ಸಾರಾಂಶ
- ಶಾಲಾ ಅಂಗಳದಲ್ಲಿ ನುಡಿತೋರಣ ಸಮಾರೋಪದಲ್ಲಿ ಶಾಸಕ ಬಸವರಾಜ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಬರುವ ತಿಂಗಳು ಸಂತೆಬೆನ್ನೂರು ಗ್ರಾಮದಲ್ಲಿ ನಡೆಯಲಿರುವ ತಾಲೂಕುಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಸಕಲ ರೀತಿಯ ಸಹಕಾರಗಳನ್ನು ನೀಡಲಿದ್ದೇನೆ. ಕನ್ನಡ ಸಾಹಿತ್ಯವನ್ನು ಬೆಳೆಸಲು ಸಂಪೂರ್ಣ ಬೆಂಬಲ ನೀಡುವೆ ಎಂದು ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ತಾಲೂಕು ಕ.ಸಾ.ಪ. ವತಿಯಿಂದ ಏರ್ಪಡಿಸಿದ್ದ ಶಾಲಾ ಅಂಗಳದಲ್ಲಿ ನುಡಿತೋರಣ ಸಮಾರೋಪ ಸಮಾರಂಭ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆಯ ಸಹಕಾರದಿಂದ ಕಳೆದ ನವೆಂಬರ್ ತಿಂಗಳಿನಲ್ಲಿ ತಾಲೂಕಿನ ಆಯ್ದ 18 ಪ್ರೌಢಶಾಲೆಗಳಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಂಡು, ಶಾಲಾ ಅಂಗಳದಲ್ಲಿ ನುಡಿತೋರಣ ಎಂಬ ವಿಷಯಾಧಾರಿತ ವಿನೂತನ ಸಾಹಿತ್ಯ ಕಾರ್ಯಕ್ರಮ ಯಶಸ್ವಿಗೊಳಿಸಿರುವುದು ಶ್ಲಾಘನೀಯ. ಕನ್ನಡ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರಗಳು ಸಮಾಜವನ್ನು ಸರಿದಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಹೇಳಿದರು.ತಾಲೂಕು ಕ.ಸಾ.ಪ. ಅಧ್ಯಕ್ಷ ಎಲ್.ಜಿ. ಮಧುಕುಮಾರ್ ಮಾತನಾಡಿ, ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ₹25 ಕೋಟಿ ನೀಡುವ ಜೊತೆಗೆ ಬೆಳಗಾವಿಯ ಚಳಿಗಾಲದ ಅದಿವೇಶನ ಅವಧಿಯನ್ನು ಸಮ್ಮೇಳನದ ದೃಷ್ಠಿಯಿಂದ ಒಂದು ದಿನ ಮೊಟಕುಗೊಳಿಸಿದ ಸರ್ಕಾರದ ನಡೆ ಕನ್ನಡದ ಸಾರಸ್ವತ ಲೋಕದ ಮೇಲಿನ ಕಾಳಜಿ ತೋರುತ್ತದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ ಮಾತನಾಡಿ, ಶಾಲಾ ಮಕ್ಕಳಲ್ಲಿ ನಾಡು-ನುಡಿಯ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಶೈಕ್ಷಣಿಕ ವಿಕಾಸಕ್ಕೆ ಪೂರಕವಾಗುವಂತೆ ನಡೆಸಿರುವ ಕ.ಸಾ.ಪ. ಕಾರ್ಯಕ್ರಮಗಳಿಗೆ ಇಲಾಖೆಯ ಸಂಪೂರ್ಣ ಸಹಕಾರ ಇದೆ ಎಂದರು.ಸಂತೆಬೆನ್ನೂರು ಗ್ರಾಮದ ಮಾರುತಿ ಕನ್ನಡ ಸಾಹಿತ್ಯವನ್ನು ಕುರಿತಂತೆ ಉಪನ್ಯಾಸ ಮಾಡಿದರು. ಮುಖ್ಯ ಅತಿಥಿಗಳಾಗಿ ಪುರಸಭೆ ಸದಸ್ಯ ಶ್ರೀಕಾಂತ್, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಕ್ಷೇತ್ರ ಸಮನ್ವಯಾಧಿಕಾರಿ ಡಾ. ಎಸ್.ಶಂಕರಪ್ಪ, ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಸದಾಶಿವಪ್ಪ, ಶಾಲಾ ಮುಖ್ಯಶಿಕ್ಷಕ ಬಸವರಾಜಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗಣೇಶ್, ಶಾಲಾ ಶಿಕ್ಷಕರಾದ ನಾಗರಾಜ್, ಜಾಕೀರ್ ಅಹಮದ್, ಪಿ.ವಿ.ಸ್ವಾಮಿ, ಜಯಪ್ರಕಾಶ್, ಎಂ.ಸಿ. ಗುರುಮೂರ್ತಿ, ಶಿವಕುಮಾರ ಸ್ವಾಮಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
- - - -1ಕೆಸಿಎನ್ಜಿ1:ಚನ್ನಗಿರಿ ಪಟ್ಟಣದಲ್ಲಿ ನುಡಿತೋರಣ ಕಾರ್ಯಕ್ರಮ ಸಮಾರೋಪ ಸಮಾರಂಭವನ್ನು ಶಾಸಕ ಬಸವರಾಜ ವಿ. ಶಿವಗಂಗಾ ಉದ್ಘಾಟಿಸಿದರು.