ಸಾರಾಂಶ
ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ನಿವಾರಣೆಯ ಆಂದೋಲನದ ಪ್ರಯುಕ್ತ ರಂಗತರಂಗ ಟ್ರಸ್ಟ್ ಕಲಾವಿದರಿಂದ ಬೀದಿನಾಟಕ ಪ್ರದರ್ಶನ ನಡೆಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬಿಸಲವಾಡಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ನಿವಾರಣೆಯ ಆಂದೋಲನದ ಪ್ರಯುಕ್ತ ರಂಗತರಂಗ ಟ್ರಸ್ಟ್ ಕಲಾವಿದರಿಂದ ಬೀದಿನಾಟಕ ಪ್ರದರ್ಶನ ಏರ್ಪಡಿಸಲಾಯಿತು.ಗ್ರಾಪಂ ಅಧ್ಯಕ್ಷ ಆರ್.ಬಾಲರಾಜು ತಮಟೆ ಬಾರಿಸಿ ಬೀದಿನಾಟಕ ಉದ್ಘಾಟಿಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಜಾತಿ ಬೇಧ, ತಾರತಮ್ಯ ತಳವರ್ಗದ ಜನರನ್ನು ಕುಕ್ಕಿ ತಿನ್ನುತ್ತಿದೆ. ಕ್ಷೌರ ಮಾಡುತ್ತಿಲ್ಲ, ದೇವಸ್ಥಾನದ ಗರ್ಭಗುಡಿಯ ಪ್ರವೇಶವಿಲ್ಲ, ಹೋಟೆಲುಗಳಲ್ಲಿ ಸಮಾನತೆ ಇಲ್ಲ, ಕೊನೆಗೆ ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಲು ಪರಿಶಿಷ್ಟರಿಗೆ ರಾಜಕೀಯ ಅವಕಾಶಗಳು ಇಲ್ಲದಂತಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲದ್ದಕ್ಕೂ ಸಂವಿಧಾನದಿಂದ ಪರಿಹಾರ ಸಾಧ್ಯವಿದೆ ಎಂದು ನಂಬಿ ನಾವು ಜೀವಿಸುತ್ತಿದ್ದೇವೆ ಎಂದರು.ಸಾಹಿತಿ, ರಂಗ ನಿರ್ದೇಶಕ ಸೋಮಶೇಖರ ಬಿಸಲ್ವಾಡಿ ಮಾತನಾಡಿ, ಸಂವಿಧಾನ ಪ್ರತಿಯೊಬ್ಬರಿಗೂ ಸಮಾನತೆ, ಸ್ವಾತಂತ್ರ್ಯ, ಶಿಕ್ಷಣ ಪಡೆಯುವ ಅವಕಾಶ, ಧಾರ್ಮಿಕ ಸ್ವಾತಂತ್ರ್ಯ ಜೊತೆಗೆ ಪ್ರತಿಯೊಂದು ಜಾತಿ, ಧರ್ಮಗಳಿಗೂ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಮೀಸಲಾತಿ ನೀಡಿದೆ. ಇಷ್ಟಿದ್ದರೂ ಡಾ.ಅಂಬೇಡ್ಕರ್ ಮತ್ತು ಸಂವಿಧಾನದ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿವೆ. ಆಳುವ ಸರ್ಕಾರಗಳು ವಾಸ್ತವವನ್ನು ಅರಿಯದೆ ಸಂವಿಧಾನ ತಿದ್ದುಪಡಿಗೆ ಕೈ ಹಾಕಿದ್ದರೆ ವಿರೋಧ ಪಕ್ಷಗಳು ತಾವು ಅಧಿಕಾರದಲ್ಲಿದ್ದಾಗ ಏನೂ ಮಾಡದೆ ಈಗ ಬಾಯಿ ಬಡಿದುಕೊಳ್ಳುತ್ತಿವೆ. ಇದು ನೋವಿನ ಸಂಗತಿ ಎಂದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಮೂರ್ತಿ, ಗ್ರಾಪಂ ಸದಸ್ಯರು ಕಾರ್ಯಕ್ರಮದಲ್ಲಿದ್ದರು. ರಂಗತರಂಗ ಟ್ರಸ್ಟ್ ಕಲಾವಿದರಿಂದ ಅಸ್ಪೃಶ್ಯತೆ ದೌರ್ಜನ್ಯ ಪ್ರತಿಬಂಧಕ ಕಾಯ್ದೆ ೧೯೫೫ ಮತ್ತು೧೯೮೯ ಹಾಗೂ ನಾಗರಿಕ ಹಕ್ಕು ಸಂರಕ್ಷಣೆ ಕಾಯ್ದೆ ೧೯೮೯ ಆಧರಿಸಿದ ಬೀದಿನಾಟಕ ಪ್ರದರ್ಶನಗೊಂಡಿತು. ಮಿಮಿಕ್ರಿ ಮಲ್ಲಣ್ಣ, ಶಿವಶಂಕರ್ ಚಟ್ಟು, ಸುಜಾತ, ಸುಮತಿ, ಕೋಲು ಮಹೇಶ, ಅನ್ನ ರಮೇಶ, ಜಯಲಕ್ಷ್ಮಿ, ಗೋವಿಂದರಾಜು ಮುಂತಾದವರು ಭಾಗವಹಿಸಿದ್ದರು.