ಸಾರಾಂಶ
ಸರ್ಕಾರಿ ಗೌರವದೊಂದಿಗೆ ಮೇಟಿ ಅಂತ್ಯಕ್ರಿಯೆ ನಡೆಯಿತು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ವೈ.ಮೇಟಿ ಅವರ ಅಂತ್ಯಕ್ರಿಯೆ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ನೆರವೇರಿಸಲಾಯಿತು.ಬುಧವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದ ಮೇಟಿಯವರ ಪಾರ್ಥಿವ ಶರೀರ ಬೆಳಗ್ಗೆ 9ಕ್ಕೆ ತೆರೆದ ವಾಹನದಲ್ಲಿ ನವನಗರದ ಜಿಲ್ಲಾ ಕ್ರೀಡಾಂಗಣಕ್ಕೆ ತರಲಾಯಿತು. ಮಾರ್ಗ ಮಧ್ಯದಲ್ಲಿ ಅಪಾರ ಪ್ರಮಾಣದ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು. ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕರು, ಅಧಿಕಾರಿಗಳು ಹಾಗೂ ಗಣ್ಯಮಾನ್ಯರು ಅಂತಿಮ ದರ್ಶನ ಪಡೆದುಕೊಂಡರು.
ನಂತರ ಜಿಲ್ಲಾ ಕ್ರೀಡಾಂಗಣದಿಂದ ಹೊರಟ ಮೇಟಿಯವರ ಪಾರ್ಥಿವ ಶರೀರದ ಮೆರವಣಿಗೆ ನಗರದ ನಾನಾ ಕಡೆಗಳಲ್ಲಿ ಸಂಚರಿಸಿ, ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮ ತಿಮ್ಮಾಪೂರದಲ್ಲಿರುವ ಅವರ ಮನೆಗೆ ತಲುಪಿತು. ಮನೆಯಲ್ಲಿ ಕುಟುಂಬಸ್ಥರಿಗೆ ಹಾಗೂ ಬಂಧುಗಳಿಗೆ ಅಂತಿಮ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಗ್ರಾಮದಲ್ಲಿರುವ ಅವರ ಜಮೀನಿನಲ್ಲಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದ್ದು, ಅವರ ಜಮೀನಿಗೆ ಪಾರ್ಥಿವ ಶರೀರ ತರಲಾಯಿತು.ತಿಮ್ಮಾಪೂರ ಗ್ರಾಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಚ್.ವೈ.ಮೇಟಿಯವರ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಇರಿಸಿ ನಮನ ಸಲ್ಲಿಸಿದರು. ಪೊಲೀಸರು ಮೂರು ಸುತ್ತು ತೋಪು ಸಿಡಿಸಿ, ಗೌರವ ಸಲ್ಲಿಸಿದರು.
ಸಚಿವರಾದ ಶಿವಾನಂದ ಪಾಟೀಲ, ಡಾ। ಎಂ.ಬಿ.ಪಾಟೀಲ, ಬೈರತಿ ಸುರೇಶ, ಎಂ.ಸಿ.ಮಹಾದೇವಪ್ಪ, ಸತೀಶ ಜಾರಕಿಹೊಳಿ, ಆರ್.ಬಿ.ತಿಮ್ಮಾಪೂರ, ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಯಮಿತದ ಅಧ್ಯಕ್ಷ ಜೆ.ಟಿ.ಪಾಟೀಲ ಇತರರು ನಮನ ಸಲ್ಲಿಸಿದರು.;Resize=(128,128))
;Resize=(128,128))