ತಾಪಂ ಇಒಗಳಾಗಿ ಪಶು ವೈದ್ಯರ ಕಾರ್ಯ ನಿರ್ವಹಣೆ

| Published : Feb 08 2024, 01:31 AM IST

ಸಾರಾಂಶ

ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ರೈತರ ಬಳಿ ಹಣವಿಲ್ಲ. ದುಡಿದ ಹಣದಲ್ಲಿಯೇ ಜಾನುವಾರುಗಳಿಗೆ ಬೇಕಾಗುವ ಹೊಟ್ಟು, ಮೇವು ಖರೀದಿಸಿ ತರುವಂತಾಗಿದೆ. ಜಾನುವಾರು ಚಿಕಿತ್ಸೆ, ಲಸಿಕಾಕರಣ ಮತ್ತು ಪಶು ಸಂಗೋಪನಾ ಇಲಾಖೆಯ ಇನ್ನಿತರ ಕೆಲಸಗಳಿಗೆ ಪಶು ವೈದ್ಯಾಧಿಕಾರಿಗಳ ಸೇವೆ ಅಗತ್ಯವಾಗಿದೆ

ಶಿವಕುಮಾರ ಕುಷ್ಟಗಿ ಗದಗ

ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಪಶು, ಆಡು, ಕುರಿಗಳು ಬಿರು ಬೇಸಿಗೆಗೆ ಹತ್ತಾರು ಸಮಸ್ಯೆ ಎದುರಿಸುತ್ತಿವೆ. ಅವುಗಳಿಗೆ ಚಿಕಿತ್ಸೆ ನೀಡಬೇಕಾದ ಪಶು ವೈದ್ಯರನ್ನು ಮಾತೃ ಇಲಾಖೆಯ ಅನುಮತಿ ಪಡೆಯದೇ ರಾಜಕೀಯ ಪ್ರಭಾವ ಬಳಸಿ ತಾಪಂ ಇಒ ಸೇರಿದಂತೆ ವಿವಿಧ ಹುದ್ದೆಗಳಿಗೆ ನಿಯುಕ್ತಿ ಮಾಡಲಾಗಿದೆ.

882 ಹುದ್ದೆಗಳು ಖಾಲಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 882 ಪಶು ವೈದ್ಯಾಧಿಕಾರಿ ಹುದ್ದೆ ಖಾಲಿ ಇವೆ. ಆದರೂ ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆಯ ಪಶು ವೈದ್ಯರನ್ನು ಅನ್ಯ ಇಲಾಖೆಗೆ ನಿಯೋಜನೆ ಮಾಡಲಾಗುತ್ತಿದೆ. ಮುಖ್ಯವಾಗಿ ಇಲಾಖೆಯ ಪೂರ್ವಾನುಮತಿ ಪಡೆಯದೆ ಪಶು ವೈದ್ಯರನ್ನು ಅಲ್ಲಿನ ರಾಜಕೀಯ ನಾಯಕರು ಯಾವ ಹುದ್ದೆಗೆ ಶಿಫಾರಸ್ಸು ಮಾಡುತ್ತಾರೆ ಅಲ್ಲಿಗೆ ನಿಯುಕ್ತಿ ಮಾಡಲಾಗಿದೆ.

ತಾಪಂ ಇಒಗಳೇ ಹೆಚ್ಚು: ಪ್ರಸ್ತುತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಾಪಂ ಇಒಗಳಾಗಿ ಕಾರ್ಯ ನಿರ್ವಹಿಸುತ್ತಿರುವವರು ಪಶು ವೈದ್ಯರೇ. ಇದನ್ನು ಮನಗಂಡಿರುವ ಸರ್ಕಾರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನಿಯೋಜಿಸದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಸೂಚನೆ ನೀಡಿದೆ. ಆದರೂ, ಮತ್ತೆ ಮತ್ತೆ ತಾಪಂ ಇಒ ಹುದ್ದೆಗೆ ಪಶು ವೈದ್ಯರ ನೇಮಕ ಆಗುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

2022ರಲ್ಲಿ ಆದೇಶ: ಪಶು ಸಂಗೋಪನೆ ಇಲಾಖೆ ಅಧೀನ ಕಾರ್ಯದರ್ಶಿಗಳು ನಮ್ಮ ಇಲಾಖೆಗೆ ಮಾಹಿತಿ ಇಲ್ಲದೆ ಪಶು ವೈದ್ಯರನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹುದ್ದೆಗೆ ನಿಯೋಜಿಸಲಾಗುತ್ತಿದೆ. ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಲ್ಲಿ ಸಾಕಷ್ಟು ಹುದ್ದೆ ಖಾಲಿ ಇರುವುದರಿಂದ ಜಾನುವಾರುಗಳಿಗೆ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಶು ವೈದ್ಯರನ್ನು ಮಾತೃ ಇಲಾಖೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕರ್ತವ್ಯ ನಿರ್ವಹಿಸಲು ಅನುಕೂಲವಾಗುವಂತೆ ನಿಯೋಜನೆ ಮಾಡಬೇಕು. ಭವಿಷ್ಯದಲ್ಲಿ ಯಾವುದೇ ಕಾರಣಕ್ಕೂ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯ ಪ್ರಭಾರ ಪಶು ವೈದ್ಯರಿಗೆ ವಹಿಸಬಾರದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ 2022 ಮೇ 6 ರಂದು ಸೂಚನೆ ನೀಡಿದ್ದಾರೆ. ಆದರೆ ವಾಸ್ತವದಲ್ಲಿ ಮಾತ್ರ ಮತ್ತೆ ಪಶು ವೈದ್ಯರನ್ನು ತಾಪಂ ಇಒ ಹುದ್ದೆಗೆ ನಿಯೋಜಿಸಲಾಗುತ್ತಿದೆ.

ಜಾನುವಾರ ಕಳೆದುಕೊಳ್ಳುವ ಭೀತಿ: ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ರೈತರ ಬಳಿ ಹಣವಿಲ್ಲ. ದುಡಿದ ಹಣದಲ್ಲಿಯೇ ಜಾನುವಾರುಗಳಿಗೆ ಬೇಕಾಗುವ ಹೊಟ್ಟು, ಮೇವು ಖರೀದಿಸಿ ತರುವಂತಾಗಿದೆ. ಜಾನುವಾರು ಚಿಕಿತ್ಸೆ, ಲಸಿಕಾಕರಣ ಮತ್ತು ಪಶು ಸಂಗೋಪನಾ ಇಲಾಖೆಯ ಇನ್ನಿತರ ಕೆಲಸಗಳಿಗೆ ಪಶು ವೈದ್ಯಾಧಿಕಾರಿಗಳ ಸೇವೆ ಅಗತ್ಯವಾಗಿದೆ. ತಕ್ಷಣ ಅವರನ್ನು ಮಾತೃ ಇಲಾಖೆಗೆ ನಿಯೋಜಿಸುವಂತೆ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಯಾದ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣ ಜಾರಿಗೆ ಬರುವಂತೆ ಪಶು ವೈದ್ಯರನ್ನು ಅನ್ಯ ಕಾರ್ಯದಿಂದ ಬಿಡುಗಡೆಗೊಳಿಸಬೇಕು ಎಂದು 2023 ಡಿ.15 ರಂದು ಪಶು ಸಂಗೋಪನಾ ಇಲಾಖೆ ಆದೇಶ ನೀಡಿದೆ. ಆದರೆ ಈವರೆಗೂ ಆದೇಶ ಪಾಲಿಸಿಲ್ಲ.

ಗದಗ ಜಿಲ್ಲೆಯಲ್ಲಿಯೂ 3 ಜನ ಪಶು ವೈದ್ಯಾಧಿಕಾರಿಗಳು ತಾಪಂ ಇಒಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಗದಗ, ಗಜೇಂದ್ರಗಡ ಮತ್ತು ಶಿರಹಟ್ಟಿಯಲ್ಲಿದ್ದಾರೆ.

ಈಗಾಗಲೇ ಸರ್ಕಾರದ ಸೂಚನೆಗಳ ಪ್ರಕಾರ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಈ ವಿಷಯ ಚರ್ಚೆಯಾಗಿದೆ. ತಾಪಂ ಇಓಗಳ ಹುದ್ದೆಗಳಿಗೆ ಬೇರೆ ಅಧಿಕಾರಿಗಳು ನಿಯೋಜನೆ ಆಗುವವರೆಗೂ ಹಾಲಿ ಕಾರ್ಯ ಅಧಿಕಾರಿಯೇ ಎರಡೂ ಸ್ಥಳಗಳಲ್ಲಿಯೂ ಕರ್ತವ್ಯ ನಿರ್ವಹಿಸಲಿ ಎಂದು ನಿರ್ಣಯ ಕೈಗೊಂಡಿದ್ದಾರೆ ಎಂದು ಪ್ರಬಾರ ಜಿಪಂ ಸಿಇಒ ವೈಶಾಲಿ ಎಂ.ಎಲ್ ಹೇಳಿದ್ದಾರೆ.