ಸಾರಾಂಶ
ಕೊಪ್ಪಳ: ರಾಜ್ಯ ಸರ್ಕಾರ ದಲಿತ ಸಮುದಾಯಕ್ಕೆ ಮೀಸಲಾಗಿದ್ದ ಅನುದಾನವನ್ನು ಕಿತ್ತುಕೊಂಡು ಬೇರೆ ಕಾರ್ಯಕ್ಕೆ ಬಳಕೆ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ. ದಲಿತರಿಗೆ ಮೀಸಲಿಟ್ಟ ಹಣವನ್ನು ಬೇರೆ ಕೆಲಸಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.ಚುನಾವಣೆಯಲ್ಲಿ ತಮ್ಮ ಗೆಲುವಿನ ಸಲುವಾಗಿ ದಲಿತರಿಗೆ ಮೀಸಲಿಟ್ಟದ್ದ ಎಸ್‌ಸಿಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲು ವರ್ಗಾಯಿಸಿದೆ. ದಲಿತರ ಹಿತ ಬಲಿಕೊಟ್ಟು ತಮ್ಮ ಸ್ವಾರ್ಥ ಸಾಧನೆ ಪೂರೈಸಿಕೊಂಡಿದ್ದಾರೆ. ಈ ಮೂಲಕ ಅವರ ಡೋಂಗಿ ದಲಿತ ಕಾಳಜಿ ಬಯಲಾಗಿದೆ. ಕಳೆದ ಒಂಬತ್ತು ತಿಂಗಳಲ್ಲಿ ಕಾಂಗ್ರೆಸ್ ದಲಿತ ಸಮುದಾಯದ ವಿಚಾರದಲ್ಲಿ ಕೇವಲ ಮಾತಿನಲ್ಲಿ ಮಾತ್ರ ಕಾಳಜಿ ತೋರಿದೆ. ದಲಿತ ಸಮುದಾಯವನ್ನು ವಂಚಿಸುತ್ತಿದೆ ಎಂದು ದೂರಿದರು.
ಪಾರ್ಟಿಯ ಹಿತಕ್ಕೆ ದಲಿತ ಸಮುದಾಯವನ್ನು ಸರ್ಕಾರ ಬಲಿ ಕೊಟ್ಟಿದೆ. ದಲಿತ ವಿದ್ಯಾರ್ಥಿಗಳಿಗ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟ ಹಣ ಕೂಡ ದುರ್ಬಳಕೆಯಾಗಿದೆ. ಉನ್ನತ ಶಿಕ್ಷಣದಿಂದ ದಲಿತ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಸಲುವಾಗಿ ಶಿಕ್ಷಣ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.ವಿಭಾಗ ಸಹ ಪ್ರಭಾರಿಗಳಾದ ಚಂದ್ರಶೇಖರ್ ಹಲಗೇರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ನಾಡಿಗೇರ, ಸುನೀಲ ಹೆಸರೂರ, ಶಿವು ಅರಕೇರಿ, ಖಜಾಂಚಿ ನರಸಿಂಗ ರಾವ್ ಕುಲಕರ್ಣಿ, ಮುಖಂಡರಾದ ಮಂಜುಳಾ ಕರಡಿ, ಕನಕಮೂರ್ತಿ ಛಲವಾದಿ, ಗಣೇಶ ಹೊರತಟ್ನಾಳ, ಲಕ್ಷ್ಮಣ ಕಾಳಿ, ಮಹಾಲಕ್ಷ್ಮಿ ಕಂದಾರಿ, ಪ್ರದೀಪ ಹಿಟ್ನಾಳ, ವೀರೇಶ ಸಜ್ಜನ, ಮಹಾತೇಶ ಪಾಟೀಲ್, ಮಂಜುನಾಥ್ ಪಾಟೀಲ್, ಮಂಜುನಾಥ ಮುಸಲಾಪುರ, ಪಕ್ಷದ ಪದಾಧಿಕಾರಿಗಳು, ಎಸ್‌ಸಿ ಮೋರ್ಚಾದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.