ಸರ್ಕಾರಿ ಗೌರವದೊಂದಿಗೆ ಮೃತಯೋಧನ ಅಂತ್ಯಕ್ರಿಯೆ

| Published : Nov 18 2023, 01:00 AM IST

ಸರ್ಕಾರಿ ಗೌರವದೊಂದಿಗೆ ಮೃತಯೋಧನ ಅಂತ್ಯಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದ ಯೋಧ ಶಟವಾಜಿ ರಾವ್ ಶಿಂಧೆ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಂತ ಗ್ರಾಮ ತಾಲೂಕಿನ ಅಮರಗೋಳದಲ್ಲಿ ಶುಕ್ರವಾರ ನೆರವೇರಿತು.

ಕನ್ನಡಪ್ರಭ ವಾರ್ತೆ ನವಲಗುಂದ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದ ವೀರಯೋಧ ಶಟವಾಜಿ ರಾವ್ ಶಿಂಧೆ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಸ್ವಂತ ಗ್ರಾಮ ತಾಲೂಕಿನ ಅಮರಗೋಳದಲ್ಲಿ ಶುಕ್ರವಾರ ನೆರವೇರಿತು.

ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ಶಟವಾಜಿರಾವ್‌ ಶಿಂಧೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರ ಶುಕ್ರವಾರ ಬೆಳಗ್ಗೆ ಹುಬ್ಬಳ್ಳಿ ಮಾರ್ಗವಾಗಿ ನವಲಗುಂದಕ್ಕೆ ಬಂದಿತು. ಅಲ್ಲಿ ಯುವಕರು, ಸಮಾಜ ಬಾಂಧವರು, ಗ್ರಾಮದ ಹಿರಿಯರು, ತಾಲೂಕು ಆಡಳಿತ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿತು. ಬಳಿಕ ಪಟ್ಟಣದಿಂದ ರೋಣ ಕ್ರಾಸ್‌ವರೆಗೂ ವಿವಿಧ ಶಾಲಾ ಮಕ್ಕಳು, ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌, ಎನ್‌ಸಿಸಿ ಮತ್ತು ಮಾಜಿ ಸೈನಿಕರು ಮೆರವಣಿಗೆ ನಡೆಸಿ ಬೀಳ್ಕೊಟ್ಟರು. ಅಲ್ಲಿಂದ ಅಮರಗೋಳಕ್ಕೆ ಪಾರ್ಥಿವ ಶರೀರವನ್ನು ಕೊಂಡೊಯ್ಯಲಾಯಿತು. ಅಲ್ಲೂ ಮೆರವಣಿಗೆ ನಡೆಸಿ ಯೋಧನ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಯಿತು.

ಸ್ವಂತ ಗ್ರಾಮದಲ್ಲಿನ ಯೋಧನ ಜಮೀನಿನಲ್ಲೇ ಮರಾಠಾ ಸಮಾಜದ ವಿಧಿ ವಿಧಾನದ ಪ್ರಕಾರ, ಸರ್ಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಗ್ರಾಮದ ಶಾಲೆಯ ಆವರಣದಲ್ಲಿ ಯೋಧನ ವೀರಗಲ್ಲು ಸ್ಥಾಪನೆ ಮಾಡಲು ಗ್ರಾಮದ ಹಿರಿಯರು ನಿರ್ಧರಿಸಿದ್ದಾರೆ.

ಈ ವೇಳೆ ಶಾಸಕ ಎನ್.ಎಚ್. ಕೋನರಡ್ಡಿ, ತಹಸೀಲ್ದಾರ್ ಸುಧೀರ್ ಸಾಹುಕಾರ್, ಪುರಸಭೆ ಅಧಿಕಾರಿ ವೆಂಕಟೇಶ್ ನಾಗನೂರ, ತಾಪಂ ಅಧಿಕಾರಿ ಜಾಗೀರದಾರ, ಸಿಪಿಐ ರವಿಕುಮಾರ್ ಕಪ್ಪತ್ತಣ್ಣವರ, ಪಿಎಸ್ಐ ಜನಾರ್ದನ್ ಭಟ್ರಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ, ಮುಖಂಡರಾದ ಜೀವನ್ ಪವಾರ, ನೇತಾಜಿ ಕಲಾಲ, ನಿಂಗಪ್ಪ ಬಾರಕೇರ, ಮಂಜುನಾಥ್ ಶಿವಾನಂದ ಜಾಕೋಜಿ, ಮಾರುತಿ ಕರಾಂಡೆ, ತುಕಾರಾಂ ಜಾಧವ್, ರಾಯನಗೌಡ ಪಾಟೀಲ, ಚೆನ್ನಪ್ಪ ಕುರಿ ಮಾಜಿ ಯೋಧರು, ಎನ್ಎಸ್ಎಸ್, ಸ್ಕೌಟ್ ಮತ್ತು ಗೈಡ್ಸ್, ಆಶಾ ಕಾರ್ಯಕರ್ತೆಯರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.