ಐತಿಹಾಸಿಕ ಮಡಿಕೇರಿ ದಸರಾ ಉತ್ಸವಕ್ಕೆ ಭರದ ಸಿದ್ಧತೆ
KannadaprabhaNewsNetwork | Published : Oct 09 2023, 12:46 AM IST
ಐತಿಹಾಸಿಕ ಮಡಿಕೇರಿ ದಸರಾ ಉತ್ಸವಕ್ಕೆ ಭರದ ಸಿದ್ಧತೆ
ಸಾರಾಂಶ
ಮಡಿಕೇರಿ ದಸರಾ ಜನೋತ್ಸವಕ್ಕೆ ಭರದ ಸಿದ್ಧತೆ
ವಿಘ್ನೇಶ್ ಎಂ. ಭೂತನಕಾಡು ಕನ್ನಡಪ್ರಭ ವಾರ್ತೆ ಮಡಿಕೇರಿ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ದಶಮಂಟಪಗಳ ಶೋಭಾಯಾತ್ರೆ ದಸರೆಯ ಪ್ರಮುಖ ಆಕರ್ಷಣೆಯಾಗಿದ್ದು, ಮಂಟಪಗಳ ಕಲಾಕೃತಿ ನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯುತ್ತಿದೆ. ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ನಗರದ ಗಾಂಧಿ ಮೈದಾನದಲ್ಲಿ ಗ್ಯಾಲರಿ ನಿರ್ಮಾಣವಾಗುತ್ತಿದೆ. ಸರ್ಕಾರ ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಮಡಿಕೇರಿ ದಸರಾ ಉತ್ಸವಕ್ಕೆ 75 ಲಕ್ಷ ರು. ಅನುದಾನ ಘೋಷಣೆ ಮಾಡಿದೆ. ಸರ್ಕಾರದ ಅನುದಾನದಲ್ಲಿ ದಸರೆಯನ್ನು ಯಶಸ್ವಿಯಾಗಿ ನಡೆಸಲು ಮಡಿಕೇರಿ ದಸರಾ ಸಮಿತಿ ಈಗಾಗಲೇ ರೂಪುರೇಷೆ ಸಿದ್ಧಪಡಿಸಿಕೊಂಡು ಕೆಲಸ ಆರಂಭಿಸಿದೆ. ಮೈಸೂರು ದಸರಾ ಹಗಲಿನಲ್ಲಿ ನಡೆಯುವುದು ವಿಶೇಷವಾದರೆ ಮಡಿಕೇರಿ ದಸರಾ ರಾತ್ರಿಯಲ್ಲಿ ನಡೆಯುತ್ತದೆ. ದಸರಾದ ಕೊನೆಯ ದಿನ ದಶಮಂಟಪಗಳ ಶೋಭಾಯಾತ್ರೆಯ ಮೂಲಕ ಇರುಳನ್ನು ಬೆಳಕಾಗಿಸುವ ಉತ್ಸವವಾಗಿದೆ. ಮಡಿಕೇರಿ ದಸರಾದಲ್ಲಿ ಎಲ್ಲಿ ನೋಡಿದರೂ ಹೆಚ್ಚು ಜನರು ಕಾಣಿಸಿಕೊಳ್ಳುತ್ತಾರೆ. ಇದರಿಂದಲೇ ಮಡಿಕೇರಿ ದಸರಾ ಜನೋತ್ಸವವಾಗಿ ಹೆಸರು ಪಡೆದಿದೆ. ಸಾಂಸ್ಕೃತಿಕ ಮೆರುಗು: ಮಡಿಕೇರಿ ನಗರದ ಗಾಂಧಿ ಮೈದಾನದಲ್ಲಿ ಅ.16ರಿಂದ 24ರ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗದ ಕಲಾವಿದರು ತಮ್ಮ ಪ್ರತಿಭೆ ಅನಾವರಣ ಮಾಡಲಿದ್ದಾರೆ. ಅ.18ರಂದು ಕವಿಗೋಷ್ಠಿ, 19 ರಂದು ಜಾನಪದ ದಸರಾ, 20 ರಂದು ಮಕ್ಕಳ ದಸರಾ, 22ರಂದು ಮಹಿಳಾ ದಸರಾ ಕೂಡ ಜರುಗಲಿದೆ. ಕೊಡಗು ಮತ್ತು ಹೊರ ಜಿಲ್ಲೆಯ 40ಕ್ಕೂ ಅಧಿಕ ಕಲಾತಂಡಗಳು ಈ ಬಾರಿ ಮಡಿಕೇರಿ ದಸರಾದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಇದಲ್ಲದೆ ಯುವ ದಸರಾ, ಕ್ರೀಡಾ ದಸರಾ ಕೂಡ ವಿಶೇಷವಾಗಿರಲಿದೆ. ವಂತಿಕೆ ಸಂಗ್ರಹ : ಈ ಬಾರಿ ಮಡಿಕೇರಿ ದಸರಾಗೆ ಸರ್ಕಾರದಿಂದ 75 ಲಕ್ಷ ರು. ಅನುದಾನ ಘೋಷಣೆಯಾಗಿದೆ. ಈ ಅನುದಾನದಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗಗಳು ಹಾಗೂ ದಶ ಮಂಟಪಗಳಿಗೆ ಅನುದಾನ ನೀಡಲಾಗುತ್ತದೆ. ಇದರಿಂದ ದಸರೆಗೆ ಖರ್ಚು ವೆಚ್ಚವನ್ನು ಸರಿದೂಗಿಸುವ ಸಲುವಾಗಿ ಮಡಿಕೇರಿ ದಸರಾ ಸಮಿತಿಯಿಂದ ವಂತಿಕೆ ಸಂಗ್ರಹ ಮಾಡಲು ಕೂಡ ಚಿಂತಿಸಲಾಗಿದೆ. ಹೆಚ್ಚು ಅನುದಾನ ನೀಡಿ: ಮಡಿಕೇರಿ ದಸರಾದ ಪ್ರಮುಖ ಆಕರ್ಷಣೆ ದಶ ಮಂಟಪಗಳ ಶೋಭಾಯಾತ್ರೆ. ಸರ್ಕಾರ ಘೋಷಣೆ ಮಾಡಿರುವ ಅನುದಾನದಲ್ಲಿ ಹತ್ತು ಮಂಟಪಗಳಿಗೆ ಹೆಚ್ಚಿನ ಅನುದಾನವನ್ನು ನೀಡಬೇಕೆಂದು ಮಡಿಕೇರಿ ದಸರಾ ದಶ ಮಂಟಪ ಸಮಿತಿಯ ಒತ್ತಾಯಿಸಿದೆ. ಈ ಬಾರಿ ಮಂಟಪಗಳಿಗೆ ತಲಾ 5 ಲಕ್ಷ ರು. ನೀಡುವಂತೆ ಮನವಿ ಮಾಡಿದೆ. ಕಳೆದ ಬಾರಿ ಹತ್ತು ಮಂಟಪಗಳಿಗೆ ತಲಾ 2 ಲಕ್ಷ ರು. ಹಾಗೂ ನಾಲ್ಕು ಕರಗಗಳಿಗೆ ತಲಾ 1.5 ಲಕ್ಷ ರು. ಅನುದಾನ ನೀಡಲಾಗಿತ್ತು. ಹತ್ತು ಮಂಟಪಕ್ಕೆ ತಲಾ 1.30 ಲಕ್ಷ ರು. ಅನುದಾನ ಬಾಕಿಯಿದ್ದು, ಈ ಬಾರಿ ಬಿಡುಗಡೆ ಮಾಡುವಂತೆ ದಶಮಂಟಪ ಸಮಿತಿ ಒತ್ತಾಯಿಸಿದೆ. ಹತ್ತು ದಿನವೂ ದೀಪಾಲಂಕಾರ: ಪ್ರತಿ ಬಾರಿ ದಸರಾದ ಕೊನೆಯ ಮೂರು ದಿನ ಮಾತ್ರ ಮಡಿಕೇರಿ ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಹತ್ತು ದಿನಗಳ ಕಾಲ ಕೂಡ ಮಡಿಕೇರಿ ನಗರದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲು ಮಡಿಕೇರಿ ದಸರಾ ಸಮಿತಿ ವ್ಯವಸ್ಥೆ ಮಾಡಿಕೊಂಡಿದೆ. ವೇದಿಕೆ ನಿರ್ಮಾಣ, ದೀಪಾಲಂಕಾರ, ಸೌಂಡ್ಸ್ ಹಾಗೂ ಇನ್ನಿತರ ಕೆಲಸಕ್ಕೆ 36 ಲಕ್ಷ ರು. ವೆಚ್ಚ ಮಾಡಲಾಗುತ್ತಿದೆ. ನಗರಸಭೆಯ ವತಿಯಿಂದ ನಗರದಲ್ಲಿ ಗುಂಡಿಬಿದ್ದಿರುವ ರಸ್ತೆಗಳ ದುರಸ್ತಿ ಕಾರ್ಯ ಈಗಾಗಲೇ 10 ಲಕ್ಷ ವೆಚ್ಚದಲ್ಲಿ ನಡೆಯುತ್ತಿದೆ. 5 ಲಕ್ಷ ರು. ಹೆಚ್ಚುವರಿಯಾಗಿ ಕೆಲಸ ಮಾಡಿಸಲಾಗುತ್ತಿದೆ. ದಸರೆಗೆ ರಸ್ತೆ ಸುಸ್ಥಿತಿಯಲ್ಲಿರಲಿದೆ ಎಂದು ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ತಿಳಿಸಿದ್ದಾರೆ. ಮಂಟಪ ಕಲಾಕೃತಿ ಕೆಲಸ ಜೋರು ಮಡಿಕೇರಿ ದಸರಾದಲ್ಲಿ ದಶಮಂಟಪಗಳ ಶೋಭಾಯಾತ್ರೆ ಪ್ರಮುಖವಾಗಿದೆ. ಕಳೆದ ಹಲವು ದಿನಗಳಿಂದ ಮಂಟಪಗಳ ಕೆಲಸ ನಡೆಯುತ್ತಿದೆ. ವಿವಿಧ ಕಲಾವಿದರು ದೇವರ ಹಾಗೂ ಅಸುರರ ಕಲಾಕೃತಿಗಳನ್ನು ಸಜ್ಜುಗೊಳಿಸುತ್ತಿದ್ದಾರೆ. ಒಂದೊಂದು ಮಂಟಪಗಳು ಕೂಡ ಒಂದೊಂದು ಕಥಾ ಸಾರಾಂಶವನ್ನು ಅಳವಡಿಸಿ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆಯುತ್ತದೆ. ಒಂದೊಂದು ಮಂಟಪಗಳು ಕೂಡ ಸುಮಾರು 20 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿ ಮಂಟಪಗಳನ್ನು ನಿರ್ಮಿಸುತ್ತವೆ. ಅ.15ರಂದು ಕರಗ ಉತ್ಸವಕ್ಕೆ ಚಾಲನೆ ಮಡಿಕೇರಿ ದಸರಾದ ಪ್ರಮುಖ ಭಾಗವಾದ ಕರಗ ಉತ್ಸವ ಈ ಬಾರಿ ಅ.15ರಂದು ಸಂಜೆ ಆರಂಭಗೊಳ್ಳಲಿದೆ. ನಗರದ ಪಂಪಿನ ಕೆರೆಯ ಬಳಿ ನಗರದ ನಾಲ್ಕು ಶಕ್ತಿ ದೇವತೆಗಳಾದ ಕುಂದುರು ಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ, ಕಂಚಿ ಕಾಮಾಕ್ಷಿ, ಕೋಟೆ ಮಾರಿಯಮ್ಮ ದೇವರ ಕರಗಗಳು ನಾಡಿನ ಒಳಿತಿಗಾಗಿ ಕರಗ ಸಂಚಾರವನ್ನು ಆರಂಭಿಸಲಿದೆ. ಈ ಕರಗ ಉತ್ಸವ ರಾಜರ ಕಾಲದಿಂದಲೇ ಆರಂಭವಾಗಿತ್ತು ಎಂಬುದು ವಿಶೇಷ. ಸಾಂಕ್ರಾಮಿಕ ರೋಗದಿಂದ ಮುಕ್ತಿ ಪಡೆಯುವ ನಿಟ್ಟಿನಲ್ಲಿ ಶಕ್ತಿ ದೇವತೆಗಳ ಕರಗಗಳನ್ನು ನಗರ ಪ್ರದಕ್ಷಿಣ ಮಾಡಿಸುವ ಮೂಲಕ ನಿವಾರಣೆಯಾಯಿತು ಎಂಬ ಉಲ್ಲೇಖವಿದೆ. ಇದರಿಂದ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ನಗರದಲ್ಲಿ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರ ಸಂಚಾರವನ್ನು ಮಾಡುತ್ತದೆ.