ಕರಾವಳಿ ಕಾವಲು ಪೊಲೀಸ್‌ ಇಲಾಖೆಗೆ ಇಂಧನ ಕಡಿತ!

| Published : Feb 15 2025, 12:31 AM IST

ಸಾರಾಂಶ

ಇದುವರೆಗೆ ಇಲಾಖೆಯ 2 ಗೂರ್ಖ ಜೀಪ್‌ಗಳಿಗೆ ಮಾಸಿಕ 250 ಲೀಟರ್‌ ಮತ್ತು 11 ಬೊಲೆರೋ ವಾಹನಗ‍ಳಿಗೆ 200 ಲೀಟರ್ ವರೆಗೆ ಇಂಧನ ಬಳಕೆಗೆ ಅವಕಾಶ ಇತ್ತು. ಇದೀಗ ಮಿತವ್ಯಯದ ಹಿನ್ನೆಲೆಯಲ್ಲಿ ಅದನ್ನು 175 ಲೀಟರ್ ಮತ್ತು 150 ಲೀಟರ್‌ಗಳಿಗೆ ಇಳಿಸಲಾಗಿದೆ. ಬೋಟುಗಳಿಗೆ 600 ಲೀಟರ್ ಇಂಧನ ಪೂರೈಕೆಯನ್ನು 300 ಲೀಟರ್‌ಗಳಿಗೆ ಇಳಿಸಲಾಗಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯದ ಕರಾವಳಿಯ 3 ಜಿಲ್ಲೆಗಳಲ್ಲಿ ಕಾರ್ಯಾಚರಿಸುವ ಕರಾವಳಿ ಕಾವಲು ಪೊಲೀಸ್ ಇಲಾಖೆಯ ವಾಹನ ಮತ್ತು ಬೋಟುಗಳಿಗೆ ಇಂಧನ ಕೋಟಾ ಕಡಿತಗೊಳಿಸಲಾಗಿದೆ.

ರಾಜ್ಯ ಸರ್ಕಾರದ ಆರ್‌ಪಿಐ ವಿಭಾಗವು ಆರ್ಥಿಕ ಮಿತವ್ಯಯವನ್ನು ಸಾಧಿಸಬೇಕು ಎಂದು ಕರಾವಳಿ ಕಾವಲು ಪೊಲೀಸ್‌ ಇಲಾಖೆಗೆ ಪತ್ರ ಬರೆದಿದ್ದು, ಅದರಂತೆ ಕಳೆದ 2 ತಿಂಗಳಿಂದ ಇಲಾಖೆಯ ವಾಹನ - ಬೋಟುಗಳ ಇಂಧನ ಕೋಟವನ್ನು ಕಡಿತಗೊಳಿಸಲಾಗಿದೆ.

ರಾಜ್ಯದ ಆಂತರಿಕ ಭದ್ರತಾ ವಿಭಾಗದಡಿ ಕೆಲಸ ಮಾಡುವ ಕರಾವಳಿ ಕಾವಲು ಪೊಲೀಸ್‌ ಇಲಾಖೆಗೆ ಸಮುದ್ರ ತೀರವನ್ನು ಯಾವುದೇ ಬಾಹ್ಯ ಅಪಾಯಗಳಿಂದ ರಕ್ಷಿಸುವುದು ಮುಖ್ಯ ಕೆಲಸವಾಗಿದೆ. ಈ ಇಲಾಖೆಯು ದಕ್ಷಿಣ ಕನ್ನಡ, ಉಡುಪಿ ಮತ್ತು ಕಾರವಾರ ಜಿಲ್ಲೆಗಳನ್ನೊಳಗೊಂಡಿದ್ದು, 8 ಠಾಣೆಗಳನ್ನು, 13 ವಾಹನಗಳನ್ನು ಮತ್ತು 15 ಬೋಟುಗಳೊಂದಿಗೆ ಸತತ ಗಸ್ತು ಕಾರ್ಯವನ್ನು ಮಾಡುತ್ತಿದೆ.

ಇದುವರೆಗೆ ಇಲಾಖೆಯ 2 ಗೂರ್ಖ ಜೀಪ್‌ಗಳಿಗೆ ಮಾಸಿಕ 250 ಲೀಟರ್‌ ಮತ್ತು 11 ಬೊಲೆರೋ ವಾಹನಗ‍ಳಿಗೆ 200 ಲೀಟರ್ ವರೆಗೆ ಇಂಧನ ಬಳಕೆಗೆ ಅವಕಾಶ ಇತ್ತು. ಇದೀಗ ಮಿತವ್ಯಯದ ಹಿನ್ನೆಲೆಯಲ್ಲಿ ಅದನ್ನು 175 ಲೀಟರ್ ಮತ್ತು 150 ಲೀಟರ್‌ಗಳಿಗೆ ಇಳಿಸಲಾಗಿದೆ. ಬೋಟುಗಳಿಗೆ 600 ಲೀಟರ್ ಇಂಧನ ಪೂರೈಕೆಯನ್ನು 300 ಲೀಟರ್‌ಗಳಿಗೆ ಇಳಿಸಲಾಗಿದೆ.

ಈ ರೀತಿ ಇಂಧನ ಪೂರೈಕೆ ಕಡಿಮೆಗೊಳಿಸುವುದರಿಂದ ಬಹಳ ದೊಡ್ಡ ಆರ್ಥಿಕ ಮಿತವ್ಯಯ ಸಾಧ್ಯವಾಗದಿದ್ದರೂ, ಇಲಾಖೆಯ ಕಾರ್ಯಾಚರಣೆಯಲ್ಲಿ ಮಾತ್ರ ಕೆಟ್ಟ ಪರಿಣಾಮಗಳಾಗುತ್ತವೆ. ಇಂಧನ ಕಡಿಮೆ ಬಳಸುವುದಕ್ಕಾಗಿ ಇಲಾಖೆಯ ವಾಹನಗಳ ಮತ್ತು ಸಮುದ್ರದಲ್ಲಿ ಬೋಟುಗಳ ಗಸ್ತನ್ನು ಅನಿವಾರ್ಯವಾಗಿ ಕಡಿಮೆಗೊಳಿಸಬೇಕಾಗುತ್ತದೆ. ಇದು ಕರಾವಳಿಯ ಭದ್ರತೆಯ ದೃಷ್ಟಿಯಿಂದ ಅಪಾಯಕಾರಿಯಾಗುವ ಸಾಧ್ಯತೆ ಇದೆ.