ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡುಅಜ್ಞಾನವೆಂಬ ಕತ್ತಲೆಯಿಂದ ಜ್ಞಾನವೆಂಬ ಬೆಳಕಿನೆಡೆಗೆ ಸಾಗುವ ವ್ಯವಸ್ಥೆಯೇ ಗುರು- ಶಿಷ್ಯರ ಬಾಂಧವ್ಯ ಎಂದು ಜಾನಪದ ತಜ್ಞ ಡಾ.ಪಿ.ಕೆ. ರಾಜಶೇಖರ್ ಅಭಿಪ್ರಾಯಪಟ್ಟರು.ಪಟ್ಟಣದ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ 2025-26ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಎನ್‌ಸಿಸಿ, ರೋವರ್ಸ್- ರೇಂಜರ್ಸ್ ಮತ್ತು ಯುವ ರೆಡ್ ಕ್ರಾಸ್ ವೇದಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಜ್ಞಾನಾನ್ನ- ದಾಸೋಹ ಆದರ್ಶದ ಆಧಾರದೊಂದಿಗೆ ಈ ಕಾಲೇಜಿನಲ್ಲಿ ಬೋಧಿಸುವ ಬೋಧಕರು ಹಾಗೂ ಕಲಿಯುವ ವಿದ್ಯಾರ್ಥಿಗಳು ಪ್ರಶಸ್ತಿಗಳನ್ನು ಪಡೆಯುವುದರೊಂದಿಗೆ ಸಮಾಜಕ್ಕೆ ಪೂರಕವಾದ ಸಂದೇಶವನ್ನು ನೀಡುವಂತಾಗಲಿ. ನ್ಯಾಯ, ನೀತಿ, ಸತ್ಯ ಹಾಗೂ ಧರ್ಮಗಳ ಮೂಲಕ ಸಮಾಜ ಸುಧಾರಣೆಯನ್ನು ಶ್ರೇಷ್ಠ ವ್ಯಕ್ತಿತ್ವಗಳಾಗಿ ರೂಪುಗೊಳ್ಳಲಿ ಎಂದು ಅವರು ಆಶಿಸಿದರು.ಪ್ರಸ್ತುತ ಜ್ಞಾನ, ವಿಜ್ಞಾನ- ತಂತ್ರಜ್ಞಾನ ಯುಗದಲ್ಲಿ ಪದವಿ ಹಂತದಲ್ಲಿ ವಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಾವು ಕಲಿಯುವ ಪಠ್ಯದ ಜೊತೆಗೆ ಜೀವನ ಕಲೆಯನ್ನು ರೂಪಿಸಿಕೊಂಡು ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ, ಯುವರೆಡ್ ಕ್ರಾಸ್, ರೋವರ್ಸ್- ರೇಂಜರ್ಸ್ ಮುಂತಾದ ಕ್ಷೇತ್ರಗಳಲ್ಲಿ ಜ್ಞಾನ ಸಂಪಾದಿಸಿ ವಿವೇಕ ಹಾಗೂ ವಿವೇಚನೆಯಿಂದ ನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮದಂತಹ ಸತ್ಯ ಸಂಗತಿಗಳನ್ನು ಅರಿತು ವಿಶ್ವಗುರು ಬಸವಣ್ಣನವರು ಸಾರಿದ ಕಾಯಕ ಶ್ರೇಷ್ಠತೆ ಹಾದಿಯಲ್ಲಿ ಜಗತ್ತಿನಲ್ಲಿ ಕೀರ್ತಿ, ಯಶಸ್ಸು ಹಾಗೂ ಸೇವಾ ಪರತೆಯನ್ನು ಸಾರಿರುವ ಶ್ರೀಮತ್ಸುತ್ತೂರು ಗುರುಪರಂಪರೆಯನ್ನು ಅವರು ಸ್ಮರಿಸಿದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಟೆರೇಷಿಯನ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಆಂಥೋಣಿ ಮೋಸೆಸ್ ಮಾತನಾಡಿ, ಜೀವನ ಎಂಬುದು ಸೋಲು ಗೆಲುವಿನ ಸಮ ಪ್ರಮಾಣದ ಮೆಟ್ಟಿಲುಗಳು, ಈ ದಿಸೆಯಲ್ಲಿ ವಿದ್ಯಾರ್ಥಿಗಳು ಶರೀರ ಹಾಗೂ ಶಾರೀರದ ಸಮತೋಲವನ್ನು ಕಾಯ್ದುಕೊಂಡು ಆರೋಗ್ಯವಂತರಾಗಿ ಹಾಗೂ ಚೈತನ್ಯ ಪೂರ್ಣರಾಗಿ ಬದುಕಲು ಕ್ರೀಡಾ ಚಟುವಟಿಕೆಗಳು ಮಹತ್ವದ್ದಾಗಿದೆ ಎಂದರು.ಪ್ರಯತ್ನ ಪಡದ ಹೊರತು ಯಶಸ್ಸು ಸಾಧ್ಯವಿಲ್ಲವಾದ್ದರಿಂದ ಸತತ ಅಭ್ಯಾಸದಿಂದ ಸಾಧನೆಯ ಮೆಟ್ಟಿಲನ್ನು ಏರುವಂತಾಗಲಿ ಎಂದು ನುಡಿದರು.ಕಾಲೇಜಿನ ಪ್ರಾಂಶುಪಾಲ ಡಾ.ಸಿ.ಎಸ್. ಹೊನ್ನೇಗೌಡ ಮಾತನಾಡಿ, ನಮ್ಮ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸುಂದರವಾದ ಪ್ರಪಂಚದಲ್ಲಿ ಸುಂದರವಾಗಿ ಬದುಕಲು ಸದ್ಗುಣ, ಸತ್ಕರ್ಮ ಹಾಗೂ ಸ್ವಚ್ಛಾರಿತ್ರದಂತಹ ಶ್ರೇಷ್ಠ ಗುಣಗಳನ್ನು ರೂಢಿಸಿಕೊಂಡು ಮೇರು ವ್ಯಕ್ತಿಗಳ ಆದರ್ಶವನ್ನು ರೂಢಿಸಿಕೊಂಡು ಸಾಧಕ- ಶ್ರೇಷ್ಠರಾಗಿ ಪೋಷಕರಿಗೆ, ವಿದ್ಯಾಸಂಸ್ಥೆಗೆ ಹಾಗೂ ದೇಶಕ್ಕೆ ಕೀರ್ತಿ ಮತ್ತು ಯಶಸ್ಸನ್ನು ತರುವಂತಾಗಲಿ ಎಂದು ಆಶಿಸಿದರು.ಅಧ್ಯಕ್ಷತೆವಹಿಸಿದ್ದ ಜೆಎಸ್‌ಎಸ್ ಮಹಾವಿದ್ಯಾಪೀಠ ಹಣಕಾಸು ವಿಭಾಗದ ನಿರ್ದೇಶಕ ಎಸ್. ಪುಟ್ಟಸುಬ್ಬಪ್ಪ ಮಾತನಾಡಿ, ಜೆಎಸ್‌ಎಸ್ ಮಹಾವಿದ್ಯಾಪೀಠದ ಅಂಗ ಸಂಸ್ಥೆಗಳಲ್ಲಿ ಒಂದಾದ ನಂಜನಗೂಡಿನ ಜೆಎಸ್‌ಎಸ್ ಕಾಲೇಜು ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಧಕರನ್ನು ಪೋಷಿಸಿ ಬೆಳೆಸಿದೆ. ಶ್ರೀಗಳ ದೂರದೃಷ್ಟಿಯ ಚಿಂತನೆ ವಿಶ್ವಗುರು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ನುಡಿಗನುಗುಣವಾಗಿ ವೈಜ್ಞಾನಿಕ ಯುಗದಲ್ಲಿ ನೆನಪಿನಲ್ಲಿ ಉಳಿಯುವಂತಹ ಶ್ರೇಷ್ಠ ಸಾಧನೆಯನ್ನು ನಿರೂಪಿಸಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಮತ್ತು ಅಧ್ಯಾಪಕೇತರರು ಸಾಧನೆಯ ಮೆಟ್ಟಿಲನ್ನೇರಲು ಪ್ರಯತ್ನ ಶೀಲರಾಗಬೇಕು ಎಂದು ಅಭಿಪ್ರಾಯಪಟ್ಟರು.ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಶಿವಕುಮಾರ್, ಕಚೇರಿ ಅಧೀಕ್ಷಕ ಕೆ.ವಿ. ಸುಂದರರಾಜು, ಸಾಂಸ್ಕೃತಿಕ ವೇದಿಕೆ ಸಂಚಾಲಕ ಎನ್.ಪಿ. ಮಮತಾ, ಕ್ರೀಡಾ ವೇದಿಕೆ ಸಂಚಾಲಕ ಪಿ.ಎಂ. ವಿಕ್ರಂ, ಅಧ್ಯಾಪಕರು-ಅಧ್ಯಾಪಕೇತರರು ಹಾಗೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು.ತೃತೀಯ ಬಿಸಿಎ ವಿದ್ಯಾರ್ಥಿನಿ ಜ್ಯೋತಿ ಮತ್ತು ತಂಡದವರು ಪ್ರಾರ್ಥಿಸಿದರು, ತೃತೀಯ ಬಿಎಸ್ಸಿಯ ಯು. ಮಾನ್ಯ ಸ್ವಾಗತಿಸಿದರು, ತೃತೀಯ ಬಿಕಾಂನ ಜಿ. ರಕ್ಷಿತಾ ವಂದಿಸಿದರು. ತೃತೀಯ ಬಿಎಸ್ಸಿ ವಿದ್ಯಾರ್ಥಿನಿ ಆರ್. ನಂದಿನಿ ಕಾರ್ಯಕ್ರಮ ನಿರೂಪಿಸಿದರು.