ಎಚ್.ಎನ್.ಪ್ರಸಾದ್
ಕನ್ನಡಪ್ರಭ ವಾರ್ತೆ ಹಲಗೂರುಹಲಗೂರು ಮತ್ತು ವಳಗೆರೆದೊಡ್ಡಿ ಗ್ರಾಮಗಳ ದೇವತೆ ಶ್ರೀಪಟ್ಟಲದಮ್ಮನ ಜಾತ್ರಾ ಮಹೋತ್ಸವ ಏ.8ರಿಂದ 12ರವರೆಗೆ ಆರಂಭವಾಗಿ 5 ದಿನಗಳ ಕಾಲ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.
ಏ.8ರ ಸಂಜೆ ಅರ್ಚಕರ ಮನೆಯಿಂದ ಪ್ರಸಾದ ತೆಗೆದುಕೊಂಡು ದೇವಸ್ಥಾನಕ್ಕೆ ಬಂದು ಪೂಜೆ ಪುನಸ್ಕಾರಗಳು ನಡೆದ ನಂತರ ಗ್ರಾಮಸ್ಥರು ಕೊಂಡದ ಬಾಯಿ ತೆಗೆದು ಅರ್ಚಕರು ಪ್ರಸಾದವನ್ನು ಕೊಂಡಕ್ಕೆ ನೈವೇದ್ಯ ಮಾಡಿ ಮಹಾ ಮಂಗಳಾರತಿ ನಡೆಸಿ ಬಂದ ಭಕ್ತಾದಿಗಳಿಗೆ ಹಂಚಲಾಗುತ್ತದೆ.ನಂತರ ಏ.9 ಪೂಜೆ ಪುನಸ್ಕಾರಗಳ ನಡೆಯಲಿವೆ. ಏ.10ರ ಶುಕ್ರವಾರ ಬೆಳಗ್ಗೆ ದೇವಸ್ಥಾನದ ಆವರಣದಲ್ಲಿ ಹೋಮಹವನ ನಡೆಸಿ ದೇವರಿಗೆ ಅಭಿಷೇಕ, ಅಲಂಕಾರ , ನೈವೇದ್ಯಗಳನ್ನು ಮಾಡಿ 12 ಗಂಟೆಗೆ ಮಹಾಮಂಗಳಾರತಿ, ನಂತರ ಹರಕೆ ಹೊತ್ತ ಮುತ್ತೈದೆಯರು ಹೆಸರುಬೇಳೆ ಕೋಸಂಬರಿ, ಪಾನಕ ಮಾಡಿಕೊಂಡು ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ ಪರಸ್ಪರ ವಿನಿಮಯ ಮಾಡಲಿದ್ದಾರೆ.
ಸಂಜೆ ಕರಿಬೀದಿಯ ಕರಗದ ಮನೆಯಿಂದ ಓಲೆ ಬಂಡಿ ಎಳವಾರವನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೊರಟಾಗ ಜೊತೆಯಲ್ಲಿ ಹರಕೆ ಹೊತ್ತವರು ಎತ್ತಿನಗಾಡಿಯಲ್ಲಿ ಪಾನಕ, ಮಜ್ಜಿಗೆ ಮಾಡಿಕೊಂಡು ಭಕ್ತರಿಗೆ ಹಂಚುತ್ತಾ ದೇವಸ್ಥಾನದ ಹತ್ತಿರ ಬಂದು ಸಂಜೆ ಪೂಜೆ ನಂತರ ಕೊಂಡಕ್ಕೆ ಸೌದೆಗಳನ್ನು ಜೋಡಿಸುವುದು.
ಅದೇ ದಿನ ರಾತ್ರಿ ಸಿದ್ದಪ್ಪಾಜಿ ದೇವಸ್ಥಾನದ ಅರ್ಚಕರು, ನಡುಕೇರಿ ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ಅರ್ಚಕರು ಹಾಗೂ ಪಟ್ಟಲದಮ್ಮ ದೇವಸ್ಥಾನದ ಅರ್ಚಕರುಗಳು ಸೇರಿ ಕೊಂಡಕ್ಕೆ ಪೂಜೆ ಸಲ್ಲಿಸಿ ಬೆಂಕಿ ಹಚ್ಚುವರು. ಏ.11ರ ಬೆಳಗಿನ ಜಾವ 3 ಗಂಟೆಗೆ ನಡು ಕೇರಿ ವೀರಭದ್ರೇಶ್ವರಸ್ವಾಮಿ ದೇವಸ್ಥಾನದಿಂದ ದೇವರ ಕರಗಕ್ಕೆ ವಿವಿಧ ಪುಷ್ಪಗಳಿಂದ ಅಲಂಕರಿಸಿ ಹೂವು ಹೊಂಬಾಳೆಯೊಂದಿಗೆ ದೇವರ ಗಿಂಡಿಯನ್ನು ಪೂಜೆ ಮಾಡಿಸಿ ಆರ್ಚಕರು ಹೊತ್ತು, ಮುತ್ತೈದೆಯರು ತಂಬಿಟ್ಟಿನ ಆರತಿ ಹಿಡಿದು ಬಸಪ್ಪ ದೇವರ ಜೊತೆ ಪಟ್ಟಲದಮ್ಮ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಆಗಮಿಸುವರು. ದೇವಸ್ಥಾನವನ್ನು ಮೂರು ಸುತ್ತು ಪ್ರದಕ್ಷಣೆ ಹಾಕಿ ಪೂಜೆ ಪುನಸ್ಕಾರಗಳು ನಡೆದ ನಂತರ ಅರ್ಚಕರು ದೇವರ ಗಿಂಡಿಯನ್ನು ಹೊತ್ತು ಕೊಂಡು ಕೊಂಡವನ್ನು ಹಾಯಲಿದ್ದಾರೆ.
ಏ.12 ರಂದು ಕರಗದ ಮನೆ ಹತ್ತಿರ ಪೂಜೆ ಪುರಸ್ಕಾರಗಳು ನಡೆಸಿ ಮಹಾಮಂಗಳಾರತಿ, ಮುತ್ತೈದೆಯರು ದೇವರಿಗೆ ಸೋಗಿಲು ಹಾಕಿ ಮಡಿಲು ತುಂಬಲಿದ್ದಾರೆ. ವಳಗೆರೆದೊಡ್ಡಿ ಗ್ರಾಮಸ್ಥರು ಪೂಜೆ ಸಲ್ಲಿಸಿ ದೇವರ ಕರಗವನ್ನು ತೆಗೆದುಕೊಂಡು ಹೋಗಿ ಗ್ರಾಮದಲ್ಲಿ ಮೆರವಣಿಗೆ ನಡೆಸಲಿದ್ದಾರೆ. ಮುತ್ತೈದೆಯರು ಸೋಗಿಲು ಹಾಕಿ ಪೂಜೆ ಸಲ್ಲಿಸುವರು. ಐದು ದಿನಗಳ ಜಾತ್ರೆಯಲ್ಲಿ ಹಲಗೂರು, ವಳಗೆರೆದೊಡ್ಡಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಲಿದ್ದಾರೆ.ಅರ್ಚಕ ಕೃಷ್ಣಪ್ಪ ಮಾತನಾಡಿ, ವರ್ಷಕ್ಕೊಮ್ಮೆ ಬರುವ ನಮ್ಮ ಈ ಗ್ರಾಮ ದೇವತೆ ಹಬ್ಬವನ್ನು ಎಲ್ಲಾ ವರ್ಗದವರು ಸೇರಿ ಭಕ್ತಿಯಿಂದ ಆಚರಿಸುತ್ತಾರೆ. ಭಕ್ತರ ಹರಕೆ ಹಾಗೂ ಅವರ ಇಷ್ಟಾರ್ಥವನ್ನು ನೆರವೇರಿಸುವ ದೇವರಿಗೆ ಪೂಜೆ ಸಲ್ಲಿಸುತ್ತಾರೆ ಎಂದರು.