ಇಂದಿನಿಂದ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ

| Published : Jan 26 2024, 01:47 AM IST

ಸಾರಾಂಶ

ಜ.26 ರಿಂದ 28 ರವರೆಗೆ ಮಡಿಕೇರಿ ನಗರದ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಜ.26ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಉದ್ಘಾಟಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ತೋಟಗಾರಿಕೆ ಇಲಾಖೆಯು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಇತರೆ ಅಭಿವೃದ್ದಿ ಇಲಾಖೆಗಳ ಸಹಯೋಗದೊಂದಿಗೆ ಭಾರತ ದೇಶದ ಗಣರಾಜ್ಯೋತ್ಸವದ ಪ್ರಯುಕ್ತ ಜ.26 ರಿಂದ 28 ರವರೆಗೆ ನಗರದ ರಾಜಾಸೀಟು ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿದೆ.

ಫಲಪುಷ್ಪ ಪ್ರದರ್ಶನವನ್ನು ಜ.26ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಉದ್ಘಾಟಿಸಲಿದ್ದಾರೆ. ಜಿಲ್ಲೆಯ ಮಾನ್ಯ ಶಾಸಕರುಗಳು ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ.

ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ ಸುಮಾರು 15,000 ಸಂಖ್ಯೆಯ ಇಪ್ಪತ್ತು ಜಾತಿಯ ಹೂವುಗಳಾದ ಸಾಲ್ವಿಯ, ಸೇವಂತಿಗೆ, ಚಂಡು ಹೂ, ಜೀನಿಯಾ, ಡಯಾಂಥಸ್, ಆಸ್ಟರ್, ವಿಂಕಾ ರೋಸಿಯಾ, ಕಾಕ್ಸ್ ಕೋಂಬ್, ಡೇಲಿಯಾ, ಇತ್ಯಾದಿಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ಬೆಳೆಯಲಾಗಿದೆ.

ಈ ವರ್ಷದ ಪ್ರಮುಖ ಆಕರ್ಷಣೆಗಳು: ಕೊಡಗಿನ ಕುಲದೇವತೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಕಲಾಕೃತಿಯನ್ನು 15 ಅಡಿ ಎತ್ತರದಲ್ಲಿ 48 ಅಡಿ ಉದ್ದ, 28 ಅಡಿ ಅಗಲದಲ್ಲಿ ಗುಲಾಬಿ, ಸೇವಂತಿಗೆ, ಆಸ್ಟರ್ ಹೂವುಗಳ ವಿವಿಧ ಬಣ್ಣದ ಸುಮಾರು 5 ಲಕ್ಷ ಹೂವುಗಳಿಂದ ಅಲಂಕರಿಸಿ ರಚಿಸಲಾಗಿದೆ.

ಗಣರಾಜ್ಯೋತ್ಸವ ಅಂಗವಾಗಿ ಯೋಧ, ಪಿರಂಗಿ ಹಾಗೂ ರಾಷ್ಟ್ರದ್ವಜದ ಕಲಾಕೃತಿಯನ್ನು ವಿವಿಧ ಬಣ್ಣದ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುವುದು. ತ್ರಿವರ್ಣ ದ್ವಜದ ಕಲಾಕೃತಿ, ಅಣಬೆ ಹಾಗೂ ಬಲೂನು ಮಾದರಿಯ ಕಲಾಕೃತಿಗಳನ್ನು ಹೂವುಗಳಿಂದ ನಿರ್ಮಿಸಲಾಗಿದೆ.

ಮಕ್ಕಳಿಗೆ ಮನರಂಜನೆ ನೀಡುವಂತಹ ಚೋಟಾ ಭೀಮ್, ಬಾರ್ಬಿ ಡಾಲ್, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್, ಅಣಬೆ ಕಲಾಕೃತಿಗಳನ್ನು ವಿವಿಧ ಹೂವುಗಳಿಂದ ಅಲಂಕರಿಸಿ ಪೋಟೋ ಪ್ರೇಮ್, ಸೆಲ್ಫಿ ಜೋನ್ ಮಾದರಿಗಳನ್ನು ರಚಿಸಲಾಗಿದೆ.

ವಿವಿಧ ಕ್ಷೇತ್ರಗಳ ಗಣ್ಯರುಗಳ ಕಲಾಕೃತಿಗಳನ್ನು ಹಣ್ಣು/ ತರಕಾರಿಗಳಿಂದ ಕೆತ್ತನೆ ಮಾಡಿ ಪ್ರದರ್ಶಿಸಲಾಗುವುದು. ವಿವಿಧ ಅಲಂಕಾರಿಕ ಗಿಡಗಳು, ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆಯ ಪ್ರದರ್ಶಗಳನ್ನು ಏರ್ಪಡಿಸಲಾಗುವುದು. ಈ ರೀತಿಯಾಗಿ ಹದಿಮೂರು ವಿವಿಧ ರೀತಿಯ ಹೂವಿನ ಕಲಾಕೃತಿಗಳನ್ನು ಒಟ್ಟು 7.5 ರಿಂದ 8 ಲಕ್ಷ ಸಂಖ್ಯೆಯ ಸೇವಂತಿಗೆ, ಆರ್ಕಿಡ್, ಡೆಸ್ಸಿ ಹಾಗೂ ವಿವಿಧ ಹೂವುಗಳಿಂದ ಅಲಂಕರಿಸಿ ನಿರ್ಮಾಣ ಮಾಡಲಾಗುವುದು.

ಗಾಂಧಿ ಮೈದಾನದಲ್ಲಿ 60 ವಿವಿದ ವಸ್ತು ಪ್ರದರ್ಶನ ಮಳಿಗೆಯನ್ನು ನಿರ್ಮಿಸಲಾಗುವುದು, ಇದರಲ್ಲಿ 10 ಮಳಿಗೆಯನ್ನು ತೋಟಗಾರಿಕೆ, ಕಾಫಿ ಮಂಡಳಿ, ಕೃಷಿ, ಪಶುಪಾಲನೆ, ಮೀನುಗಾರಿಕೆ, ಹಾಪ್ ಕಾಮ್ಸ್, ಕೈಗಾರಿಕೆ ವಾಣಿಜ್ಯ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಕಾಯ್ದಿರಿಸಲಾಗಿದೆ. 50 ಮಳಿಗೆಯಲ್ಲಿ ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ.

ತೋಟಗಾರಿಕೆಯಲ್ಲಿ ಆಸಕ್ತಿಯಿರುವ ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಒಣ ಹೂ ಜೋಡಣೆ, ಬಿಡಿ ಹೂಗಳ ಜೋಡಣೆ, ಇಕೆಬಾನ, ರಂಗೋಲಿ ಸ್ಪರ್ಧೆಗಳನ್ನು ರಾಜಾಸೀಟಿನ ಒಳಭಾಗದಲ್ಲಿ ಆಯೋಜಿಸಲಾಗುವುದು. ಆಸಕ್ತರು ಶುಕ್ರವಾರ ಬೆಳಗ್ಗೆ 8 ಗಂಟೆಗೆ ರಾಜಾಸೀಟು ಉದ್ಯಾನವನದಲ್ಲಿ (ದೂರವಾಣಿ ಸಂಖ್ಯೆ: 9448613355) ಹೆಸರನ್ನು ನೋಂದಾಯಿಸಿಕೊಂಡು ಸ್ಪರ್ಧೆಗಳಲ್ಲಿ ಭಾಗವಹಿಸಬಹುದು.

ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ಸಾರ್ವಜನಿಕರಿಗೆ 20 ರುಪಾಯಿ ಪ್ರವೇಶ ಶುಲ್ಕ ಹಾಗೂ ಶಾಲೆಯಿಂದ ಭಾಗವಹಿಸುವ ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶ ನೀಡಲು ತೀರ್ಮಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಯೋಗೀಶ್ ತಿಳಿಸಿದ್ದಾರೆ.