ಇಂಧನ ದರ ಏರಿಕೆ ವಿರೋಧಿಸಿ ರಾಜ್ಯ ಸರ್ಕಾರ ವಿರುದ್ಧ ಜೂ.20ರಂದು ಎಲ್ಲ ತಾಲೂಕುಗಳಲ್ಲಿ ಬಿಜೆಪಿ ರಸ್ತೆ ತಡೆ

| Published : Jun 20 2024, 01:15 AM IST

ಇಂಧನ ದರ ಏರಿಕೆ ವಿರೋಧಿಸಿ ರಾಜ್ಯ ಸರ್ಕಾರ ವಿರುದ್ಧ ಜೂ.20ರಂದು ಎಲ್ಲ ತಾಲೂಕುಗಳಲ್ಲಿ ಬಿಜೆಪಿ ರಸ್ತೆ ತಡೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಇಂಧನ ಮೇಲಿನ ತೆರಿಗೆ ಇಳಿಸುವ ವರೆಗೆ ಬಿಜೆಪಿ ಹೋರಾಟ ನಡೆಸಲಿದೆ. ಬೆಳಗ್ಗೆ 10ರಿಂದ 11 ಗಂಟೆ ಅವಧಿಯಲ್ಲಿ ರಸ್ತೆ ತಡೆ ಪ್ರತಿಭಟನೆಯಲ್ಲಿ ಸಾರ್ವಜನಿಕರೂ ಭಾಗವಹಿಸಲಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕರ್ನಾಟಕದಲ್ಲಿ ಡೀಸೆಲ್‌ ಮತ್ತು ಪೆಟ್ರೋಲ್‌ಗೆ ರಾಜ್ಯ ಸರ್ಕಾರ ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ರಾಜ್ಯ ಬಿಜೆಪಿ ಕರೆಯಂತೆ ದ.ಕ.ಜಿಲ್ಲೆಯಲ್ಲೂ ಜೂ.20ರಂದು ಎಲ್ಲ ತಾಲೂಕು ಕೇಂದ್ರಗಳಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಯಲಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಇಂಧನ ಮೇಲಿನ ತೆರಿಗೆ ಇಳಿಸುವ ವರೆಗೆ ಬಿಜೆಪಿ ಹೋರಾಟ ನಡೆಸಲಿದೆ. ಬೆಳಗ್ಗೆ 10ರಿಂದ 11 ಗಂಟೆ ಅವಧಿಯಲ್ಲಿ ರಸ್ತೆ ತಡೆ ಪ್ರತಿಭಟನೆಯಲ್ಲಿ ಸಾರ್ವಜನಿಕರೂ ಭಾಗವಹಿಸಲಿದ್ದಾರೆ ಎಂದರು.

ಕಾಂಗ್ರೆಸ್‌ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದು 13 ತಿಂಗಳು ಕಳೆದಿದೆ. ಈ ಅವಧಿಯಲ್ಲಿ ಅಬಕಾರಿ, ವಿದ್ಯುತ್‌, ಮುದ್ರಾಂಕ, ಈಗ ಇಂಧನ ಬೆಲೆ ಏರಿಕೆ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಈ ರೀತಿ ಬೆಲೆ ಏರಿಕೆ ಮಾಡುವ ಮೂಲಕ ಅವೈಜ್ಞಾನಿಕ ವಿಧಾನ ಅನುಸರಿಸಲಾಗುತ್ತಿದೆ. ಸರ್ಕಾರದ ಈ ನಡೆ ನಾಚಿಕೆಗೇಡಿನ ಸಂಗತಿ ಎಂದರು.

ಮುಖಂಡರಾದ ಕಿಶೋರ್‌ ಕುಮಾರ್‌, ರಾಜಗೋಪಾಲ ರೈ, ಅರುಣ್‌ ಶೇಟ್‌, ಮನೋಹರ್‌, ಸತೀಶ್‌ ಆರ್ವಾರ್‌ ಇದ್ದರು.

------------ ಇಂದು ತೈಲಬೆಲೆ ಏರಿಕೆ ಖಂಡಿಸಿ ಬಂಟ್ವಾಳದಲ್ಲಿ ಬಿಜೆಪಿ ಪ್ರತಿಭಟನೆ

ಬಂಟ್ವಾಳ: ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡಿಸೇಲ್‌ ಬೆಲೆ ಏರಿಕೆ ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬಂಟ್ವಾಳ ಮಂಡಲದ ವತಿಯಿಂದ ಬಿ.ಸಿ. ರೋಡಿನ ಪ್ಲೈ ಓವರ್ ಅಡಿಭಾಗದಲ್ಲಿ ಜೂ.೨೦ರಂದು ಗುರುವಾರ ಬೆಳಗ್ಗೆ 10 ಗಂಟೆಗೆ ಬೃಹತ್ ಪ್ರತಿಭಟನೆ ನಡೆಯಲಿದೆ.ಗ್ಯಾರಂಟಿ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ಇದೀಗ ಜನರ ರಕ್ತ ಹೀರುವ ಕೆಲಸಕ್ಕೆ ಮುಂದಾಗಿದೆ. ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆ ಮಾಡಿದ ಸರ್ಕಾರಕ್ಕೆ ಆರ್ಥಿಕ ವ್ಯವಸ್ಥೆಯನ್ನು ಸರಿದೂಗಿಸಲು ಸಾಧ್ಯವಾಗದೆ ಒದ್ದಾಟ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣಕಾಸಿನ ಭಾಗ್ಯ ದೊರೆತಿಲ್ಲ. ಜನರಿಗೆ ಬೇಕಾದ ಮೂಲಭೂತವಾದ ಸೌಕರ್ಯಗಳನ್ನು ಒದಗಿಸಿಲು ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಆಡಳಿತ ಅವಧಿಯಲ್ಲಿ ಆಗುತ್ತಿರುವ ಬೆಲೆ ಏರಿಕೆ ಜನಸಾಮಾನ್ಯರ ಜೀವನದ ಮೇಲೆ ಪ್ರಭಾವ ಬೀರುತ್ತಿದ್ದು, ರಾಜ್ಯ ಸರ್ಕಾರದ ಬೆಲೆ ಏರಿಕೆ ನಿರ್ಧಾರದ ವಿರುದ್ಧದ ಸಂಘಟಿತ ಹೋರಾಟದಲ್ಲಿ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕ ರಾಜೇಶ್‌ ನಾಯ್ಕ್‌ ಉಳಿಪ್ಪಾಡಿಗುತ್ತು ಮನವಿ ಮಾಡಿದ್ದಾರೆ.