ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ರೈತರ ಶ್ರೆಯೋಭಿವೃದ್ಧಿಗಾಗಿ ರೈತಮಿತ್ರನಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕು ಮೂಡಲಗಿ ಮತ್ತು ಗೋಕಾಕ ತಾಲೂಕು ಸೇರಿ ₹೫೧೯.೭೨ ಕೋಟಿಗಳನ್ನು ಶೂನ್ಯ ಬಡ್ಡಿದರದಲ್ಲಿ ರೈತರಿಗೆ ವಿತರಿಸಿದೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಸೋಮವಾರ ನಗರದ ಹೊರ ವಲಯದಲ್ಲಿರುವ ಗೋಕಾಕ ಸಪ್ಲಾಯರ್ಸ್ ಸಭಾ ಭವನದಲ್ಲಿ ಮೂಡಲಗಿ ಮತ್ತು ಗೋಕಾಕ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಅದರ ಆಡಳಿತ ಮಂಡಳಿಯ ಸದಸ್ಯರ ಸೌಹಾರ್ದಯುತ ಸಭೆ ಉದ್ಘಾಟಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ರೈತರಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ ಎಂದರು.ಮೂಡಲಗಿ ಮತ್ತು ಗೋಕಾಕ ತಾಲೂಕಿನ ಅಭ್ಯರ್ಥಿಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಪ್ರಕಟಿಸಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಉತ್ತಮ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು. ಈಗಾಗಲೇ ಬೆಳಗಾವಿ, ಖಾನಾಪೂರ, ರಾಮದುರ್ಗ ತಾಲೂಕುಗಳಲ್ಲಿ ಬ್ಯಾಂಕಿನ ಚುನಾವಣೆ ಸಂಬಂಧ ಸಭೆಗಳನ್ನು ನಡೆಸಲಾಗಿದೆ. ಚುನಾವಣೆಗೆ ಬೇಕಾದ ಪೂರ್ಣ ತಯಾರಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ೧೬ ಸ್ಥಾನಗಳ ಪೈಕಿ ೧೩ ಸ್ಥಾನಗಳಲ್ಲಿ ತಮ್ಮ ಮೈತ್ರಿಕೂಟದ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮುಂಬರುವ ಅಕ್ಟೋಬರ್ ೧೯ ರಂದು ನಡೆಯುವ ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಈಗಿರುವ ಆಡಳಿತ ಮಂಡಳಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಸಾಲ ನೀಡುವುದರ ಜತೆಗೆ ರೈತ ಸ್ನೇಹಿಯಾಗಿ ಕೆಲಸ ಮಾಡುತ್ತೇವೆ. ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ ಅವರ ನೇತೃತ್ವದ ಆಡಳಿತ ಮಂಡಳಿಯು ರೈತರ ಸೇವೆಗೆ ಬದ್ಧವಿದೆ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.ಬ್ಯಾಂಕ್‌ನಿಂದ ರೈತರಿಗೆ ಅನೇಕ ಸಾಲ ಸೌಲಭ್ಯಗಳನ್ನು ವಿತರಿಸಲು ಕ್ರಮ ಕೈಕೊಳ್ಳಲಾಗುವುದು. ಮತ್ತೊಂದು ಬಾರಿ ಅಧಿಕಾರಕ್ಕೆ ಬರಲು ರೈತರ ಸಹಕಾರ, ಆಶೀರ್ವಾದ ಬೇಕೇ ಬೇಕು. ಈ ದಿಸೆಯಲ್ಲಿ ಸಹಕಾರಿ ತತ್ವಗಳನ್ನು ಪಾಲನೆ ಮಾಡಿಕೊಂಡು ಬರುತ್ತಿರುವ ನಮ್ಮ ಗುಂಪಿಗೆ ನಿಮ್ಮೆಲ್ಲರ ಆಶೀರ್ವಾದವು ಅವಶ್ಯಕ ಎಂದರು.ಪ್ರಸ್ತುತ ೬ ಸಾವಿರ ಕೋಟಿ ರೂಪಾಯಿ ಇರುವ ಠೇವಣಿಯನ್ನು ಮುಂದಿನ ದಿನಗಳಲ್ಲಿ ೮ ಸಾವಿರ ಕೋಟಿ ರೂಪಾಯಿ ತನಕ ವಿಸ್ತರಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಜಿಲ್ಲೆಯ ರೈತರಿಗೆ ಈಗಾಗಲೇ ₹೩೪೦೦ ಕೋಟಿ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿ ಸಂಘಗಳಿಗೆ ಪತ್ತನ್ನು ಹೆಚ್ಚಿಸುವ ಮೂಲಕ ರೈತರ ಆರ್ಥಿಕ ಅಭಿವೃದ್ಧಿ ಜತೆಗೆ ಸಂಘಗಳ ಬಲವರ್ಧನೆಗಾಗಿ ಶ್ರಮಿಸುವ ಇರಾದೆ ತಮ್ಮದಾಗಿದೆ ಎಂದು ತಿಳಿಸಿದರು.ಮಾಜಿ ಶಾಸಕ ಮತ್ತು ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡ್ಡಗೌಡ್ರ ಮಾತನಾಡಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ದೂರದೃಷ್ಟಿ ನಾಯಕತ್ವದಲ್ಲಿ ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಸಹಕಾರಿ ರಂಗವು ಪ್ರಗತಿ ಸಾಧಿಸುತ್ತಿದೆ. ಎಲ್ಲರೂ ತನಗಾಗಿ, ತನಗಾಗಿ ಎಲ್ಲರೂ ಎಂಬ ಸಹಕಾರಿ ತತ್ವ ದಡಿ ಬಾಲಚಂದ್ರ ಜಾರಕಿಹೊಳಿ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಯನ್ನು ಮಾಡುತ್ತಿದ್ದಾರೆ. ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದರು.ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಮಾಜಿ ಶಾಸಕ ಅರವಿಂದ ಪಾಟೀಲ, ಉಪಾಧ್ಯಕ್ಷ ಸುಭಾಸ ಢವಳೇಶ್ವರ, ನಿರ್ದೇಶಕರಾದ ರಾಜೇಂದ್ರ ಅಂಕಲಗಿ, ಎಸ್.ಎಸ್.ಢವಣ, ನೀಲಕಂಠ ಕಪ್ಪಲಗುದ್ದಿ, ಬೆಳಗಾವಿ ಟಿಎಪಿಸಿಎಂಎಸ್ ಅಧ್ಯಕ್ಷ ಶಂಕರಗೌಡ ಪಾಟೀಲ, ಶಂಕರಗೌಡ ಪಾಟೀಲ ಮಲ್ಲಾಪೂರ ಅವರು ಉಪಸ್ಥಿತರಿದ್ದರು.₹೫೧೯.೭೨ ಕೋಟಿ ಪತ್ತು ಮಂಜೂರು
ಮೂಡಲಗಿ ಮತ್ತು ಗೋಕಾಕ ತಾಲೂಕಿನಲ್ಲಿ ೧೧೪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿದ್ದು, ೨೦೧೪-೧೫ ರಲ್ಲಿ ೧೭೩.೫೦ ಕೋಟಿ ಪತ್ತು ಮಂಜೂರು ಮಾಡಲಾಗಿದೆ. ಇದೇ ಸಾಲಿನಲ್ಲಿ ₹೫೧೯.೭೨ ಕೋಟಿ ಪತ್ತು ಮಂಜೂರು ಮಾಡಲಾಗಿದೆ.ಇದರಿಂದ ಕಳೆದ ಹತ್ತು ವರ್ಷದಲ್ಲಿ ೩೪೬.೨೨ ಕೋಟಿ ರೂಪಾಯಿ ಪತ್ತು ಹೆಚ್ಚಳವಾಗಿದೆ. ೪೮೧.೦೭ ಕೋಟಿ ರೂಪಾಯಿ ಡಿಕೆಸಿಸಿ ಸಾಲ, ೧.೧೩ ಕೋಟಿ ರೂಪಾಯಿ ಗೋಡಾವಣ ಸಾಲ, ೨.೮೯ ಕೋಟಿ ರೂಪಾಯಿ ಎಂ.ಟಿ ಟ್ರ್ಯಾಕ್ಟರ್ ಸಾಲ, ಒಟ್ಟು ಠೇವುಗಳು ೧೪೭.೫೦ ಕೋಟಿ ರೂಪಾಯಿ, ೧೭.೩೮ ಕೋಟಿ ರೂಪಾಯಿ ಚಿನ್ನದ ಸಾಲ, ೧೬.೭೦ ಕೋಟಿ ರೂಪಾಯಿ ಕೃಷಿಯೇತರ ಸಾಲ, ೨.೧೫ ಕೋಟಿ ರೂಪಾಯಿ ನಗದು ಪತ್ತಿನ ಸಾಲ, ೨.೯೪ ಕೋಟಿ ರೂಪಾಯಿ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಿಸಲಾಗಿದೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ವಿವರಿಸಿದರು.