು ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯದಾನ ನೀಡುತ್ತಾ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿದೆ ಎಂದ ಅವರು ಪೂಜ್ಯರ ನೇತೃತ್ವದಲ್ಲಿ ಇದೇ ತಿಂಗಳು ನಡೆಯಲಿರುವ ರಾಜ್ಯ ಮಟ್ಟದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಿಳಿಸಿದರು. ತಾಲೂಕು ಹಿಂದುಳಿದ ವರ್ಗದ ಕಲ್ಯಾಣಾಧಿಕಾರಿ ಜಲಜಾಕ್ಷಮ್ಮ ಮಾತನಾಡಿ ಗ್ರಾಮಾಭಿವೃದ್ದಿ ಯೋಜನೆ ಉತ್ತಮ ಕೆಲಸ ಮಾಡುತ್ತಿದೆ. ಸರ್ಕಾರ ಕೂಡ ಮಕ್ಕಳ ವಿದ್ಯಾಭ್ಯಾಸ ಹಾಗೂ ವಸತಿಗಾಗಿ ಕೋಟ್ಯಾಂತರ ರೂಗಳನ್ನು ವ್ಯಯಿಸುತ್ತಿದೆ. ತಿಪಟೂರು ತಾಲೂಕು ಒಂದರಲ್ಲೇ ಮೆಟ್ರಿಕ್ ಪೂರ್ವ ನಾಲ್ಕು ಮತ್ತು ಮೆಟ್ರಿಕ್ ನಂತರದ ಎಂಟು ಒಟ್ಟು 12 ಉಚಿತ ವಿದ್ಯಾರ್ಥಿನಿಲಯಗಳಿದ್ದು ಅವಶ್ಯಕತೆ ಇರುವ ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ 167 ವಿದ್ಯಾರ್ಥಿಗಳಿಗೆ ಮಂಜೂರಾತಿ ಪತ್ರ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿ ತಿಮ್ಮಯ್ಯ, ತಾಲೂಕು ಯೋಜನಾಧಿಕಾರಿ ಉದಯ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಎಂ.ಡಿ.ಪದ್ಮಾವತಿ, ಜಿಲ್ಲಾ ಜನಜಾಗೃತಿ ವೇದಿಕೆಯ ರೇಖಾ, ಮೇಲ್ವಿಚಾರಕರಾದ ಅನಿತಾ, ಜಯಪ್ರಸಾದ್, ವಿಚಕ್ಷಣಾಧಿಕಾರಿ ರಾಜೇಶ್, ಸೇವಾ ಪ್ರತಿನಿಧಿ ಗಾಯಿತ್ರಿ, ತಾರಾ, ವಿನೋದ, ಮುಖಂಡರಾದ ತರಕಾರಿ ಗಂಗಾಧರ್, ದಿಬ್ಬದಹಳ್ಳಿ ಶ್ಯಾಮಸುಂದರ್, ಮಡೇನೂರು ಸೋಮಶೇಖರ್ ಮತ್ತಿತರರಿದ್ದರು.