1 ರಿಂದ 10 ನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಹಣ ಬಿಡುಗಡೆ : ಶಾಲೆಗಳಿಗೀಗ ಹೊಸ ಟೆನ್ಶನ್

| Published : Oct 24 2024, 12:55 AM IST / Updated: Oct 24 2024, 12:59 PM IST

1 ರಿಂದ 10 ನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಹಣ ಬಿಡುಗಡೆ : ಶಾಲೆಗಳಿಗೀಗ ಹೊಸ ಟೆನ್ಶನ್
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರವು   1 ನೇ ತರಗತಿಯಿಂದ 10 ನೇ ತರಗತಿಯ ಮಕ್ಕಳಿಗೆ ಶಾಲೆಯ ಬಿಸಿಯೂಟದ ಜೊತೆ ಪ್ರತಿ ದಿನ ಒಂದೊಂದು ಮೊಟ್ಟೆ ನೀಡುವ ಯೋಜನೆ ಜಾರಿಗೆ ತಂದಿದೆ. ಆದರೆ, ಮೊಟ್ಟೆಗೆ ಸರ್ಕಾರ ನೀಡುತ್ತಿರುವ ಹಣಕ್ಕೂ ಮಾರು ಕಟ್ಟೆಯಲ್ಲಿ ಸಿಗುವ ಮೊಟ್ಟೆಗೆ ವ್ಯತ್ಯಾಸ ಬರುತ್ತಿದ್ದು ಶಾಲೆಗಳಿಗೆ ಸಮಸ್ಯೆ ಎದುರಾಗಿದೆ.

 ಯಡಗರೆ ಮಂಜುನಾಥ್‌,

ನರಸಿಂಹರಾಜಪುರ : ಸರ್ಕಾರವು ಶಾಲಾ ಮಕ್ಕಳ ಅಪೌಷ್ಠಿಕತೆ ನಿವಾರಿಸಲು ಹಾಗೂ ರಕ್ತ ಹೀನತೆ ನಿಯಂತ್ರಿಸಲು 1 ನೇ ತರಗತಿಯಿಂದ 10 ನೇ ತರಗತಿಯ ಮಕ್ಕಳಿಗೆ ಶಾಲೆಯ ಬಿಸಿಯೂಟದ ಜೊತೆ ಪ್ರತಿ ದಿನ ಒಂದೊಂದು ಮೊಟ್ಟೆ ನೀಡುವ ಯೋಜನೆ ಜಾರಿಗೆ ತಂದಿದೆ. ಆದರೆ, ಮೊಟ್ಟೆಗೆ ಸರ್ಕಾರ ನೀಡುತ್ತಿರುವ ಹಣಕ್ಕೂ ಮಾರು ಕಟ್ಟೆಯಲ್ಲಿ ಸಿಗುವ ಮೊಟ್ಟೆಗೆ ವ್ಯತ್ಯಾಸ ಬರುತ್ತಿದ್ದು ಶಾಲೆಗಳಿಗೆ ಸಮಸ್ಯೆ ಎದುರಾಗಿದೆ.

2022-23 ನೇ ಸಾಲಿನಿಂದ ಶಿಕ್ಷಣ ಇಲಾಖೆಯು ಮಕ್ಕಳಿಗೆ ಬಿಸಿಯೂಟದ ಜೊತೆಗೆ ವಾರದಲ್ಲಿ 2 ದಿನ ಮೊಟ್ಟೆ ನೀಡುವ ಕಾರ್ಯಕ್ರಮ ಜಾರಿಗೆ ತಂದಿದೆ. ಮೊಟ್ಟೆಯನ್ನು ನೇರವಾಗಿ ನೀಡದೆ ಮೊಟ್ಟೆ ಖರೀದಿಸಲು ಆಯಾ ಶಾಲೆಯ ಬ್ಯಾಂಕ್‌ ಖಾತೆಗೆ ಹಣ ಜಮಾ ಮಾಡುತ್ತಿದೆ. 1 ಮೊಟ್ಟೆ ಖರೀದಿಸಲು 5 ರುಪಾಯಿ, ಮೊಟ್ಟೆ ಬೇಯಿಸಲು ಗ್ಯಾಸ್‌ ಖರ್ಚಿಗೆ 50 ಪೈಸೆ, ಮೊಟ್ಟೆ ಸಿಪ್ಪೆ ತೆಗೆಯಲು 30 ಪೈಸೆ ಹಾಗೂ ಮೊಟ್ಟೆ ಸಾಗಾಣಿಕೆ ವೆಚ್ಚ ಎಂದು 20 ಪೈಸೆ ನೀಡುತ್ತಿದ್ದು ಒಟ್ಟು 1 ಮೊಟ್ಟೆಗೆ 6 ರುಪಾಯಿ ನೀಡುತ್ತಿದೆ. ಒಂದು ಶಾಲೆಯಲ್ಲಿ 100 ಮಕ್ಕಳಿದ್ದರೆ ಪ್ರತಿಯೊಬ್ಬ ಮಗುವಿಗೆ ಮೊಟ್ಟೆ ನೀಡಲು 6 ರುಪಾಯಿಯಂತೆ ಒಟ್ಟು 100 ಮಕ್ಕಳಿಗೆ 600 ರುಪಾಯಿಯಂತೆ ಹಣ ನೀಡಲಾಗುತ್ತದೆ. ಮೊಟ್ಟೆ ಬೇಡ ಎಂದರೆ ಅದೇ 6 ರುಪಾಯಿಯಲ್ಲಿ ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಬಹುದು.

ಕಳೆದ ಸೆಪ್ಟಂಬರ್‌ ತಿಂಗಳಿಂದ ಉದ್ಯಮಿ ಅಜೀಂ ಪ್ರೇಮ್‌ ಜಿ ಪೌಂಡೇಷನ್‌ ವತಿಯಿಂದ ವಾರದ ಉಳಿದ 4 ದಿನವೂ ಮೊಟ್ಟೆ ನೀಡಲು ಪ್ರಾರಂಭಿಸಿದ್ದು ಈಗ ಎಲ್ಲಾ ಪ್ರಾಥಮಿಕ, ಪ್ರೌಢ ಶಾಲೆಗಳು, ಎಲ್‌.ಕೆ.ಜಿ ಹಾಗೂ ಯು.ಕೆ.ಜಿ ಮಕ್ಕಳಿಗೆ ಬಿಸಿಯೂಟದ ಜೊತೆ ಮೊಟ್ಟೆ ನೀಡಲಾಗುತ್ತಿದ್ದು, ವಾರದ 6 ದಿನವೂ ಮೊಟ್ಟೆ ನೀಡಲು ಶಾಲೆಗಳ ಖಾತೆಗೆ ಹಣ ಬರುತ್ತಿದೆ.

ಸಮಸ್ಯೆ ಏನು?

ಮಾರುಕಟ್ಟೆಯಲ್ಲಿ ಮೊಟ್ಟೆಯ ಬೆಲೆ ಸ್ಥಿರವಾಗಿರುವುದಿಲ್ಲ. ಒಂದು ದಿನ 6 ರುಪಾಯಿಗೂ ಮೊಟ್ಟೆ ಸಿಗಬಹುದು. ಒಂದು ದಿನ 7 ರುಪಾಯಿಯೂ ಏರಿಕೆ ಆಗಬಹುದು. ಇದರಿಂದ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಮೊಟ್ಟೆ ಖರೀದಿಸಲು ಸರ್ಕಾರ ನಿಗದಿ ಪಡಿಸಿದ ಹಣ ಸಾಕಾಗುತ್ತಿಲ್ಲ. ಕೆಲವು ದಿನ 1 ಮೊಟ್ಟೆಗೆ 1 ರುಪಾಯಿ ಜಾಸ್ತಿ ನೀಡಬೇಕಾಗುತ್ತದೆ. 50 ಮಕ್ಕಳು ಇರುವ ಶಾಲೆಗೆ 50 ರುಪಾಯಿ ಜಾಸ್ತಿ ನೀಡಬೇಕಾಗತ್ತದೆ. ಈ ಹಣವನ್ನು ಯಾರು ನೀಡಬೇಕು ? ಎಂಬುದೇ ಈಗ ಬಂದಿರುವ ಸಮಸ್ಯೆ. ಸರ್ಕಾರ ನಿಗದಿ ಮಾಡಿರುವ 5 ರುಪಾಯಿಗೆ ಮಾರುಕಟ್ಟೆಯಲ್ಲಿ ಮೊಟ್ಟೆ ಸಿಗುತ್ತಿಲ್ಲ ಎಂಬುದೇ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಾಲೆಯ ಎಸ್‌.ಡಿ.ಎಂ.ಸಿ. ಅಧ್ಯಕ್ಷರ ಆರೋಪವಾಗಿದೆ.

ಪರಿಹಾರ ಏನು ?

ಈಗಾಗಲೇ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದವರು ಶಾಸಕರಿಗೆ ಮೊಟ್ಟೆ ಧಾರಣೆಯ ವ್ಯತ್ಯಾಸವಾಗುತ್ತಿರುವ ಬಗ್ಗೆ ಮನವಿ ನೀಡಿದ್ದಾರೆ. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದವರಿಗೂ ಮನವಿ ಸಲ್ಲಿಸಿದ್ದಾರೆ. ಬಿಸಿಯೂಟ, ಮೊಟ್ಟೆ ನೀಡುವ ವ್ಯವಹಾರವನ್ನು ನೋಡಿಕೊಳ್ಳುವ ಶಾಲಾ ಎಸ್‌.ಡಿ.ಎಂ.ಸಿ ಹಾಗೂ ಶಾಲೆಯ ಮುಖ್ಯಪಾಧ್ಯಾಯರ ಅಭಿಪ್ರಾಯದಂತೆ ಸರ್ಕಾರವು ಮೊಟ್ಟೆಗೆ ಎಂದು ಹಣ ನೀಡುವುದಕ್ಕಿಂತ ಮೊಟ್ಟೆಯನ್ನೇ ನೇರವಾಗಿ ಯಾವುದಾದರೂ ಏಜೆನ್ಸಿ ಮೂಲಕ ಶಾಲೆಗಳಿಗೆ ತಲುಪಿಸಬೇಕು. ಈಗಾಗಲೇ ಬಿಸಿಯೂಟದ ಯೋಜನೆಯಲ್ಲ್ಲಿ ಅಕ್ಕಿ, ಬೇಳೆ, ಎಣ್ಣೆ, ಗೋದಿ ನೀಡಿದಂತೆ ಮೊಟ್ಟೆಯನ್ನೂ ಸಹ ನೀಡಿದರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ ಎಂದು ಅಭಿಪ್ರಾಯಪಡುತ್ತಾರೆ.

ಪ್ರಾಯೋಗಿಕವಾಗಿ ಚಿಕ್ಕಮಗಳೂರು ಜಿಲ್ಲೆ ಅಥವಾ ಶೃಂಗೇರಿ ಕ್ಷೇತ್ರಕ್ಕಾದರೂ ಖಾಸಗಿ ಏಜೆನ್ಸಿ ಮೂಲಕವಾಗಿ ಎಲ್ಲಾ ಶಾಲೆಗಳಿಗೂ ಮೊಟ್ಟೆ ಪೂರೈಸುವ ಕ್ರಮ ಕೈಗೊಳ್ಳಲಿ ಎಂದು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಒತ್ತಾಯವಾಗಿದೆ.

ನರಸಿಂಹರಾಜಪುರ ತಾಲೂಕಿನಲ್ಲಿ 1 ರಿಂದ 10 ನೇ ತರಗತಿಯ 94 ಶಾಲೆಗಳ 5241 ಮಕ್ಕಳು, ಎಲ್‌.ಕೆ.ಜಿ ಹಾಗೂ ಯು.ಕೆ.ಜಿ.ಯ 68 ಮಕ್ಕಳು ಹಾಗೂ ಪ್ರೀ ನರ್ಸರಿಯ 33 ಮಕ್ಕಳು ಸೇರಿ ಒಟ್ಟು 5342 ಮಕ್ಕಳಿಗೆ ಪ್ರತಿ ದಿನ ಮೊಟ್ಟೆ ನೀಡಲಾಗುತ್ತಿದೆ. ತಾಲೂಕಿನಲ್ಲೇ ಅತಿ ಹೆಚ್ಚು ಬಿಸಿಯೂಟ ನೀಡುತ್ತಿರುವ ನರಸಿಂಹರಾಜಪುರ ಪಟ್ಟಣದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಪ್ರಾಥಮಿಕ ಶಾಲೆಯಲ್ಲಿ 363 ಮಕ್ಕಳು, 68 ಎಲ್‌.ಕೆ.ಜಿ, ಯು.ಕೆ.ಜಿ ಮಕ್ಕಳು ಹಾಗೂ ಪ್ರೌಢ ಶಾಲೆಯಲ್ಲಿ 200 ಮಕ್ಕಳಿಗೆ ಬಿಸಿಯೂಟದ ಜೊತೆ ಮೊಟ್ಟೆ ನೀಡಲಾಗುತ್ತಿದೆ.

ಮಕ್ಕಳ ಅಪೌಷ್ಠಿಕತೆ ನಿವಾರಿಸಲು ಶಾಲೆಯ ಬಿಸಿಯೂಟದ ಜೊತೆ ಮೊಟ್ಟೆ ನೀಡುವ ಸರ್ಕಾರದ ಯೋಜನೆ ಸ್ವಾಗತಾರ್ಹ. ಈ ಯೋಜನೆಗೆ ಅಜೀಂ ಪ್ರೇಂ ಜಿ ಫೌಂಡೇಷನ್‌ ಕೈ ಜೋಡಿಸಿ ವಾರದ 6 ದಿನವೂ ಮೊಟ್ಟೆ ನೀಡುವ ಯೋಜನೆಯಿಂದ ಮಕ್ಕಳಿಗೆ ಅನುಕೂಲವಾಗಿದೆ. ಆದರೆ, ಮೊಟ್ಟೆಗೆ ಸರ್ಕಾರ ನೀಡುವ ಹಣಕ್ಕೂ ಮಾರುಕಟ್ಟೆಯಲ್ಲಿ ಸಿಗುವ ಮೊಟ್ಟೆಗೂ ಹಣದ ವ್ಯತ್ಯಾಸ ಬರುತ್ತಿರುವುದರಿಂದ ಈ ಹೆಚ್ಚುವರಿ ಹಣ ಯಾರು ಭರಿಸಬೇಕು ? ಎಂಬ ಗೊಂದಲ ಮುಂದುವರಿದಿದೆ. ಶಾಲೆಯ ಮಕ್ಕಳ ಹಾಜರಾತಿಯಂತೆ ಶಾಲೆಗಳಿಗೆ ನೇರವಾಗಿ ಮೊಟ್ಟೆಯನ್ನೇ ಪೂರೈಸಿದರೆ ಸಮಸ್ಯೆ ಪರಿಹರವಾಗಲಿದೆ.ಮನೋಹರ್‌, -ಅಧ್ಯಕ್ಷರು, ಶಾಲಾ ಎಸ್.ಡಿ.ಎಂ.ಸಿ.ಮುತ್ತಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಸರ್ಕಾರ ಮೊಟ್ಟೆಗಳ ಖರೀದಿಗೆ 5 ರುಪಾಯಿ ನಿಗದಿ ಮಾಡಿದ್ದು ಮಾರುಕಟ್ಟೆಯಲ್ಲಿ ಮೊಟ್ಟೆಗೆ 6 ರಿಂದ 7 ರುಪಾಯಿ ಬೀಳಲಿದೆ.ಮೊಟ್ಟೆ ಖರೀದಿಗೆ ಹೆಚ್ಚುವರಿ ಹಣ ಬೇಕಾಗುತ್ತದೆ.ಈ ಬಗ್ಗೆ ಈಗಾಗಲೇ ಶಾಸಕರಿಗೆ ಮನವಿ ಮಾಡಿದ್ದೇವೆ. ಖಾಸಗಿ ಏಜೆನ್ಸಿ ಮೂಲಕ ಶಾಲೆಗಳಿಗೆ ಮೊಟ್ಟೆ ನೀಡಬೇಕು.ಪ್ರಾಯೋಗಿಕವಾಗಿ ಶೃಂಗೇರಿ ಕ್ಷೇತ್ರದಲ್ಲಿ ಶಾಲೆಗಳಿಗೆ ನೇರವಾಗಿ ಮೊಟ್ಟೆ ನೀಡುವ ಯೋಜನೆ ಜಾರಿಗೆ ತಂದರೆ ಶಾಲೆಗಳ ಸಮಸ್ಯೆ ಕಡಿಮೆಯಾಗಲಿದೆ.

-ಬಿ.ನಂಜುಂಡಪ್ಪ, ಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ನರಸಿಂಹರಾಜಪುರ