ಕನ್ನಡಪ್ರಭ ವಾರ್ತೆ ಯಮಕನಮರಡಿ

ತಮಿಳುನಾಡಿನ ಊಟಿಯಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಹುಕ್ಕೇರಿ ತಾಲೂಕಿನ ಜಿನರಾಳ ಗ್ರಾಮದ ಯೋಧ ಪ್ರದೀಪ ಲಖಮಗೌಡ ಪಾಟೀಲ(35) ಚಿಕಿತ್ಸೆ ಫಲಿಸದೆ ಏ.15 ರಂದು ನಿಧನರಾದರು. ಅವರ ಪಾರ್ಥಿವ ಶರೀರ ಗುರುವಾರ ಸ್ವಗ್ರಾಮ ಜಿನರಾಳಕ್ಕೆ ಆಗಮಿಸಿತ್ತು. ಸಕಲ ಸರಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ನಡೆಸಲಾಯಿತು.ಊಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರದೀಪ ಏ.12ರಂದು ಬೈಕ್‌ನಲ್ಲಿ ಕರ್ತವ್ಯಕ್ಕೆ ಹೊರಟಿದ್ದಾಗ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದರು. ಬಳಿಕ ಮಿಲಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಯೋಧ ಪ್ರದೀಪ ನಿಧನರಾದರು. ಪಾರ್ಥಿವ ಶರೀರವನ್ನು ಹಿಡಕಲ್ ಡ್ಯಾಂ ಕ್ರಾಸ್ ವರೆಗೆ ತರಲಾಗಿತ್ತು ಅಲಿಂದ ತೆರೆದ ವಾಹನದಲ್ಲಿ ಬೈಕ್ ರ್‍ಯಾಲಿ ಮೂಲಕ ಗ್ರಾಮಕ್ಕೆ ಕರೆತಂದರು. ಬಳಿಕ, ಗ್ರಾಮದಲ್ಲಿ ಮೆರವಣಿಗೆ ನಡೆಸಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.ಜಿನರಾಳ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಅಂತಿಮ ದರ್ಶನಕ್ಕಾಗಿ ಪಾಥೀವ ಶರೀರ ಇರಿಸಲಾಗಿತ್ತು. ಈ ವೇಳೆ ಗ್ರಾಮಸ್ಥರು, ಸಂಬಂಧಿಕರು ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ತಂದೆ ಲಖಮಗೌಡ ಪಾಟೀಲ ಹಾಗೂ ತಾಯಿ ಸರೀಜನಿ ಪಾಟೀಲ, ಪ್ರದೀಪ ಪತ್ನಿ ನಾಗರತ್ನ, ಮಕ್ಕಳಾದ ಆಕೃತಿ ಮತ್ತು ಅಪೇಕ್ಷಾ ಇದ್ದರು.ಈ ಸಂದರ್ಭದಲ್ಲಿ ಹುಕ್ಕೇರಿ ತಹಸೀಲ್ದಾರ್‌ ಬಲರಾಮ ಕಟ್ಟಿಮನಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ, ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ, ಬಸವರಾಜ ಹುಂದ್ರಿ, ಹಾಗೂ ಪೊಲೀಸ್‌ ಅಧಿಕಾರಿಗಳು ಉಪಸ್ಥಿತರಿದ್ದರು.