ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಅಮೆರಿಕಾದಲ್ಲಿ ಕನ್ನಡಿಗರೆಲ್ಲರನ್ನೂ ಒಗ್ಗೂಡಿಸಿಕೊಂಡು ಕನ್ನಡದ ಕಂಪನ್ನು ಹರಡುತ್ತಿರುವ ಅಕ್ಕ ಸಂಸ್ಥೆ ವೈವಿಧ್ಯಮಯವಾದ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಆ ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳಿಗೆ ಸರ್ಕಾರ ಮತ್ತು ಸ್ವಾಮೀಜಿಗಳ ಬೆಂಬಲವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.ಭಾನುವಾರ ನಗರದ ಸರ್. ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಮೆರಿಕದ ಅಕ್ಕ ಸಂಸ್ಧೆಯ ಇಪ್ಪತ್ತೈದನೇ ಬೆಳ್ಳಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಅಕ್ಕ ಚಾರಿಟಿ ಓಟ ಹಾಗೂ ೫- ಕೆ ವಾಕಥಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಕ್ಕ ಒಂದು ದೊಡ್ಡ ಸಂಸ್ಥೆಯಾಗಿ ರೂಪುಗೊಂಡಿದೆ. ಕನ್ನಡಿಗರನ್ನು ಒಗ್ಗೂಡಿಸಿಕೊಂಡು ಕನ್ನಡದ ಕಂಪು, ಸಂಸ್ಕೃತಿಯನ್ನು ವಿದೇಶದಲ್ಲೂ ವಿಸ್ತರಿಸುತ್ತಿದೆ. ಅಮೆರಿಕಾದಲ್ಲಿರುವ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಶ್ರಮವಹಿಸುತ್ತಿದೆ. ಆ ಸಂಸ್ಥೆಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದು ತಿಳಿಸಿದರು.ಅಕ್ಕ ಸಂಸ್ಥೆಯ ಅಧ್ಯಕ್ಷರಾಗಿರುವ ಮಧು ರಂಗಯ್ಯ ಮಂಡ್ಯದವರು. ಅವರ ವಿದ್ಯಾಭ್ಯಾಸವೆಲ್ಲಾ ತವರು ನೆಲದಲ್ಲೇ ನಡೆದಿದೆ. ಇದೀಗ ಅಧ್ಯಕ್ಷರಾದ ಬಳಿಕ ತವರೂರಿನಲ್ಲೇ ಬೆಳ್ಳಿ ಹಬ್ಬದ ಅಕ್ಕ ಚಾರಿಟಿ ಓಟವನ್ನು ನಡೆಸಲು ತೀರ್ಮಾನಿಸಿದ್ದರು. ಅದಕ್ಕೆ ನಾವೂ ಸೇರಿದಂತೆ ಜಿಲ್ಲಾಡಳಿತ ಅವರಿಗೆ ನೆರವಾಗಿದ್ದೇವೆ. ಅಮೆರಿಕಾದಿಂದಲೂ ಸಾಕಷ್ಟು ಜನರು ಇಲ್ಲಿಗೆ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಇನ್ನಷ್ಟು ಬೆಂಬಲ ನೀಡುವುದಾಗಿ ಹೇಳಿದರು
ಮಾಜಿ ಸಚಿವ ಪುಟ್ಟರಾಜು ಮಾತನಾಡಿ, ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಕಂಪನ್ನು ಅಮೆರಿಕಾದಲ್ಲಿ ಅಕ್ಕ ಸಂಸ್ಥೆ ಹರಡುತ್ತಿದೆ. ಕಳೆದ ಇಪ್ಪತ್ತು ವರ್ಷಗಳಿಂದ ನಾವೆಲ್ಲರೂ ಅಮೆರಿಕದಲ್ಲಿ ಅಕ್ಕ ಸಂಸ್ಥೆ ಆಯೋಜಿಸುವ ಕನ್ನಡ ಕಾರ್ಯಕ್ರಮಕ್ಕೆ ಹೋಗುತ್ತಿದ್ದೇವೆ. ಮಧುರಂಗಯ್ಯ ಅವರ ಸಾರಥ್ಯದಲ್ಲಿ ಅಕ್ಕ ಸಮ್ಮೇಳನದ ಕುರಿತು ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿಸಲು ೫-ಕೆ ವಾಕಥಾನ್ ಹಮ್ಮಿಕೊಳ್ಳಲಾಗಿದೆ ಎಂದರು.ನಟ ನೆನಪಿರಲಿ ಪ್ರೇಮ್ ಮಾತನಾಡಿ, ನಮ್ಮ ಊರು ನಮ್ಮ ದಾರಿ ಎಂಬ ಕಾರ್ಯಕ್ರಮವನ್ನು ಮಧುರಂಗಯ್ಯ ಅವರು ಮಂಡ್ಯದಲ್ಲಿ ಆಯೋಜಿಸಿದ್ದಾರೆ. ನಾವು ಎಷ್ಟೇ ಬೆಳೆದರೂ ನಮ್ಮ ಊರನ್ನು ಮರೆಯಬಾರದು ಎಂದು ಅಕ್ಕ ಸಂಸ್ಥೆ ರಜತ ಮಹೋತ್ಸವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ವಾಕಥಾನ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ, ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ವಿಶ್ವನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.೫-ಕೆ ವಾಕಥಾನ್
ಅಕ್ಕ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೫-ಕೆ ವಾಕಥಾನ್ ಕಾರ್ಯಕ್ರಮಕ್ಕೆ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ಅವರು ಹಸಿರು ಬಾವುಟ ಪ್ರದರ್ಶಿಸುವ ಮೂಲಕ ಚಾಲನೆ ನೀಡಿದರು. ಮೂರು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿ ವಾಕಥಾನ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.