ವಿಧಿವಿಧಾನಗಳೊಂದಿಗೆ ಸಮಾಧಿಸೇನ ಮಹಾರಾಜರ ಅಂತ್ಯಕ್ರಿಯೆ

| Published : May 22 2024, 12:49 AM IST

ವಿಧಿವಿಧಾನಗಳೊಂದಿಗೆ ಸಮಾಧಿಸೇನ ಮಹಾರಾಜರ ಅಂತ್ಯಕ್ರಿಯೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಮೂರ್ನಾಲ್ಕು ದಿನಗಳಿಂದ ಯಮ ಸಲ್ಲೇಖನ ವೃತ ಕೈಗೊಂಡಿದ್ದ ಪ.ಪೂ 108 ಶ್ರೀ ಸಮಾಧಿ ಸೇನ ಮುನಿ ಮಹಾರಾಜರು (79) ಸೋಮವಾರ ರಾತ್ರಿ ಜಿನೈಕ್ಯರಾದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಕಳೆದ ಮೂರ್ನಾಲ್ಕು ದಿನಗಳಿಂದ ಯಮ ಸಲ್ಲೇಖನ ವೃತ ಕೈಗೊಂಡಿದ್ದ ಪ.ಪೂ 108 ಶ್ರೀ ಸಮಾಧಿ ಸೇನ ಮುನಿ ಮಹಾರಾಜರು (79) ಸೋಮವಾರ ರಾತ್ರಿ ಜಿನೈಕ್ಯರಾದರು.

ಭಾರತ ಗೌರವ ಆಚಾರ್ಯ ಶ್ರೀ 108 ದೇಶಭೂಷಣ ಮುನಿ ಮಹಾರಾಜರ ಆಶ್ರಮದಲ್ಲಿ ಶ್ರೀ ಸಮಾಧಿಸೇನ ಮುನಿಮಹಾರಾಜರ ಅಂತ್ಯಕ್ರಿಯೆ ಮಂಗಳವಾರ ಬೆಳಗ್ಗೆ 9.30 ರ ಸುಮಾರಿಗೆ ಸಕಲ ವಿಧಿವಿಧಾನಗಳ ಮೂಲಕ ನೆರವೇರಿತು. ಈ ಸಂದರ್ಭದಲ್ಲಿ ಸಮಸ್ತ ಜೈನ ಸಮಾಜದ ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು.ಯಮ ಸಲ್ಲೇಖನ ವೃತ ಕೈಗೊಂಡಿದ್ದ ಮಹಾರಾಜರು:

ಚಿಕ್ಕೋಡಿ ತಾಲ್ಲೂಕಿನ ಕೋಥಳಿಯ ದೇಶಭೂಷಣ ಮುನಿಗಳ ಜೈನ ಆಶ್ರಮದಲ್ಲಿ ಸಮಾಧಿ ಸೇನ ಮುನಿಗಳು (79) ಮೇ 17ರಿಂದ ನಾಲ್ಕು ಪ್ರಕಾರದ ಆಹಾರ (ಲೇಹ, ಪೇಯ, ಸ್ವಾದ್ಯ ಮತ್ತು ಖಾದ್ಯ) ತ್ಯಾಗ ಮಾಡಿ, ಯಮ ಸಲ್ಲೇಖನ ವ್ರತ ಕೈಗೊಂಡಿದ್ದರು.ಗದಗ ಜಿಲ್ಲೆಯ ಗಜೇಂದ್ರಗಡದವರಾದ ಸಮಾಧಿ ಸೇನ ಮುನಿಗಳು ಗುಲಾಬ ಭೂಷಣ ಮುನಿಗಳ ಶಿಷ್ಯರಾಗಿದ್ದರು. ಸಂಸಾರಿಯಾಗಿದ್ದ ಮುನಿಗಳು, 2004ರಲ್ಲಿ ಮನೆ ತೊರೆದು ತ್ಯಾಗಿಯಾಗಿ ದೀಕ್ಷೆ ಪಡೆದು ಜೈನ ಧರ್ಮದ ಪ್ರಸಾರ ಕಾರ್ಯದಲ್ಲಿ ತೊಡಗಿದ್ದರು. 2014ರಲ್ಲಿ ಮಹಾರಾಷ್ಟ್ರದ ಚಿಪರಿ ಆಶ್ರಮದ ಧರ್ಮಸೇನ ಮುನಿಗಳಿಂದ ಕ್ಷುಲ್ಲಕ ದೀಕ್ಷೆ ಪಡೆದು, 2021ರಲ್ಲಿ ಗುಲಾಬ ಸೇನ ಮುನಿಗಳಿಂದ ಮುನಿದೀಕ್ಷೆ ಪಡೆದುಕೊಂಡಿದ್ದರು.ಸಲ್ಲೇಖನ ವೃತ ಕೈಗೊಂಡ ಬಳಿಕ ಜಿಲ್ಲೆಯ ಸಮಾಜದ ಶ್ರಾವಕ, ಶ್ರಾವಕಿಯರು ದರ್ಶನ ಪಡೆದುಕೊಂಡಿದ್ದರು. ಕೋಥಳಿಯ ಆಶ್ರಮದಲ್ಲಿ ದೇಶಭೂಷಣ ಮುನಿಗಳು ಸೇರಿದಂತೆ 40ಕ್ಕೂ ಅಧಿಕ ಜೈನ ಮುನಿಗಳು ಈವರೆಗೆ ಯಮ ಸಲ್ಲೇಖನ ವ್ರತ ಕೈಗೊಂಡು ದೇಹತ್ಯಾಗ ಮಾಡಿದ್ದಾರೆ. ಹಾಗಾಗಿ ಇಡೀ ದೇಶದಲ್ಲೇ ಈ ಆಶ್ರಮ ಖ್ಯಾತಿ ಗಳಿಸಿದೆ.