ಕನ್ನಡಪ್ರಭ ವಾರ್ತೆ ಬೆಳಗಾವಿ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್‌ ಅಧಿಕಾರಿ, ಕರ್ನಾಟಕ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ ಬೀಳಗಿ ಅವರ ಅಂತ್ಯಕ್ರಿಯೆಯನ್ನು ಹುಟ್ಟೂರಾದ ಜಿಲ್ಲೆಯ ರಾಮದುರ್ಗ ಪಟ್ಟಣದ ಹೊರವಲಯದಲ್ಲಿರುವ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ನೆರವೇರಿಸಲಾಯಿತು

ಕನ್ನಡಪ್ರಭ ವಾರ್ತೆ ಬೆಳಗಾವಿ

ಭೀರಕ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿರಿಯ ಐಎಎಸ್‌ ಅಧಿಕಾರಿ, ಕರ್ನಾಟಕ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ ಬೀಳಗಿ ಅವರ ಅಂತ್ಯಕ್ರಿಯೆಯನ್ನು ಹುಟ್ಟೂರಾದ ಜಿಲ್ಲೆಯ ರಾಮದುರ್ಗ ಪಟ್ಟಣದ ಹೊರವಲಯದಲ್ಲಿರುವ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಬುಧವಾರ ನೆರವೇರಿಸಲಾಯಿತು.

ಕುಟುಂಬಸ್ಥರು, ಸಂಬಂಧಿಕರು, ಅಭಿಮಾನಿಗಳ ಆಕ್ರಂದನದ ನಡುವೆಯೇ ಮಹಾಂತೇಶ ಬೀಳಗಿ ಅವರ ಸಹೋದರ ಸಿದ್ರಾಮಪ್ಪ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಜೊತೆಗೆ ಶಂಕರ ಬೀಳಗಿ, ಈರಣ್ಣ ಬೀಳಗಿ ಮತ್ತು ಈರಣ್ಣ ಶಿರಸಂಗಿ ಅವರ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ವೀರಶೈವ ಲಿಂಗಾಯತ ಧರ್ಮದ ವಿಧಿವಿಧಾನಗಳಂತೆ ಅಂತ್ಯಕ್ರಿಯೆ ನೆರವೇರಿದ್ದು, ಮೃತರ ಗೌರವಾರ್ಥ ಪೊಲೀಸ್ ಸಿಬ್ಬಂದಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು. ಅಪಘಾತದಲ್ಲಿ ಮೃತಪಟ್ಟಿದ್ದರಿಂಧ ಅಗ್ನಿಸ್ಪರ್ಶ ಮಾಡಿದ್ದಾಗಿ ವೀರಯ್ಯ ಶಾಸ್ತ್ರಿ ಅವರು ತಿಳಿಸಿದರು.

ಮಂಗಳವಾರ ಸಂಜೆ ಮಹಾಂತೇಶ ಬೀಳಗಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರು, ಸ್ನೇಹಿತರು, ಸ್ಥಳೀಯರು ರಾಮದುರ್ಗದ ಅವರ ಮನೆ ಮುಂದೆ ಜಮಾಯಿಸಿದ್ದರು. ಪಟ್ಟಣದಲ್ಲಿ ನೀರವಮೌನ ಆವರಿಸಿತ್ತಲ್ಲದೇ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳೀಯರು ಅವರನ್ನು ನೆನೆದು ಕಣ್ಣೀರು ಹಾಕಿದರು. ಮಹಾಂತೇಶ ಬೀಳಗಿ ಮತ್ತು ಅವರ ಸಹೋದರರ ಮೃತದೇಹಗಳನ್ನು ಅಂಬ್ಯುಲೆನ್ಸ್‌ ಮೂಲಕ ಪಟ್ಟಣಕ್ಕೆ ತರುತ್ತಿದ್ದಂತೆಯೇ ಅವರ ಕುಟುಂಬಸ್ಥರು, ಸಂಬಂಧಿಕರ ಗೋಳಾಟ ಮಮ್ಮಲ ಮರಗುವಂತಿತ್ತು.

ಬೆಳಗಾವಿ ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ ಮಾತನಾಡಿ, ಕೊನೆಯದಾಗಿ ಅವರ ತಾಯಿ ತೀರಿಕೊಂಡಾಗ ಬಂದು ಮಾತಾಡಿದ್ದೆ. ತಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದರು. ರೊಟ್ಟಿ ಮಾರಿ ತಾಯಿ ನನ್ನನ್ನು ಓದಿಸಿದ್ದರು ಅಂತ ಹೇಳುತ್ತಿದ್ದರು. ಅದೆಲ್ಲವನ್ನೂ ನೋಡಿ ಐಎಎಸ್ ಅಧಿಕಾರಿ ಆಗಬೇಕು ಅಂದುಕೊಂಡು ಬಂದವರು. ಬಡತನವನ್ನು ಮೆಟ್ಟಿ ನಿಲ್ಲಲು ಏಕೈಕ ಮಾರ್ಗವೆಂದರೆ ಓದುವುದು, ಆ ಮೂಲಕ ಉನ್ನತ ಹುದ್ದೆ ಪಡೆಯುವುದು ಎಂಬುದು ಅವರ ನಿಲುವಾಗಿತ್ತು. ಧಾರವಾಡದಲ್ಲಿ ಬಡ ಮಕ್ಕಳಿಗೆ ಅನುಕೂಲವಾಗಲು ಕೋಚಿಂಗ್ ಸೆಂಟರ್ ತೆರೆಯಲು ನಿರ್ಧರಿಸಿದ್ದರು ಎಂದರು.

ಮಹಾಂತೇಶ ಅವರ ಸ್ನೇಹಿತ ಹಿರಿಯ ಐಎಎಸ್ ಅಧಿಕಾರಿ ಶಿವಾನಂದ ಕಾಪಶಿ ಮಾತನಾಡಿ, ಘಟನೆ ನಿಜಕ್ಕೂ ನಂಬಲು ಆಗುತ್ತಿಲ್ಲ. ಸಾವಿನ ಸುದ್ದಿ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅವರಲ್ಲಿದ್ದ ಜೀವನೋತ್ಸಾಹ ಯಾರಲ್ಲಿಯೂ ಕಾಣಲು ಸಾಧ್ಯವಿಲ್ಲ. ಅಪರೂಪದ ವ್ಯಕ್ತಿತ್ವ. ಅಪ್ಪಟ ಬಸವತತ್ವ ನಿಷ್ಠರು, ಉತ್ತಮ ವಾಗ್ಮಿಗಳು, ಯುವಕರಿಗೆ ಸ್ಫೂರ್ತಿದಾಯಕವಾಗಿದ್ದರು. ಕೆಎಎಸ್, ಐಎಎಸ್ ಆಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದರು ಎಂದು ಸ್ಮರಿಸಿದರು.

ಹುಕ್ಕೇರಿ ಶ್ರೀಗಳಿಂದ ಸಂತಾಪ:

ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅಕಾಲಿಕ ನಿಧನಕ್ಕೆ ಬೆಳಗಾವಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ. ಮಹಾಂತೇಶ್ ಬೀಳಗಿ ರಾಮದುರ್ಗ ತಾಲೂಕಿನವರು‌. ಸಣ್ಣ ವಯಸ್ಸಿನಲ್ಲಿ ತಂದೆ ಕಳೆದುಕೊಂಡು ಕಡು ಬಡತನದಲ್ಲಿ ಮನೆಯ ಜವಾಬ್ದಾರಿ ತೆಗೆದುಕೊಂಡು ಕಷ್ಟಪಟ್ಟು ಐಎಎಸ್ ಆಗಿದ್ದರು. ಅಂಥ ದಕ್ಷ ಅಧಿಕಾರಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಆಘಾತ ತಂದಿದೆ. ಮಹಾಂತೇಶ್ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

-----------

ಕೋಟ್‌

ಮಹಾಂತೇಶ ಅವರು ಅತ್ಯಂತ ಉತ್ಸಾಹಿ, ಸರಳ, ಸಜ್ಜನಿಕೆಯ ಆದರ್ಶ ವ್ಯಕ್ತಿತ್ವ, ನಾಯಕತ್ವದ ಗುಣ ಅವರದ್ದಾಗಿತ್ತು. ಈ ರೀತಿ ದುರಂತ ಅಂತ್ಯ ಆಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ಓರ್ವ ನಿಷ್ಠಾವಂತ ಅಧಿಕಾರಿಯನ್ನು ರಾಜ್ಯ ಕಳೆದುಕೊಂಡಿದೆ. ಯಾವುದೇ ಹುದ್ದೆಯನ್ನು ಪರಿಶ್ರಮ ಮತ್ತು ಶ್ರದ್ಧೆಯಿಂದ ನಿರ್ವಹಿಸುವ ಮೂಲಕ‌ ಜನಸ್ನೇಹಿಯಾಗಿದ್ದರು. ಮೂಲವೃತ್ತಿ ಶಿಕ್ಷಕರಾಗಿದ್ದರೂ ಅದನ್ನು ಯಾವತ್ತೂ ಮರೆತಿರಲಿಲ್ಲ. ಸ್ವಂತ ಪರಿಶ್ರಮದಿಂದ ಮೇಲೆ ಬಂದು ಸಮಾಜದಲ್ಲಿ ತಲೆ ಎತ್ತಿ ನಿಲ್ಲಬಹುದು ಎಂಬುದಕ್ಕೆ ಲಕ್ಷಾಂತರ ಯುವಕರಿಗೆ ಮಾದರಿಯಾಗಿದ್ದರು. ನನ್ನ ಬದುಕು ನೋಡಿ ನೀವು ಕಲಿತುಕೊಳ್ಳಿ ಎಂದು ಯುವಕರಿಗೆ ಹೇಳುತ್ತಿದ್ದರು.

ಕೆ.ಎಂ.ಜಾನಕಿ, ಬೆಳಗಾವಿ ಪ್ರಾದೇಶಿಕ ಆಯುಕ್ತೆ

-----------

ಬಾಕ್ಸ್‌

ಗಣ್ಯರ ಅಂತಿಮ ದರ್ಶನ

ಐಎಎಸ್ ಅಧಿಕಾರಿ ಮಹಾಂತೇಶ ಬೀಳಗಿ ಅವರ ಪಾರ್ಥಿವ ಶರೀರದ ಸಾರ್ವಜನಿಕ ಅಂತಿಮ ದರ್ಶನಕ್ಕೆ ರಾಮದುರ್ಗದ ಪಂಚಗಟ್ಟಿಮಠ ಶಾಲಾ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯ ಜನರು ಆಗಮಿಸಿ ಅಂತಿಮ ದರ್ಶನ ಪಡೆದರು. ಈ ವೇಳೆ ಸರ್ಕಾರದ ಮುಖ್ಯಚೇತಕ ಅಶೋಕ ಪಟ್ಟಣ, ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌, ಐಜಿಪಿ ಚೇತನಸಿಂಗ್ ರಾಠೋಡ, ಪ್ರಾದೇಶಿಕ ಆಯುಕ್ತೆ ಕೆ.ಎಂ.ಜಾನಕಿ, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್ಪಿ ಡಾ.ಭೀಮಾಶಂಕರ ಗುಳೇದ, ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಹೆಸ್ಕಾಂ ಎಂ.ಎಂಡಿ ವೈಶಾಲಿ, ಬೈಲಹೊಂಗಲ ಎಸಿ ಪ್ರವೀಣ ಜೈನ್, ತೊರಗಲ್‌ದ ಚನ್ನಮಲ್ಲಶಿವಾಚಾರ್ಯರು, ಮುಳ್ಳೂರಿನ ಚಂದ್ರಶೇಖರ ಶಿವಾಚಾರ್ಯರು, ರಾಮದುರ್ಗದ ಶಾಂತವೀರ ಮಹಾಸ್ವಾಮಿಗಳು ಸೇರಿ ಸ್ಥಳೀಯ ಗಣ್ಯರು ಬೀಳಗಿ ಅವರಿಗೆ ನಮನ ಸಲ್ಲಿಸಿದರು. ಬಳಿಕ, ಮಹಾಂತೇಶ ಅವರ ಪತ್ನಿ ರೇಖಾ ಮತ್ತು ಪುತ್ರಿ ಚೈತನ್ಯಾ ಅವರಿಗೆ ಧೈರ್ಯ ತುಂಬಿದರು.