ಶಾರ್ಜಾದಲ್ಲಿ ಆತ್ಮಹತ್ಯೆ ಮಾಡಿದ್ದ ಪುತ್ತೂರಿನ ವ್ಯಕ್ತಿ ಅಂತ್ಯಕ್ರಿಯೆ

| Published : Jul 29 2024, 12:52 AM IST

ಶಾರ್ಜಾದಲ್ಲಿ ಆತ್ಮಹತ್ಯೆ ಮಾಡಿದ್ದ ಪುತ್ತೂರಿನ ವ್ಯಕ್ತಿ ಅಂತ್ಯಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ಭರತ್ ಕುಮಾರ್ ಅವರನ್ನು ವಿದೇಶಕ್ಕೆ ಕೆಲಸಕ್ಕೆಂದು ಕರೆದೊಯ್ದವರ ವಿರುದ್ಧ ದೂರು ನೀಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಮೂರು ತಿಂಗಳ ಹಿಂದಷ್ಟೇ ಉದ್ಯೋಗದ ನಿಮಿತ್ತ ಶಾರ್ಜಾಕ್ಕೆ ತೆರಳಿದ್ದು, ಅಲ್ಲಿ ಜು.೧೧ರಂದು ಆತ್ಮಹತ್ಯೆ ಮಾಡಿಕೊಂಡಿದ್ದ ಪುತ್ತೂರು ತಾಲೂಕಿನ ಕಲ್ಲೇಗ ಅಜೇಯ ನಗರದ ಭರತ್‌ ಕುಮಾರ್(೪೪) ಮೃತದೇಹವನ್ನು ಶನಿವಾರ ವಿದೇಶದಿಂದ ಪುತ್ತೂರಿನ ಮನೆಗೆ ತಂದು ನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಮರದ ಕೆತ್ತನೆ ಕೆಲಸದ ಕಂಪ್ಯೂಟರ್ ಡಿಸೈನರ್ ಆಗಿದ್ದ ಭರತ್ ಕುಮಾರ್ ಸ್ಥಳೀಯ ವ್ಯಕ್ತಿಯೊಬ್ಬರ ಮೂಲಕ ವೀಸಾ ಪಡೆದುಕೊಂಡು ೨೦೨೪ರ ಮಾರ್ಚ್ ೨೦ರಂದು ಶಾರ್ಜಾದ ಪೀಠೋಪಕರಣ ಸಂಸ್ಥೆಗೆ ಕೆಲಸಕ್ಕೆ ಹೋಗಿದ್ದರು. ಅಲ್ಲಿ ಭರತ್‌ ಅವರಿಗೆ ಅವರಿಗೆ ಗೊತ್ತಿುರವ ಕೆಲಸ ಕೊಡದೆ ದೊಡ್ಡ ದೊಡ್ಡ ಮರಗಳನ್ನು ಲೋಡ್ ಮಾಡುವಂತಹ ಕೂಲಿ ಕೆಲಸ ಕೊಡಲಾಗಿತ್ತು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ತನ್ನ ತಾಯಿಗೆ ದೂರವಾಣಿ ಮೂಲಕ ತಿಳಿಸಿದ್ದರು ಎನ್ನಲಾಗಿದೆ.

ಈ ಬಗ್ಗೆ ಸಂಸದ ಬ್ರಿಜೇಶ್ ಚೌಟ ಮತ್ತು ಭಾರತೀಯ ರಾಯಭಾರಿ ಕಚೇರಿಗೆ ಮನವಿ ಸಲ್ಲಿಸಿದ್ದ ತಾಯಿ ಸುಲೋಚನಾ ಅವರು ತನ್ನ ಪುತ್ರನ ಆತ್ಮಹತ್ಯೆಯ ಬಗ್ಗೆ ಸಂಶಯಗಳಿವೆ ಹಾಗೂ ಮೃತದೇಹವನ್ನು ಊರಿಗೆ ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದರು. ಅದರಂತೆ ಮೃತದೇಹವನ್ನು ಮಂಗಳೂರಿನ ತನಕ ವಿಮಾನದಲ್ಲಿ ತಂದು ಬಳಿಕ ಆಂಬುಲೆನ್ಸ್‌ನಲ್ಲಿ ಪುತ್ತೂರಿಗೆ ತರಲಾಗಿತ್ತು. ಡೆತ್ ಸರ್ಟಿಫಿಕೇಟ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಲಾಗಿದೆ.

ಭರತ್ ಕುಮಾರ್ ಅವರನ್ನು ವಿದೇಶಕ್ಕೆ ಕೆಲಸಕ್ಕೆಂದು ಕರೆದೊಯ್ದವರ ವಿರುದ್ಧ ದೂರು ನೀಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮೃತರು ತಾಯಿ, ಪತ್ನಿ, ಇಬ್ಬರು ಸಹೋದರಿಯರು ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.