ಫನ್‌, ಫ್ಯಾಷನ್‌ ‘ಯಲಹಂಕ ಸಂಭ್ರಮ’ ಶುರು

| Published : Jul 13 2024, 01:38 AM IST / Updated: Jul 13 2024, 08:51 AM IST

ಫನ್‌, ಫ್ಯಾಷನ್‌ ‘ಯಲಹಂಕ ಸಂಭ್ರಮ’ ಶುರು
Share this Article
  • FB
  • TW
  • Linkdin
  • Email

ಸಾರಾಂಶ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ವತಿಯಿಂದ ಯಲಹಂಕ ನ್ಯೂಟೌನ್‌, ಹೊಯ್ಸಳ ಮೈದಾನ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ಆಯೋಜಿಸಿರುವ ಬೆಂಗಳೂರಿನ ಅತಿದೊಡ್ಡ ಫುಡ್‌, ಫನ್‌ ಆ್ಯಂಡ್‌ ಫ್ಯಾಷನ್‌ ಫೆಸ್ಟಿವಲ್‌ ‘ಯಲಹಂಕ ಸಂಭ್ರಮ’ಕ್ಕೆ ಚಾಲನೆ ನೀಡಲಾಗಿದೆ

 ಬೆಂಗಳೂರು :  ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ವತಿಯಿಂದ ಯಲಹಂಕ ನ್ಯೂಟೌನ್‌, ಹೊಯ್ಸಳ ಮೈದಾನ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ಆಯೋಜಿಸಿರುವ ಬೆಂಗಳೂರಿನ ಅತಿದೊಡ್ಡ ಫುಡ್‌, ಫನ್‌ ಆ್ಯಂಡ್‌ ಫ್ಯಾಷನ್‌ ಫೆಸ್ಟಿವಲ್‌ ‘ಯಲಹಂಕ ಸಂಭ್ರಮ’ಕ್ಕೆ ಮೊದಲ ದಿನವೇ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶುಕ್ರವಾರ ಪ್ರಾರಂಭಗೊಂಡ ಯಲಹಂಕ ಸಂಭ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಮಧ್ಯಾಹ್ನ ಮುದ್ದುಮಗು ಮತ್ತು ವೇಷಭೂಷಣ(ಮಕ್ಕಳಿಗೆ) ಸ್ಪರ್ಧೆ ಯಶಸ್ವಿಯಾಗಿ ನಡೆಯಿತು. ಸಂಜೆ ಹೊತ್ತಿನಲ್ಲಿ ಆರಂಭಗೊಂಡ ಮಳೆಯು ಜನರ ಸಂಭ್ರಮಕ್ಕೆ ತಣ್ಣೀರೆರಚುವ ಆತಂಕ ಸೃಷ್ಟಿಸಿತು. ಆದರೆ, 7 ಗಂಟೆ ಸುಮಾರಿಗೆ ಮಳೆ ನಿಂತಿದ್ದರಿಂದ ಕಾರ್ಯಕ್ರಮ ಮುಂದುವರೆಯಿತು.

ಈ ನಡುವೆಯೇ ಯಲಹಂಕ ವಿಧಾನಸಭಾ ಕ್ಷೇತ್ರ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಅವರು, ಫುಡ್‌, ಫನ್‌ ಆ್ಯಂಡ್‌ ಫ್ಯಾಷನ್‌ ಫೆಸ್ಟಿವಲ್‌ ‘ಯಲಹಂಕ ಸಂಭ್ರಮ’ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಯಲಹಂಕ ನಮ್ಮದು, ಯಾವ ಶಾಸಕರದ್ದೂ ಅಲ್ಲ, ಯಾವ ಪಕ್ಷಗಳದ್ದೂ ಅಲ್ಲ. ಇಲ್ಲಿನ ಗೌರವ ಪ್ರತಿಷ್ಠೆಯಲ್ಲಿ ನಾವೆಲ್ಲರೂ ಭಾಗಿಯಾಗುತ್ತೇವೆ. ಯಲಹಂಕಕ್ಕೆ ಅಗೌರವ ಬಂದರೆ ನಾವೆಲ್ಲರೂ ಪಕ್ಷಬೇಧ ಮರೆತು ಒಂದಾಗಿ ಸಮಸ್ಯೆ ಬಗೆಹರಿಸುವ ಕಾರ್ಯದಲ್ಲಿ ತೊಡಗುತ್ತೇವೆ. ಈ ಹಿಂದೆ ತಿರುಮಲ ತಿರುಪತಿ ವೈಕುಂಠ ಕಲ್ಯಾಣೋತ್ಸವ ಮಾಡಿದ್ದೆವು. ನಿರೀಕ್ಷೆಗೂ ಮೀರಿ 1.50 ಲಕ್ಷ ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಲಲಿತ ಸಹಸ್ರ ಕುಂಕುಮಾರ್ಚನೆಗೆ ಕನಿಷ್ಠ 20 ಸಾವಿರ ಹೆಣ್ಣುಮಕ್ಕಳು ಸೇರುತ್ತಾರೆ. ಏನೇ ಕಾರ್ಯಕ್ರಮ ಮಾಡಿದ್ದರೂ ಇಲ್ಲಿನ ಜನತೆ ಸ್ಪಂದಿಸುತ್ತಾರೆ. ಇಲ್ಲಿ ನಡೆಯುತ್ತಿರುವ ಯಲಹಂಕ ಸಂಭ್ರಮದಲ್ಲಿ ಕ್ಷೇತ್ರದ ಎಲ್ಲ ಜನರೂ ಭಾಗವಹಿಸಿ, ಫುಡ್‌, ಫನ್‌ ಆ್ಯಂಡ್‌ ಫ್ಯಾಷನ್‌ ಫೆಸ್ಟಿವಲ್‌ ಸಂಭ್ರಮ ಅನುಭವಿಸಲಿ ಎಂದು ಹಾರೈಸಿದರು. 

ರುಚಿಸಿದ ಖಾದ್ಯಗಳು

ಯಲಹಂಕ ಸಂಭ್ರಮದಲ್ಲಿ ಹೊಯ್ಸಳ ಮೈದಾನದಲ್ಲಿ ಹಾಕಿದ್ದ ಮಳಿಗೆಗಳಲ್ಲಿ ಗೃಹೋಪಯೋಗಿ ವಸ್ತುಗಳು ಮಾತ್ರವಲ್ಲ ಮಕ್ಕಳ ಆಟಿಕೆಗಳು, ಕಾರು, ಸೈಕಲ್‌ ಶೋರೂಂಗಳು, ಬಗೆ ಬಗೆಯ ಆಹಾರ ಪದಾರ್ಥಗಳ ಮಳಿಗೆಗಳು ಪ್ರತಿಯೊಬ್ಬರ ಗಮನ ಸೆಳೆಯುತ್ತಿದ್ದವು. ಬಿಸಿ ಬಿಸಿ ಎಣ್ಣೆಯಲ್ಲಿ ಅದ್ದಿ ತೆಗೆದ ಪೊಟ್ಯಾಟೋ ಟ್ವಿಸ್ಟರ್, ಸಂಜೆಯ ಬಿಸಿ ಟೀ ಜೊತೆ ಮೆಲ್ಲಲು ತಯಾರಾದ ಬಿಸಿ ಬಿಸಿ ಪಡ್ಡು, ಬೋಂಡಾ, ಬಾಯಲ್ಲಿಟ್ಟರೆ ಕರಗುವ ದಾವಣಗೆರೆ ಬೆಣ್ಣೆ ದೋಸೆ, ಮುಳಬಾಗಿಲು ಮಸಾಲೆದೋಸೆ, ಆರಾಧ್ಯ ಕರದಂಟು, ಮೇಲುಕೋಟೆಯ ಪುಳಿಯೊಗರೆ, ಅಯ್ಯಂಗಾರ್‌ ಪುಳಿಯೊಗರೆ, ಬಗೆಬಗೆಯ ಖಾದ್ಯಗಳು ತಿಂಡಿಪ್ರಿಯರಿಗೆ ಇಷ್ಟವಾದವು. ಗುಡಿ ಕೈಗಾರಿಕೆಯಡಿ ಗ್ರಾಮಗಳಿಂದ ಆಗಮಿಸಿದ್ದ ಸ್ತ್ರೀಶಕ್ತಿ ಸಂಘದ ಹಲವು ತಂಡಗಳು ವಿವಿಧ ಖಾದ್ಯಗಳನ್ನು ತಂದಿದ್ದು, ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದದ್ದು ಗಮನಸೆಳೆಯುತ್ತಿದೆ.

ಹಾಸ್ಯ ಸಂಜೆ

ಮಿಮಿಕ್ರಿ ಸಾಗರ್‌ ಹಾಗೂ ರಾಘವೇಂದ್ರ ಅವರಿಂದ ಮಿಮಿಕ್ರಿ ಕಾರ್ಯಕ್ರಮ ನಡೆಸಿಕೊಟ್ಟರು. ಚಲನಚಿತ್ರ ಕಲಾವಿದ ಲೋಕೇಶ್‌, ವೈಷ್ಣವಿ ಮೆಲೋಡಿಸ್‌ ಮತ್ತು ತಂಡ ಹಾಗೂ ಸರಿಗಮಪ ಖ್ಯಾತಿಯ ಜ್ಞಾನಾ ಗುರುರಾಜ್‌ ಅವರಿಂದ ಸಂಗೀತ ಸಂಜೆ ಹಾಗೂ ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆದವು.

ಸಮಾರಂಭದಲ್ಲಿ ಚಲನಚಿತ್ರ ನಟಿ ಬೃಂದಾ ಆಚಾರ್‌, ಕನ್ನಡಪ್ರಭದ ಸಹ ಸಂಪಾದಕ ಬಿ.ವಿ.ಮಲ್ಲಿಕಾರ್ಜುನ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ವಿಜಯ್‌ ಇದ್ದರು.

ಇಂದಿನ ಕಾರ್ಯಕ್ರಮ

ಜುಲೈ 13(ಶನಿವಾರ) ಬೆಳಗ್ಗೆ 11ಕ್ಕೆ ಮುದ್ದುಮಗು ಮತ್ತು ವೇಷಭೂಷಣ(ಮಕ್ಕಳಿಗೆ), ಮಧ್ಯಾಹ್ನ 1ಕ್ಕೆ ಅಡುಗೆ ಮಹಾರಾಣಿ (ಮಹಿಳೆಯರಿಗೆ) 1ನೇ ಸುತ್ತು, ಮಧ್ಯಾಹ್ನ 3ಕ್ಕೆ ಓಪನ್‌ ಸ್ಟೇಜ್‌ ಮತ್ತು ಗಾಯನ, 6ಕ್ಕೆ ಬೊಂಬಾಟ್‌ ಜೋಡಿ, ಕಿಡ್ಸ್‌ ಮತ್ತು ಫ್ಯಾಮಿಲಿ ಫ್ಯಾಶನ್‌ ಶೋ, ಸಂಜೆ 7ಕ್ಕೆ ಯಲಹಂಕ ಸಾಧಕರಿಗೆ ಸನ್ಮಾನ, ಸಂಜೆ 7.30ಕ್ಕೆ ಹಾಸ್ಯ ಸಂಜೆ- ಮಿಮಿಕ್ರಿ ಗೋಪಿ ಮತ್ತು ಸಂಗೀತ ಸಂಜೆ ಕನ್ನಡ ಕೋಗಿಲೆ ಖ್ಯಾತಿಯ ಡ್ಯೂಯಲ್‌ ವಾಯ್ಸ್‌ ಸಿಂಗರ್‌ ಮಂಜು ಹಾಸನ್‌, 8.30ಕ್ಕೆ ಇಂಡಿಯನ್‌ ಫೋಕ್‌ ಮ್ಯೂಸಿಕ್‌ ಬ್ಯಾಂಡ್‌ ‘ಜಂಬೆ ಝಲಕ್‌’ ಬಾಲು ಮತ್ತು ತಂಡ, ರಾತ್ರಿ 9.30ಕ್ಕೆ ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.