ನಾಳೆಯಿಂದ ಬಿಸಿಬಿಸಿ ಅಧಿವೇಶನ : ಹತ್ತು ಹಲವು ವಿಷಯಗಳು ಉಭಯ ಸದನಗಳಲ್ಲಿ ತೀವ್ರ ಚರ್ಚೆ

| N/A | Published : Mar 02 2025, 01:16 AM IST / Updated: Mar 02 2025, 07:44 AM IST

ಸಾರಾಂಶ

ವಿಧಾನಮಂಡಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಗ್ಯಾರಂಟಿಗಳ ಹಣ ಬಿಡುಗಡೆ ವಿಳಂಬ  ಸೇರಿ ಹತ್ತು ಹಲವು ವಿಷಯಗಳು ಉಭಯ ಸದನಗಳಲ್ಲಿ ತೀವ್ರ ಚರ್ಚೆ, ವಾಗ್ವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

 ಬೆಂಗಳೂರು : ವಿಧಾನಮಂಡಲದ ಅಧಿವೇಶನ ಸೋಮವಾರದಿಂದ ಆರಂಭವಾಗಲಿದ್ದು, ಗ್ಯಾರಂಟಿಗಳ ಹಣ ಬಿಡುಗಡೆ ವಿಳಂಬ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೊರತೆ, ಕೆಪಿಎಸ್ಸಿ ಹಗರಣ, ಬಸ್‌, ಮೆಟ್ರೋ ದರ ಏರಿಕೆ, ವಿವಿ ಮುಚ್ಚುವ ನಿರ್ಧಾರ, ಕೇಂದ್ರದಿಂದ ತೆರಿಗೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯ, ವಿವಿಧ ಯೋಜನೆಗಳಿಗೆ ಕೇಂದ್ರ ಅಂಗೀಕಾರ ನೀಡದಿರುವುದು ಸೇರಿ ಹತ್ತು ಹಲವು ವಿಷಯಗಳು ಉಭಯ ಸದನಗಳಲ್ಲಿ ತೀವ್ರ ಚರ್ಚೆ, ವಾಗ್ವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಭಾಷಣ ಮಾಡಲಿದ್ದಾರೆ. ವಿವಿಧ ವಿಧೇಯಕಗಳ ಬಗ್ಗೆ ಸರ್ಕಾರದ ಧೋರಣೆ ಖಂಡಿಸಿ ಪತ್ರ ಬರೆದಿರುವ ರಾಜ್ಯಪಾಲರು ಅಧಿವೇಶನದಲ್ಲಿ ಸರ್ಕಾರದ ಬಗ್ಗೆ ಯಾವ ರೀತಿ ಮಾತನಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಮಾ.7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 16ನೇ ಬಜೆಟ್‌ ಮಂಡನೆ ಮಾಡಲಿದ್ದು, ಗ್ಯಾರಂಟಿಗಳ ಒತ್ತಡದ ನಡುವೆ ಯಾವ ರೀತಿಯ ಬಜೆಟ್‌ ಮಂಡಿಸಲಿದ್ದಾರೆ. ಯಾವ ಹೊಸ ಕಾರ್ಯಕ್ರಮಗಳನ್ನು ನೀಡಲಿದ್ದಾರೆ ಎಂಬ ಬಗ್ಗೆ ತೀವ್ರ ಕುತೂಹಲ ಹುಟ್ಟಿಕೊಂಡಿವೆ.

ತೀವ್ರ ಜಟಾಪಟಿ ನಿರೀಕ್ಷೆ:

ಮಾ. 21ರವರೆಗೆ ನಡೆಯುವ ಅಧಿವೇಶನದ ಉದ್ದಕ್ಕೂ ಬಸ್ಸು, ಮೆಟ್ರೋ ದರ ಏರಿಕೆ, ವಿದ್ಯುತ್‌, ನೀರು, ಹಾಲಿನ ದರ ಏರಿಕೆ ಪ್ರಸ್ತಾಪ ಸೇರಿ ಮೈಕ್ರೋ ಫೈನಾನ್ಸ್‌ ಕಿರುಕುಳ, ಗ್ಯಾರಂಟಿಗಳ ಹಣ ಬಿಡುಗಡೆ ವಿಳಂಬ, ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಕೊರತೆ, ಕೆಪಿಎಸ್ಸಿ ಹಗರಣ, ರಾಜ್ಯಪಾಲ-ಸರ್ಕಾರದ ನಡುವಿನ ಜಟಾಪಟಿ, ಬೆಂಗಳೂರು ನಗರದ ಸಮಸ್ಯೆಗಳನ್ನು ಮುಖ್ಯ ಅಸ್ತ್ರವಾಗಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ಪ್ರತಿಪಕ್ಷ ಬಿಜೆಪಿ-ಜೆಡಿಎಸ್‌ ಸಜ್ಜಾಗಿವೆ.

ಇದಕ್ಕೆ ಪ್ರತಿಯಾಗಿ ಕುನ್ಹಾ ವರದಿ, ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಪ್ರಕರಣ, ಮಹದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆಗಳಿಗೆ ಅಂಗೀಕಾರ ನೀಡಲು ಸ್ಪಂದಿಸದ ಕೇಂದ್ರ ಸರ್ಕಾರದ ಧೋರಣೆ, ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ, ತೆರಿಗೆ ಪಾಲು ಕಡಿತ ಮತ್ತಿತರ ಅಂಕಿ-ಅಂಶಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ವಿರುದ್ಧ ಹರಿಹಾಯಲು ಕಾಂಗ್ರೆಸ್ ಕೂಡ ಸಿದ್ಧವಾಗಿದೆ.

ಈ ಬಗ್ಗೆ ಮಾ.4 ರಂದು ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಏರ್ಪಡಿಸಿದ್ದು, ಈ ವೇಳೆ ಮತ್ತಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಟೀಕಿಸಿದ ಸರ್ಕಾರ ಸಮರ್ಥಿಸಿ ಭಾಷಣ?:

ಸೋಮವಾರ ರಾಜ್ಯಪಾಲರ ಭಾಷಣದಲ್ಲೇ ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯಗಳ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಯಿದೆ. ಗ್ಯಾರಂಟಿಗಳನ್ನು ವಿರೋಧಿಸಿದವರೇ ಅವುಗಳನ್ನು ಅನುಸರಿಸಿರುವ ಬಗ್ಗೆ ರಾಜ್ಯಪಾಲರಿಂದ ಹೇಳಿಸುವ ಮೂಲಕ ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಲು ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

ರಾಜ್ಯಪಾಲರ ಭಾಷಣದ ನಂತರ ಕೆಲಕಾಲ ಮುಂದೂಡಿದ ತರುವಾಯ ಸದನ ಮತ್ತೆ ಆರಂಭವಾಗಲಿದೆ. ಸಂತಾಪ ಸೂಚನೆ ನಿರ್ಣಯ ಮಂಡಿಸಿ ಸಭೆ ಮುಂದೂಡಲಾಗುವುದು. ಮಂಗಳವಾರ, ಬುಧವಾರ ಹಾಗೂ ಗುರುವಾರ ಮೂರು ದಿನಗಳ ಕಾಲ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದ್ದು, ಮಾ.6 ರಂದು ಸರ್ಕಾರ ಉತ್ತರ ನೀಡಲಿದೆ.

ಮಾ.7ರಂದು ದಾಖಲೆ ಬಜೆಟ್‌: ಮಾ.7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 16ನೇ ಬಜೆಟ್‌ ಹಾಗೂ ಮುಖ್ಯಮಂತ್ರಿ ಆಗಿ 9ನೇ ಬಜೆಟ್‌ ಮಂಡನೆ ಮಾಡಲಿದ್ದಾರೆ. ರಾಜ್ಯದಮಟ್ಟಿಗೆ ಅತ್ಯಧಿಕ ಬಜೆಟ್‌ ಮಂಡನೆ ಮಾಡಿರುವ ದಾಖಲೆಯನ್ನು ಈಗಾಗಲೇ ಹೊಂದಿರುವ ಸಿದ್ದರಾಮಯ್ಯ, ಆರ್ಥಿಕ ಇತಿಮಿತಿಗಳಲ್ಲಿ ಯಾವ ರೀತಿಯ ಬಜೆಟ್‌ ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ವಿವಿಧ ವಿಧೇಯಕ ಮಂಡನೆ: ಅಧಿವೇಶನದಲ್ಲಿ ಮೈಕ್ರೋ ಫೈನಾನ್ಸ್‌ ಸುಗ್ರೀವಾಜ್ಞೆ ವಿಧೇಯಕ ಮಂಡಿಸಿ ಉಭಯ ಸದನಗಳ ಒಪ್ಪಿಗೆ ಪಡೆಯಬಹುದು. ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ಕುರಿತ ಸುಗ್ರೀವಾಜ್ಞೆ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಈ ಸುಗ್ರೀವಾಜ್ಞೆ ಬಗ್ಗೆ ಅಧಿವೇಶನದಲ್ಲಿ ಯಾವ ನಿರ್ಧಾರ ಮಾಡಲಿದ್ದಾರೆ ಎಂಬುದು ಕಾದು ನೋಡಬೇಕಿದೆ.

ಗ್ಯಾರಂಟಿ, ಅನುದಾನ ಕೊರತೆ, ದರ ಏರಿಕೆ ಬಿಸಿ ನಡುವೆ

ನಾಳೆಯಿಂದ ಸದನ ಕದನ

ಮೊದಲ ದಿನ ರಾಜ್ಯಪಾಲರ ಭಾಷಣ । ಮಾ.7ಕ್ಕೆ ಸಿದ್ದು ದಾಖಲೆ 16ನೇ ಬಜೆಟ್‌

ಸರ್ಕಾರದ ಹೆಡೆಮುರಿ ಕಟ್ಟಲು ವಿಪಕ್ಷ ಸಿದ್ಧ । ತಿರುಗೇಟಿಗೆ ಕೈ ಪಡೆಯೂ ಸಜ್ಜು

ವಿಪಕ್ಷದ ಬತ್ತಳಿಕೆ ಬಾಣ

ಬಸ್ಸು, ಮೆಟ್ರೋ ದರ ಏರಿಕೆ, ವಿದ್ಯುತ್‌, ನೀರು, ಹಾಲಿನ ದರ ಏರಿಕೆ ಪ್ರಮುಖವಾಗಿ ಪ್ರಸ್ತಾಪ

ಮೈಕ್ರೋ ಫೈನಾನ್ಸ್‌ ಕಿರುಕುಳ, ಗ್ಯಾರಂಟಿಗಳ ಹಣ ವಿಳಂಬ, ಅನುದಾನ ಕೊರತೆಗೆ ತರಾಟೆ

ಕೆಪಿಎಸ್ಸಿ ಹಗರಣ, ರಾಜ್ಯಪಾಲ, ಸರ್ಕಾರದ ನಡುವಿನ ಜಟಾಪಟಿ, ಬೆಂಗಳೂರು ಸಮಸ್ಯೆ ಅಸ್ತ್ರ

ತಿರುಗೇಟಿಗೆ ಕೈ ರೆಡಿ

ಕೋವಿಡ್‌ ಕುರಿತ ಕುನ್ಹಾ ಸಮಿತಿ ವರದಿ, ಎಚ್.ಡಿ.ಕೆ ವಿರುದ್ಧದ ಪ್ರಕರಣಗಳ ಪ್ರಸ್ತಾಪಕ್ಕೆ ಸಜ್ಜು

ಮಹದಾಯಿ, ಕೃಷ್ಣಾ ಮೇಲ್ದಂಡೆ, ಮೇಕೆದಾಟು ಯೋಜನೆಗೆ ಸ್ಪಂದಿಸದ ಕೇಂದ್ರದ ವಿರುದ್ಧ ತರಾಟೆ

ಕೇಂದ್ರ ಬಜೆಟ್ಟಲ್ಲಿ ಕರ್ನಾಟಕಕ್ಕೆ ಮಾಡಿರುವ ಅನ್ಯಾಯ, ತೆರಿಗೆ ಪಾಲು ಕಡಿತ ಮುಂದಿಟ್ಟು ಪ್ರತಿದಾಳಿ

ಕಾಲು ನೋವು: ಈ ಬಾರಿ ಕುಳಿತೇ ಸಿಎಂ ಬಜೆಟ್‌

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊಣಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಅಧಿವೇಶನಕ್ಕೆ ಆಗಮಿಸುವ ಸಲುವಾಗಿ ವಿಧಾನಸೌಧದ ಪೂರ್ವ ದ್ವಾರದ ಬಳಿ ಪ್ರತ್ಯೇಕ ರ್‍ಯಾಂಪ್‌ ವ್ಯವಸ್ಥೆ ಮಾಡಲಾಗಿದೆ. ಇನ್ನು ಬಜೆಟ್‌ ದಿನ ಕುಳಿತುಕೊಂಡೇ ಬಜೆಟ್‌ ಭಾಷಣ ಓದಲಿದ್ದಾರೆ.

ಮಾ.4ರಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಬೆಂಗಳೂರು: ವಿಧಾನಮಂಡಲ ಅಧಿವೇಶನ ಮಾ.3 ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಪ್ರತಿಪಕ್ಷಗಳನ್ನು ಸಮರ್ಥವಾಗಿ ಎದುರಿಸುವ ಕುರಿತು ಚರ್ಚಿಸಲು ಮಾ.4 ರಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ.