ಆಸ್ತಿ ತೆರಿಗೆ ಬಾಕಿದಾರರ ಪಟ್ಟಿಬಿಡುಗಡೆ ಮತ್ತಷ್ಟು ವಿಳಂಬ?

| Published : Feb 11 2024, 01:51 AM IST

ಸಾರಾಂಶ

ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಕಟ್ಟದವರ ಪಟ್ಟಿ ಬಿಡುಗಡೆ ಮತ್ತಷ್ಟು ವಿಳಂಬ ಆಗುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಸ್ತಿ ತೆರಿಗೆ ಪಾವತಿ ಮಾಡದ ಆಸ್ತಿ ಮಾಲೀಕರ ಪಟ್ಟಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲು ಬಿಬಿಎಂಪಿ ಮುಂದಾಗಿದ್ದರೂ ವಲಯ ಮಟ್ಟದ ಅಧಿಕಾರಿಗಳು ಮಾಹಿತಿ ನೀಡದೇ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದರಿಂದ ಸೋಮವಾರದೊಳಗೆ ಪಟ್ಟಿ ನೀಡುವಂತೆ ಸೂಚಿಸಲಾಗಿದೆ.

₹4 ಸಾವಿರ ಕೋಟಿಗೂ ಅಧಿಕ ಆಸ್ತಿ ತೆರಿಗೆ ವಸೂಲಿ ಮಾಡುವ ಗುರಿಯನ್ನು ಬಿಬಿಎಂಪಿ ಹಾಕಿಕೊಂಡಿದೆ. ಆರ್ಥಿಕ ವರ್ಷ ಮುಕ್ತಾಯಕ್ಕೆ ಸುಮಾರು 50 ದಿನ ಮಾತ್ರ ಬಾಕಿ ಇರುವುದರಿಂದ ತೆರಿಗೆ ವಸೂಲಿ ಕಾರ್ಯವನ್ನು ಬಿಬಿಎಂಪಿ ಕಂದಾಯ ವಿಭಾಗವನ್ನು ಇನ್ನಷ್ಟು ಚುರುಕುಗೊಳಿಸಿದೆ ಈ ನಿಟ್ಟಿನಲ್ಲಿ ಬಿಬಿಎಂಪಿಯ ಎಂಟು ವಲಯದ ಜಂಟಿ ಆಯುಕ್ತರಿಗೆ ಹಾಗೂ ಕಂದಾಯ ವಿಭಾಗದ ಉಪ ಆಯುಕ್ತರಿಗೆ ತಮ್ಮ ತಮ್ಮ ವಲಯದ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮೊದಲ 50 ಸುಸ್ತಿದಾರರ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ.

ಪಟ್ಟಿ ನೀಡಲು ಕಳೆದ ಗುರುವಾರವೇ ಗಡುವು ನಿಗದಿ ಪಡಿಸಲಾಗಿತ್ತು. ಆದರೆ, ಸಿದ್ಧಪಡಿಸಿಕೊಂಡ ಸುಸ್ತಿದಾರರ ಪಟ್ಟಿಯಲ್ಲಿನ ಅನೇಕರು ಈಗಾಗಲೇ ಆಸ್ತಿ ತೆರಿಗೆ ಪಾವತಿ ಮಾಡಿದ್ದಾರೆ. ಹೀಗಾಗಿ, ಪಾವತಿ ಮಾಡಿದವರ ಹೆಸರನ್ನು ಕೈಬಿಟ್ಟು ಹೊಸದಾಗಿ ಪಟ್ಟಿ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಹಾಗಾಗಿ, ಪಟ್ಟಿ ನೀಡಲು ತಡವಾಗುತ್ತಿದೆ ಎಂದು ವಲಯ ಅಧಿಕಾರಿಗಳು ತಿಳಿಸಿದ್ದಾರೆ.ಇಂದು ಗಡುವು

ಎಲ್ಲ ವಲಯದ ಅಧಿಕಾರಿಗಳೊಂದಿಗೆ ಕಂದಾಯ ವಿಭಾಗದ ಅಧಿಕಾರಿಗಳು ಸಭೆ ನಡೆಸಿ ಸೋಮವಾರ ಸಂಜೆ ಒಳಗಾಗಿ 50 ಮಂದಿ ಸುಸ್ತಿದಾರರ ಪಟ್ಟಿ ನೀಡಲು ಸೂಚಿಸಿದ್ದಾರೆ. ಇಲ್ಲವಾದರೆ, ಶಿಸ್ತು ಕ್ರಮ ಕೈಗೊಳ್ಳುವುದಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.