ಮಡಿಕೇರಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕರಿಂದ ಅನುದಾನ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್

| Published : Nov 24 2025, 03:15 AM IST

ಮಡಿಕೇರಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕರಿಂದ ಅನುದಾನ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಶಾಸಕರಾಗಿ ಮಡಿಕೇರಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದಿದ್ದಾರೆ ಎಂದು ಬಿ ಬಿ. ಸತೀಶ್‌ ಹೇಳಿದರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರು ಶಾಸಕರಾಗಿ ಎರಡೂವರೆ ವರ್ಷಗಳಲ್ಲಿ 1724.165 ಕೋಟಿ ರು.ಗಳನ್ನು ಮಡಿಕೇರಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್ ಸ್ಪಷ್ಟಪಡಿಸಿದ್ದಾರೆ. ಮಾಜಿ ಶಾಸಕರಾದ ಅಪ್ಪಚ್ಚು ರಂಜನ್ ಅವರು ಈಚೆಗೆ ಬಿಜೆಪಿ ವತಿಯಿಂದ ಜೇಸಿ ವೇದಿಕೆಯಲ್ಲಿ ನಡೆದ ಭಾಷಣದಲ್ಲಿ 1724 ಕೋಟಿ ಅನುದಾನದ ಬಗ್ಗೆ ಟೀಕೆ ಮಾಡುತ್ತ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಿಗೆ ಸೊನ್ನೆಗಳ ಬಗ್ಗೆ ಅರಿವಿದೆಯೇ ಎಂದು ಸಾರ್ವಜನಿಕವಾಗಿ ಪ್ರಶ್ನಿಸಿದ್ದಾರೆ. ನಾನು ಕೂಡ ಕನ್ನಡ, ಇಂಗೀಷ್ ಮಾಧ್ಯಮದಲ್ಲಿ ಪದವಿ ಓದಿದ್ದೇನೆ. ಸೊನ್ನೆಗಳ ಬಗ್ಗೆ ಅರಿವಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. ಹಾಲಿ ಶಾಸಕರು ತಮ್ಮ ಕ್ಷೇತ್ರಕ್ಕೆ ತಂದಿರುವ 1724.165 ಕೋಟಿ ರು.ಗಳ ಅನುದಾನದ ಪಟ್ಟಿಯನ್ನು ಸಂಬಂಧಪಟ್ಟ ಇಲಾಖಾಧಿಕಾರಿಗಳು ಕೊಟ್ಟಿದ್ದಾರೆ. ಅದನ್ನು ಬಿಜೆಪಿಯ ಮಾಜಿ ಶಾಸಕರಿಗೆ ಅಂಚೆ ಮೂಲಕ ಕಳುಹಿಸಿದ್ದೇವೆ. ಅದನ್ನು ಪಕ್ಷದ ನಾಯಕರಿಗೆ ವಿತರಿಸಬಹುದು ಎಂದು ಹೇಳಿದರು. ಮಾಹಿತಿ ಹಕ್ಕಿನ ಬಗ್ಗೆ ತಿಳುವಳಿಕೆಯಿದ್ದರೆ ಮಾಜಿ ಶಾಸಕರು ಮತ್ತು ಮಂಡಲ ಬಿಜೆಪಿ ಪದಾಧಿಕಾರಿಗಳು ಮಾಹಿತಿ ಹಕ್ಕಿನಲ್ಲೂ ಪಡೆದುಕೊಳ್ಳಬಹುದು ಎಂದು ಹೇಳಿದರು. ಲೋಕೋಪಯೋಗಿ ಇಲಾಖೆಯಿಂದ ಮಡಿಕೇರಿ, ಸೋಮವಾರಪೇಟೆ, ದೋಣಿಗಲ್ಲು ರಸ್ತೆಗೆ 900 ಕೋಟಿ ರು..ಗಳು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಈಗಾಗಲೇ ಡಿಪಿಅರ್‌ಗೆ 4 ಕೋಟಿ ರು. ಬಿಡುಗಡೆಯಾಗಿದೆ. 2026 ಇಸವಿಯ ಪ್ರಾರಂಭದಲ್ಲೇ ಕಾಮಗಾರಿ ಪ್ರಾರಂಭವಾಗುತ್ತದೆ ಎಂದು ಹೇಳಿದರು. ಇನ್ನುಳಿದ ಅನುದಾನದ ಅನೇಕ ಕಾಮಗಾರಿಗಳ ನಡೆಯುತ್ತಿವೆ. ಕೆಲವು ಕಾಮಗಾರಿಗಳು ಪೂರ್ಣಗೊಂಡಿವೆ. ಮುಂದಿನ ಮಾರ್ಚ್ ಒಳಗೆ ಕಾಮಗಾರಿಗಳು ಮುಕ್ತಾಯಗೊಳ್ಳಲಿವೆ ಎಂದು ಹೇಳಿದರು.

ಹಾಲಿ ಶಾಸಕರ ಮಡಿಕೇರಿ ಕ್ಷೇತ್ರದಲ್ಲಿ ಅಭಿವೃದ್ಧಿಯ ಶಕೆ ಪ್ರಾರಂಭವಾಗಿದೆ. ಮುಂದಿನ ಎರಡೂವರೆ ವರ್ಷದ ಅವಧಿಯಲ್ಲಿ ಇನ್ನು ಹೆಚ್ಚಿನ ಅನುದಾನವನ್ನು ತಂದು ಮಾದರಿ ಕ್ಷೇತ್ರವನ್ನು ಮಾಡುವ ಗುರಿ ಶಾಸಕರಿಗಿದೆ. ಅಭಿವೃದ್ಧಿಯನ್ನು ಸಹಿಸಲಾಗದ ಮಾಜಿ ಶಾಸಕರು ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ದೂರಿದರು. ಮುಂದಿನ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಕಾಂಗ್ರೆಸ್ ಸರ್ಕಾರದ 5 ಗ್ಯಾರೆಂಟಿಗಳು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪುತ್ತಿವೆ. ಜನರ ಆಶೀರ್ವಾದ ಸಿಗಲಿದೆ ಎಂದು ಹೇಳಿದರು.ಮಾಜಿ ಶಾಸಕರು 25 ವರ್ಷ ಶಾಸಕರಾಗಿದ್ದಾಗಲು, ಕಾಂಗ್ರೆಸ್ ಸರ್ಕಾರವೇ ಅನುದಾನ ಕೊಟ್ಟಿರುವುದು. ಮೆಡಿಕಲ್ ಕಾಲೇಜು, ಇಂಜಿನಿಯರ್ ಕಾಲೇಜು ಸೇರಿದಂತೆ ಎಲ್ಲಾ ಯೋಜನೆಗಳು ಎಸ್.ಎಂ.ಕೃಷ್ಣ, ಸಿದ್ದರಾಮಯ್ಯ, ಧರ್ಮಸಿಂಗ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಜಿಲ್ಲೆಗೆ ಕೊಟ್ಟ ಕೊಡುಗೆಗಳು. ಬಿಜೆಪಿ 8 ವರ್ಷ ರಾಜ್ಯವನ್ನು ಆಳಿದಾಗ ಭ್ರಷ್ಠ ಆಡಳಿತವನ್ನು ಮಾತ್ರ ಕೊಟ್ಟಿದೆ. ಕೊಡಗು ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಿದೆ. ಜಿಲ್ಲೆಯ ಜನರು ಬುದ್ದಿವಂತರಿದ್ದಾರೆ, ಮಾಜಿ ಶಾಸಕರು ಭಾಷಣದಲ್ಲಿ ಹೇಳಿದ್ದೆಲ್ಲವನ್ನು ನಂಬುತ್ತಾರೆ ಎಂಬ ಭ್ರಮೆಯಿಂದ ಹೊರಬನ್ನಿ ಎಂದರು.

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಡಾ.ಮಂತರ್‌ಗೌಡ ಕಾಂಗ್ರೆಸ್ ಅಭ್ಯರ್ಥಿ, ಬಿಜೆಪಿಯಿಂದ ನಾನೇ ಎಂದು ಮಾಜಿ ಶಾಸಕರು ಘೋಷಿಸಲಿ ಎಂದು ಸವಾಲು ಹಾಕಿದರು. ಕಳೆದ 25 ವರ್ಷ ಸಿ ಆ್ಯಂಡ್ ಡಿ ಸಮಸ್ಯೆಯನ್ನು ಅಪ್ಪಚ್ಚು ರಂಜನ್ ಬಗೆಹರಿಸಿಲ್ಲ. ಕಾಂಗ್ರೆಸ್ ಸರ್ಕಾರ ಹಾಗು ಜಿಲ್ಲೆಯ ಶಾಸಕರು ಸಿ ಆ್ಯಂಡ್ ಡಿ ಭೂಮಿ ಸಮಸ್ಯೆ ಬಗೆಹರಿಸಲು ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ. ವಿಶೇಷ ಸಮಿತಿ ರಚನೆಯಾಗಿದೆ. ಕಾಂಗ್ರೆಸ್ ಸರ್ಕಾರ ಯಾವತ್ತು ರೈತಸ್ನೇಹಿಯಾಗಿರುತ್ತದೆ. ಅನೇಕ ವರ್ಷಗಳಿಂದ ಬೆಳೆಹಾನಿ ಪರಿಹಾರ, ರೈತರ ಸಾಲಮನ್ನ ಮಾಡಿದೆ. ಬಡಜನರಿಗಾಗಿ ಅನೇಕ ಯೋಜನೆಗಳನ್ನು ತಂದಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಬ್ಲಾಕ್ ಉಪಾಧ್ಯಕ್ಷ ಬಿ.ಎಂ.ಬಸವರಾಜು, ಕಾರ್ಯದರ್ಶಿ ಸುನಿಲ್, ಡಿಸಿಸಿ ಜನಾರ್ಧನ್, ನಗರ ಅಧ್ಯಕ್ಷ ಮಂಜುನಾಥ ಇದ್ದರು.