ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ / ಸೊರಬ
ಗೋವಿಂದಾಪುರ ಆಶ್ರಯ ಮನೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಸಂಬಂಧ ನ್ಯೂನತೆಗಳ ಪಟ್ಟಿಯನ್ನು ಕೂಡಲೇ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಹಾನಗರ ಪಾಲಿಕೆ ಆಯುಕ್ತರಿಗೆ ತಾಕೀತು ಮಾಡಿದರು.ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಮನೆಗಳ ನಿರ್ಮಾಣಕ್ಕೂ ಮುನ್ನವೇ ನೀರು, ಯುಜಿಡಿ, ವಿದ್ಯುತ್ ಇತರೆ ಮೂಲ ಸೌಕರ್ಯ ಒದಗಿಸಬೇಕಿತ್ತು. ಫಲಾನುಭವಿಗಳ ವಂತಿಗೆಯೂ ಹೆಚ್ಚಾಗಿದ್ದು, ಅವರಿಗೆ ಹೊರೆಯಾಗಿದೆ. 260 ರು. ಕೋಟಿ ಮೊತ್ತದಷ್ಟು ದೊಡ್ಡ ಯೋಜನೆಯನ್ನು ಸಮರ್ಪಕವಾಗಿ ಯೋಜಿಸಬೇಕಿತ್ತು. ಅದು ಆಗಿಲ್ಲ. ಇದೀಗ ನ್ಯೂನತೆಗಳ ಸಂಪೂರ್ಣ ವರದಿಯನ್ನು ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಅಧಿಕಾರಿಗಳ ಮೂಲಕ ತಮಗೆ ಸೋಮವಾರದೊಳಗೆ ವರದಿ ನೀಡಿ ನೀಡುವಂಂತೆ ಸೂಚಿಸಿದ ಅವರು ಮುಂದೆ ಈ ಬಗ್ಗೆ ಸರ್ಕಾರದ ಬಳಿ ಚರ್ಚಿಸಿ, ಸರ್ಕಾರದಿಂದ 10 ರಿಂದ 15 ಕೋಟಿ ರು.ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಪಾಲಿಕೆ ಅಧಿಕಾರಿಗಳು ತಮ್ಮ ಸಾಫ್ಟ್‌ವೇರ್‌ನಲ್ಲಿ ಅಗತ್ಯವಾದ ಬದಲಾವಣೆ ತಂದು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ನಗರದಲ್ಲಿ ಮೂಲಭೂತ ಸೌಕರ್ಯಗಳ ಕುರಿತು ಹಲವಾರು ದೂರುಗಳಿದ್ದು ಆಯುಕ್ತರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ನೀರು, ವಿದ್ಯುತ್, ಯುಜಿಡಿ ಇತರೆ ಕುರಿತು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಪಾಲಿಕೆ ವತಿಯಿಂದ ಈ ವಸತಿ ಯೋಜನೆಗೆ 25 ಕೋಟಿ ರು. ನೀಡಬೇಕಿದ್ದು, ಈವರೆಗೆ 9 ಕೋಟಿ ರು. ಮಾತ್ರ ನೀಡಲಾಗಿದೆ. ಹಿಂದಿನ ಸಭೆಯಲ್ಲಿ ಆಯುಕ್ತರು ಇತರೆ ಹೆಡ್‌ನಲ್ಲಿ ಉಳಿಕೆ ಹಣವನ್ನು ನೀಡುವುದಾಗಿ ತಿಳಿಸಿದ್ದರು ಎಂದರು.
ವಸತಿ ಯೋಜನೆಗಳಿಗೆ ಸಂಬಂಧಿಸಿದಂತೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಗೋವಿಂದಾಪುರ ಗೋಪಿಶೆಟ್ಟಿಕೊಪ್ಪ ಒಂದೆಡೆಯಾದರೆ, ಸ್ಲಂ ಬೋರ್ಡ್‌ಗೆ ಸಂಬಂಧಿಸಿದಂತೆ 1500 ಮನೆಗಳ ಸಮಸ್ಯೆಯೂ ಇದೆ. ಗೋವಿಂದಾಪುರದಲ್ಲಿ ಈಗ ಕೇವಲ 60-70 ಜನ ಮಾತ್ರ ವಾಸ ಮಾಡುತ್ತಿದ್ದಾರೆ. ಅಲ್ಲಿ ಮೂಲಭೂತ ಸೌಕರ್ಯಗಳಿಗೆ ಶಾಶ್ವತವಾದ ಪರಿಹಾರಗಳನ್ನು ಒದಗಿಸಬೇಕು ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಪಾಲಿಕೆಯಲ್ಲಿ ಖಾತೆ ಎಕ್ಸ್‌ಟ್ರಾಕ್ಟ್ ತೆಗೆದುಕೊಳ್ಳಲು ಹೋದಾಗ ಕಳೆದ 8 ರಿಂದ 10 ವರ್ಷ ನಿರಂತರ ವಾಗಿ ತೆರಿಗೆ ಕಟ್ಟಿದ್ದರೂ ಸಹ ಅದರ ಹಿಂದಿನ 8 ರಿಂದ 10 ವರ್ಷಗಳ ತೆರಿಗೆಯನ್ನು ಪಾವತಿಸಿಕೊಳ್ಳುತ್ತಾರೆ. ಇದರಿಂದ ಸಾರ್ವಜನಿಕರಿಗೆ ಕಿರುಕುಳ ಆದಂತೆ ಆಗುತ್ತಿದೆ ಎಂದು ದೂರಿದರು.
ಶಾಸಕಿ ಶಾರದಾ ಪೂರ‍್ಯಾನಾಯ್ಕ ಮಾತನಾಡಿ, ಅನುಪಿನಕಟ್ಟೆ ಪೋದಾರ್ ಶಾಲೆ ಬಳಿ ಪಾಲಿಕೆಯವರು ರಾತ್ರಿ ಹೊತ್ತು ಕಸ ಹಾಕುತ್ತಿದ್ದಾರೆ, ಕಟ್ಟಡದ ತ್ಯಾಜ್ಯ ಗಳನ್ನು ಹಾಕುತ್ತಿದ್ದು, ಇದನ್ನು ನಿಲ್ಲಿಸಬೇಕು. ಪಾಲಿಕೆ ಆಯುಕ್ತರು ಖುದ್ದು ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.ಪಾಲಿಕೆ ಆಯುಕ್ತರಾದ ಕವಿತಾ ಯೋಗಪ್ಪನವರ್ ಮಾತನಾಡಿ, ಗೋವಿಂದಾಪುರ ಆಶ್ರಯ ಯೋಜನೆಯಡಿ 40 ಎಕರೆಯಲ್ಲಿ ಒಟ್ಟು 3000 ಮನೆಗಳು ಮಂಜೂರಾ ಗಿದ್ದು 624 ಮನೆಗಳನ್ನು ಈಗಾಗಲೇ ಸಂಪೂರ್ಣಗೊಳಿಸಿದ್ದು 225 ಫಲಾನುಭವಿಗಳಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ. ಉಳಿದ 399 ಮನೆಗಳಿಗೆ ಸಂಬಂಧಿಸಿ ದಂತೆ ಬ್ಯಾಂಕ್ ಸಾಲ ಪ್ರಕ್ರಿಯೆ ನಡೆಯುತ್ತಿದೆ. ಫಲಾನುಭವಿಗಳಿಗೆ ಬ್ಯಾಂಕ್‌ನಿಂದ ಸಾಲ ಮಂಜೂರಾದ ತಕ್ಷಣ ಹಸ್ತಾಂತರಿಸಲಾಗುವುದು. 648 ಮನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, 1728 ಮನೆಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು.
ಶಾಸಕರಾದ ಬಲ್ಕೀಶ್ ಬಾನು ಮಾತನಾಡಿ, ಮನೆಗಳನ್ನು ಹಸ್ತಾಂತರಿಸಿದ್ದರೂ ಅಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುತ್, ಇತರೆ ಸೌಲಭ್ಯಗಳೇ ಇಲ್ಲ. ಇದನ್ನೆಲ್ಲ ಶೀಘ್ರವಾಗಿ ಒದಗಿಸುವಂತೆ ತಿಳಿಸಿದರು.ಪಾಲಿಕೆಯಿಂದ ಈಗಾಗಲೇ ರಸ್ತೆ ಹಾಗೂ ತುರ್ತಾಗಿ ನೀರಿನ ಅಗತ್ಯ ನೀಗಿಸಲು 3 ಬೋರ್‌ವೆಲ್ ಕೊರೆಸಲಾಗಿದೆ, 288 ಮನೆಗಳಿಗೆ ಯುಜಿಡಿ, ಕುಡಿಯುವ ನೀರು ನೀಡಲಾಗಿದೆ. 336 ಮನೆಗಳಿಗೆ ಬೋರ್ ವೆಲ್ ವ್ಯವಸ್ಥೆ ಮಾಡಲಾಗುತ್ತಿದೆ. ಶಾಶ್ವತ ವಿದ್ಯುತ್ ಸಂಪರ್ಕಕ್ಕೆ ರೂ.10.5 ಕೋಟಿ ಅವಶ್ಯಕತೆ ಇದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.ತುಂಗಾನದಿ ಮಾಲಿನ್ಯ ತಡೆಯಿರಿ :ತುಂಗಾ ಎಡ ಮತ್ತು ಬಡದಂಡೆ ಕಾಲುವೆಗಳಿಗೆ ನಗರ ಮತ್ತು ಗ್ರಾಮೀಣ ಪ್ರದೇಶ ವ್ಯಾಪ್ತಿಯಲ್ಲಿ ನೇರವಾಗಿ ಕಲುಷಿತ ನೀರನ್ನು ಬಿಡಲಾಗುತ್ತಿದೆ. ಇದರಿಂದ ನೀರು ಕಲುಷಿತವಾಗಿ ಕೃಷಿಗೆ ಕೂಡ ಯೋಗ್ಯವಾಗಿಲ್ಲ, ಜನ-ಜಾನುವಾರುಗಳ ಆರೋಗ್ಯಕ್ಕೂ ಈ ನೀರು ಮಾರಕವಾಗಿದೆ. ಈ ಮಾಲಿನ್ಯ ತಡೆಗಟ್ಟಬೇಕು ಎಂದು ಕಾಡಾ ಅಧ್ಯಕ್ಷರಾದ ಡಾ.ಅಂಶುಮನ್ ಮನವಿ ಮಾಡಿದರು.
ಕರ್ನಾಟಕ ನೀರು ಮಂಡಳಿ ಎಇಇ ಮಿಥುನ್ ಕುಮಾರ್ ಮಾತನಾಡಿ, ಒಳಚರಂಡಿ ನೀರನ್ನು ಸಂಸ್ಕರಣಾ ಘಟಕದಿಂದ ಶುದ್ದೀಕರಿಸಿ ನದಿಗೆ ಬಿಡಲಾಗುತ್ತಿದೆ, ಬಚ್ಚಲು, ಶೌಚಾಲಯದ ಗ್ರೇವಾಟರ್‌ನ್ನು ಒಳಚರಂಡಿ ನೀರಿಗೆ ಸಂಪರ್ಕ ಒದಗಿಸಿದರೆ ಅದನ್ನು ಸಂಸ್ಕರಿಸಿ ಬಿಡಲಾಗುವುದು. 80 ಸಾವಿರ ಮನೆಗಳ ಪೈಕಿ 42 ಸಾವಿರ ಮನೆಗಳ ತ್ಯಾಜ್ಯ ನೀರು ಶುದ್ಧೀಕರಣಕ್ಕೆ ಒಳಗಾಗುತ್ತಿದೆ. ಗ್ರೇವಾಟರ್‌ನ್ನೂ ಕೂಡ ಸಂಸ್ಕರಿಸಿದಲ್ಲಿ ಮಾಲಿನ್ಯ ತಡೆಗಟ್ಟಬಹುದು ಎಂದರು.ಅನಧಿಕೃತ ಗ್ರೇ ಮತ್ತು ಬ್ಲಾಕ್ ವಾಟರ್ ನದಿ ಸೇರದಂತೆ ತಡೆಯಬೇಕು. ಪ್ರತಿ ಮನೆಗಳ ಒಳಚರಂಡಿ, ಗ್ರೇವಾಟರ್ ಶುದ್ದೀಕರಣಕ್ಕೆ ಒಳಗಾಗುವಂತೆ ಕ್ರಮ ವಹಿಸ ಬೇಕು. ಹಾಗೂ ಶಾಸಕರು ಸಭೆಯಲ್ಲಿ ತಿಳಿಸಿದಂತೆ ಕಾವೇರಿ ನದಿ ಮಾಲಿನ್ಯ ತಡೆ ಸಮಿತಿ ರಚನೆಯಂತೆ ತುಂಗ-ಭದ್ರಾ ನದಿ ಮಾಲಿನ್ಯ ತಡೆಯಲು ಸಮಿತಿ ರಚನೆಗೆ ಪ್ರಸ್ತಾವನೆ ಸಿದ್ದಪಡಿಸುವಂತೆ ಸಚಿವ ಮಧು ಮಧು ಬಂಗಾರಪ್ಪ ಸೂಚನೆ ನೀಡಿದರು.ಸರ್ಕಾರಿ ಶಾಲೆ ಕೇವಲವಾಗಿ ಕಾಣಬೇಡಿ: ಸಚಿವ ಮಧು ಬಂಗಾರಪ್ಪ
ಸೊರಬ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಪ್ರಾಥಮಿಕ ಶಿಕ್ಷಣ ಕಲಿತ ಸರ್ಕಾರಿ ಶಾಲೆ ಮುಖ್ಯಮಂತ್ರಿಯನ್ನಾಗಿ ಮಾಡಿದೆ. ಹಾಗಾಗಿ ಸರ್ಕಾರಿ ಶಾಲೆ ಎಂದರೆ ಕೇವಲವಾಗಿ ಕಾಣುವುದನ್ನು ತೊರೆದು ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳ ಬಗ್ಗೆ ಸರ್ವರೂ ಕಾಳಜಿ ವಹಿಸಿದಾಗ ಉನ್ನತ ಮಟ್ಟಕ್ಕೆ ಸಾಗಲು ಸಾಧ್ಯ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.ಶುಕ್ರವಾರ ತಾಲೂಕಿನ ಕುಬಟೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರ್ಕಾರದ ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.ರಾಜ್ಯದಲ್ಲಿ ಸರ್ಕಾರಿ ಶಾಲೆಯಲ್ಲಿ ಓದಿದ ಸಾಧಕರು ಮನಸ್ಸು ಮಾಡಿದರೆ ಸರ್ಕಾರಿ ಶಾಲೆಗಳ ಭವಿಷ್ಯ ಬದಲಿಸಬಹುದು. ಈ ಬದಲಾವಣೆಗೆ ಕುಬಟೂರು ಗ್ರಾಮದ ಸರ್ಕಾರಿ ಶಾಲೆಯಿಂದ ಮುನ್ನುಡಿ ಬರೆಯಲಾಗಿದೆ ಎಂದ ಅವರು, ಶಾಲೆಗೆ ನೀಡಿದ ದೇಣಿಗೆ ಮೊತ್ತ ರೂ. ೧೦ ಲಕ್ಷ. ಆದರೆ, ಇದು ಮುಂದಿನ ದಿನದಲ್ಲಿ ಕೋಟಿ ರೂ.ಗೆ ವಿಸ್ತರಣೆ ಆಗಲಿದೆ. ಇದರಿಂದ, ಸರ್ಕಾರಿ ಶಾಲೆಗಳ ಏಳಿಗೆ ಸಾಧ್ಯವಾಗಲಿದೆ ಎಂದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಶಯ ಸಾಕಾರಗೊಂಡಿದೆ ಎಂದರು.
ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಭವಿಷ್ಯವನ್ನು ರೂಪಿಸಿದ್ದು, ಇದೇ ಕುಬಟೂರಿನ ಸರ್ಕಾರಿ ಶಾಲೆಯಲ್ಲಿ ಅಕ್ಷರ ಕಲಿತ ಬಂಗಾರಪ್ಪ ಅವರು ರಾಜ್ಯದ ಭವಿಷ್ಯ ರೂಪಿಸಲು ಸಾಕ್ಷಿಯಾದರು. ಜನ ಸಾಮಾನ್ಯರ ನಾಡಿ ಮಿಡಿತಕ್ಕೆ ಹತ್ತಿರವಾದರು. ಅವರ ಸ್ಮರಣಾರ್ಥ ಈ ಕಾರ್ಯಕ್ರಮ ಹೊಸ ರೂಪ ಪಡೆದುಕೊಂಡಿದೆ ಎಂದರು.ಅಕ್ಷರ ಕಲಿಸಿದ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಸರ್ಕಾರದ ಜತೆಗೆ ಎಲ್ಲರೂ ಕೈಜೋಡಿಸಬೇಕು. ಇದರಿಂದ, ಸರ್ಕಾರಿ ಶಾಲೆಗಳ ಅಸ್ಥಿತ್ವ ಸುಧಾರಣೆ ಕಾಣಲು ಸಾಧ್ಯ. ಮುಂದಿನ ಒಂದು ವರ್ಷದಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದಡಿ ೧ ಸಾವಿರ ರು. ಕೋಟಿ ದೇಣಿಗೆ ಹರಿದು ಬರುವ ನಿರೀಕ್ಷೆ ಇದೆ. ಇದಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.ಕುಬಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸುನಿತಾ ಮಾತನಾಡಿ, ಕುಬಟೂರು ಸರ್ಕಾರಿ ಶಾಲೆಗೆ ೧೫೦ ವರ್ಷದ ಇತಿಹಾಸವಿದೆ. ಸ್ವಾತಂತ್ರ್ಯ ಬಳಿಕ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಗ್ರಾಮವನ್ನು ಅಗ್ರ ಸ್ಥಾನಕ್ಕೆ ಏರಿಸಿದರು. ತಂದೆ ಹಾಕಿ ಕೊಟ್ಟ ಮಾರ್ಗದಲ್ಲಿ ಮಧು ಬಂಗಾರಪ್ಪ ಅವರು ಸಾಗುತ್ತಿದ್ದಾರೆ ಎಂದ ಅವರು, ಶಾಲೆಗೆ ಎರಡು ಟಿವಿ, ಕಂಪ್ಯೂಟರ್, ಮಕ್ಕಳಿಗೆ ಕೂರಲು ಕುರ್ಚಿ ಹಾಗೂ ಟೇಬಲ್, ಫ್ಯಾನ್ ಸೇರಿ ರೂ. ೧೦ ಲಕ್ಷ ಮೌಲ್ಯದ ಪರಿಕರಗಳನ್ನು ದೇಣಿಗೆ ನೀಡಿದ್ದಾರೆ. ಈ ರೀತಿಯ ಮನೋಭಾವ ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಪತ್ನಿ ಅನಿತಾ ಮಧು ಬಂಗಾರಪ್ಪ, ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ನಾಗರಾಜಗೌಡ ಶಿಕಾರಿಪುರ, ಹೆಚ್ ಗಣಪತಿ, ಬಗರ್ ಹುಕುಂ ಕಮಿಟಿಯ ಅಧ್ಯಕ್ಷ ಎಂ.ಡಿ.ಶೇಖರ್, ಶಿಕ್ಷಣ ಇಲಾಖೆಯ ದಯಾನಂದ ಕಲ್ಲೇರ್, ನಾಗರಾಜ, ಅರುಣ್‌ಕುಮಾರ್, ರಾಜಶೇಖರ, ಮಂಜುನಾಥ, ಹುಚ್ಚಪ್ಪ, ಪ್ರಕಾಶ್ ಇದ್ದರು.