ಗದಗದಲ್ಲಿ ೧೦ರಿಂದ ೧೨ರ ವರೆಗೆ ಫಲಪುಷ್ಪ ಪ್ರದರ್ಶನ, ಕಲಾಕೃತಿಗಳ ಪ್ರದರ್ಶನ

| Published : Feb 09 2024, 01:45 AM IST

ಗದಗದಲ್ಲಿ ೧೦ರಿಂದ ೧೨ರ ವರೆಗೆ ಫಲಪುಷ್ಪ ಪ್ರದರ್ಶನ, ಕಲಾಕೃತಿಗಳ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಆಡಳಿತ, ಜಿಪಂ, ಹಾಗೂ ತೋಟಗಾರಿಕೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಫಲಪುಷ್ಪ ಪದರ್ಶನ-೨೦೨೪ನ್ನು ಫೆ.೧೦ ರಿಂದ ೧೨ ರವರೆಗೆ ೩ ದಿನಗಳ ಕಾಲ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಆಯೋಜಿಸಲಾಗಿದೆ.

ಗದಗ: ಜಿಲ್ಲಾ ಆಡಳಿತ, ಜಿಪಂ, ಹಾಗೂ ತೋಟಗಾರಿಕೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಫಲಪುಷ್ಪ ಪದರ್ಶನ-೨೦೨೪ನ್ನು ಫೆ.೧೦ ರಿಂದ ೧೨ ರವರೆಗೆ ೩ ದಿನಗಳ ಕಾಲ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ಸಭಾ ಭವನದಲ್ಲಿ ಆಯೋಜಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಫೆಬ್ರವರಿ ೧೦ರಂದು ಬೆಳಗ್ಗೆ ೯.೩೦ಕ್ಕೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿವಿಧ ಗಣ್ಯರುಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ವೈವಿಧ್ಯಮಯ ವಿಶೇಷತೆಯುಳ್ಳ ಕಲಾಕೃತಿಗಳ ಪ್ರದರ್ಶನ: ತೋಟಗಾರಿಕೆ ಬೆಳೆಗಳಾದ ಹಣ್ಣು, ಹೂವು, ತರಕಾರಿ ಮತ್ತು ಸಾಂಬಾರು ಪದಾರ್ಥಗಳಿಂದ, ವೈವಿಧ್ಯಮಯ ವಿಶೇಷತೆಯುಳ್ಳ ಕಲಾಕೃತಿಗಳನ್ನು ತಯಾರಿಸಲಾಗುತ್ತಿದೆ. ಗದುಗಿನ ವೀರನಾರಾಯಣ ದೇವಸ್ಥಾನದ ಪ್ರತಿಕೃತಿಯನ್ನು ವಿವಿಧ ಹೂವುಗಳಿಂದ ವಿಶೇಷವಾಗಿ ಗುಲಾಬಿ ಹೂವುಗಳಿಂದ ರಚಿಸಲಾಗುತ್ತಿದೆ. ಮೈಸೂರು ಅರಮನೆಯಲ್ಲಿ ದಸರಾ ಅಂಬಾರಿ ಹೊರುತ್ತಿದ್ದ, ಅರ್ಜುನ ಆನೆಯ ಪ್ರತಿರೂಪವನ್ನು ವೈವಿದ್ಯಮಯ ಹೂವುಗಳಿಂದ ತಯಾರಿಸಲಾಗುತ್ತಿದೆ. ಕರ್ನಾಟಕ ರಾಜ್ಯವು ೫೦ನೇ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕರ್ನಾಟಕ ಸುವರ್ಣ ಸಂಭ್ರಮ ೫೦ ಶೀರ್ಷಿಕೆಯನ್ನು ಹೂವುಗಳಿಂದ ರಚಿಸಿ ಸೆಲ್ಫಿ ಪಾಯಿಂಟ್‌ನ್ನು ಮಾಡಲಾಗುತ್ತಿದೆ.

ಹಣ್ಣು, ಹೂವು, ತರಕಾರಿ ಮತ್ತು ಸಾಂಬಾರು ಪದಾರ್ಥಗಳಿಂದ ಮತದಾನದ ಜಾಗೃತಿ ಮೂಡಿಸಲು ಇ.ವಿ.ಎಂ ಮಶಿನ್, ನವಿಲು ವನ, ಜಲಪಾತ, ಸಂಗೀತಾ ಸಾಧನಗಳಾದ ತಬಲಾ, ಪಿಯಾನೋ ಮುಂತಾದವುಗಳನ್ನು ವರ್ಟಿಕಲ್ ಗಾರ್ಡನ್ ಇದರ ಜೊತೆಗೆ ಜೇನು ಸಾಗಾಣಿಕೆ, ಅಣಬೆ ಕೃಷಿ ಬಗ್ಗೆ ಮಾಹಿತಿ ಹಾಗೂ ವಿವಿಧ ಜಾತಿಯ ಅಣಬೆಗಳನ್ನು ಪ್ರದರ್ಶನದಲ್ಲಿ ಇಡಲಾಗುತ್ತಿದೆ.

ಬಾಳೆದಿಂಡಿನಿಂದ ಕೆತ್ತನೆ ಮಾಡಿದ ಗಣಪತಿ ಕಲಾಕೃತಿ ತಯಾರಿಸಲಾಗುತ್ತಿದೆ. ಗಂಗೂಬಾಯಿ ಹಾನಗಲ್, ಹುಯಿಲಗೋಳ ನಾರಾಯಣರಾವ್, ಡಾ. ಭೀಮಸೇನ ಜೋಶಿ, ಡಾ.ಪುಟ್ಟರಾಜ ಗವಾಯಿ, ಕೆ.ಎಚ್.ಪಾಟೀಲ, ಸುನೀಲ ಜೋಶಿ ಅವರುಗಳ ಭಾವಚಿತ್ರವನ್ನು ಹಣ್ಣು ತರಕಾರಿಯಲ್ಲಿ ಕೆತ್ತನೆ ಮಾಡಲಾಗುತ್ತಿದೆ.

ಡಾ. ಎಂ.ಎಸ್.ಸ್ವಾಮಿನಾಥನ್ ಅವರ ಭಾವಚಿತ್ರವನ್ನು ರಂಗೋಲಿಯಲ್ಲಿ ರಚಿಸಲಾಗುತ್ತಿದೆ.ಶ್ರೀ ಜಗಜ್ಯೋತಿ ಬಸವೇಶ್ವರರ ಮರಳಿನ ಕಲಾಕೃತಿಯನ್ನು ನಿರ್ಮಿಸಲಾಗುತ್ತಿದೆ. ಪ್ರಸಕ್ತ ವರ್ಷ ಭಾರತೀಯ ಸಂವಿಧಾನವನ್ನು ಅಂಗೀಕರಿಸಿದ ೭೫ನೇ ವರ್ಷದ ಸಂಭ್ರಮದಲ್ಲಿರುವ ಕಾರಣ ಡಾ. ಬಿ.ಆರ್.ಅಂಬೇಡ್ಕರ ಅವರ ಸಂವಿಧಾನ ಪೀಠಿಕೆಯನ್ನು ಹಣ್ಣು, ಹೂವು, ತರಕಾಯಿಂದ ಅಲಂಕೃತಗೊಳಿಸಲಾಗುತ್ತಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ರೈತರು ಬೆಳೆದ ವಿವಿಧ ಹಣ್ಣು ತರಕಾರಿ, ಹೂವು, ತೋಟದ ಬೆಳೆ ಮತ್ತು ಸಾಂಬಾರು ಬೆಳೆ ಉತ್ಪನ್ನಗಳ ಪ್ರದರ್ಶನ ಹಾಗೂ ಬೋನ್ಸಾಯ್ ಗಿಡಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಮೀನುಗಾರಿಕೆ ಇಲಾಖೆಯಿಂದ ಸುಂದರವಾದ (ಅಕ್ವೇರಿಯಂ) ಪ್ರದರ್ಶನ ಏರ್ಪಡಿಸಲಾಗುತ್ತಿದೆ.

ತೋಟಗಾರಿಕೆ ಹಾಗೂ ಕೃಷಿಗೆ ಸಂಬಂಧಿಸಿದ ಉಪಕಸುಬುಗಳಿಂದ ತಯಾರಿಸಿದ ಮೌಲ್ಯವರ್ಧನ ಮಾಡಿದ ಉತ್ಪನ್ನಗಳನ್ನು ಪ್ರದರ್ಶನ ಮಳಿಗೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯ, ಐಸಿಏಆರ್ ಕೆ.ಎಚ್.ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹುಲಕೋಟಿ, ಕೃಷಿ ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ ಮುಂತಾದ ಇಲಾಖೆಯವರು ಪ್ರದರ್ಶನದಲ್ಲಿ ಭಾಗವಹಿಸಿ ಇಲಾಖೆಗಳ ಯೋಜನೆಗಳನ್ನು ತಿಳಿಸಿಕೊಡುವುದರ ಜೊತೆಗೆ ಮಾರ್ಗದರ್ಶನವನ್ನು ಸಹ ನೀಡಲಿದ್ದಾರೆ.

ಫಲಪುಷ್ಪ ಪ್ರದರ್ಶನವು ೩ ದಿನಗಳ ಕಾಲ ನಡೆಯಲಿದ್ದು. ಈ ಪ್ರದರ್ಶನದಲ್ಲಿ ಜಿಲ್ಲೆಯ ರೈತರು, ಸಾರ್ವಜನಿಕರು, ಶಾಲಾ ಮಕ್ಕಳು ಪೋಷಕರು ಭೇಟಿ ನೀಡಿ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಶಶಿಕಾಂತ ಕೋಟಿಮನಿ ಹೇಳಿದರು.