ಜಿ-20 ಶೃಂಗಸಭೆ ತಂದ ಖುಷಿ!

| Published : Jan 01 2024, 01:15 AM IST

ಸಾರಾಂಶ

2023ರಲ್ಲಿ ಅತ್ಯುತ್ತಮವಾಗಿ ಕಾರ್ಯಕ್ರಮ ಸಂಘಟನೆಗೆ ಸಹಕರಿಸಿದ ಜಿಲ್ಲಾಡಳಿತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಶಂಸೆಗೆ ಪಾತ್ರವಾಯಿತು.

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಜಿ- 20 ರಾಷ್ಟ್ರಗಳ ಶೃಂಗಸಭೆಗೆ ಸಾಕ್ಷಿಯಾದ 2023ರ ವರ್ಷ ವಿಜಯನಗರ ಜಿಲ್ಲೆಯ ಇತಿಹಾಸದಲ್ಲಿ ಮತ್ತೊಂದು ಅಧ್ಯಾಯ ತೆರೆದಿದೆ.

ನವದೆಹಲಿಯಲ್ಲಿ ಸೆಪ್ಟೆಂಬರ್‌ನಲ್ಲಿ ನಡೆದ ಜಿ- 20 ಶೃಂಗಸಭೆಯಲ್ಲಿ ಮಾಡಲಾದ ಒಪ್ಪಂದದ ಕೆಲವು ಗಟ್ಟಿ ಬೇರುಗಳು ಹಂಪಿಯಲ್ಲಿದ್ದವು ಎಂಬುದು ನಮ್ಮ ನಾಡಿಗೆ ಹೆಮ್ಮೆ ತರಿಸುವ ಸಂಗತಿ. 2023ರಲ್ಲಿ ಅತ್ಯುತ್ತಮವಾಗಿ ಕಾರ್ಯಕ್ರಮ ಸಂಘಟನೆಗೆ ಸಹಕರಿಸಿದ ಜಿಲ್ಲಾಡಳಿತ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಶಂಸೆಗೆ ಪಾತ್ರವಾಯಿತು.

ಬರಪೀಡಿತ ಜಿಲ್ಲೆ: ಈ ಬಾರಿ ಮಳೆ ಕೊರತೆ ಜಿಲ್ಲೆಯ ಜನರನ್ನು ಅದರಲ್ಲೂ ಮುಖ್ಯವಾಗಿ ರೈತ ಸಮುದಾಯವನ್ನು ಬಹುವಾಗಿ ಕಾಡಿತು. ತುಂಗಭದ್ರಾ ಜಲಾಶಯ ಭರ್ತಿಯಾಗಲೇ ಇಲ್ಲ. ಜಿಲ್ಲೆಯ ಅರೂ ತಾಲೂಕುಗಳು ಬರಪೀಡಿತ ಎಂದು ಘೋಷಣೆಯಾಯಿತು. ಜಿಲ್ಲೆಯ 2.69 ಲಕ್ಷ ಹೆಕ್ಟೇರ್ ಕೃಷಿ ಭೂಮಿಯಲ್ಲಿ ಬೆಳೆ ಹಾನಿ ಉಂಟಾಗಿ, ₹1,370 ಕೋಟಿ ನಷ್ಟ ರೈತರಿಗೆ ಆಗಿರುವುದನ್ನು ಅಂದಾಜಿಸಲಾಯಿತು. ಬರ ಪರಿಹಾರ ರೂಪದಲ್ಲಿ ವರ್ಷಾಂತ್ಯದ ವೇಳೆಗೆ ನಯಾಪೈಸೆ ಸಿಗದೆ ಇರುವುದೂ ಕಟು ವಾಸ್ತವ.

ಹೊಸಪೇಟೆ ನಗರದೊಳಗೆ ಸಕ್ಕರೆ ಕಾರ್ಖಾನೆ ಸ್ಥಾಪಿಸುವ ವಿಚಾರ ರಾಜಕೀಯ ಪ್ರತಿಷ್ಠೆಯಾದುದು ಈ ವರ್ಷದ ದೊಡ್ಡ ವಿದ್ಯಮಾನಗಳಲ್ಲಿ ಒಂದು. ಬಿಜೆಪಿ ಅಧಿಕಾರದಲ್ಲಿದ್ದಾಗ ಮಂಜೂರು ಮಾಡಿಸಿದ ಸರ್ಕಾರಿ ಜಮೀನನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರದ್ದುಗೊಳಿಸಿದ್ದು, ಬದಲಿ ಜಾಗದಲ್ಲಿ ಸಕ್ಕರೆ ಕಾರ್ಖಾನೆಗೆ ಜಾಗ ಹುಡುಕಿದ್ದು, ಕೊನೆಗೆ ತಾವೇ ಸಕ್ಕರೆ ಕಾರ್ಖಾನೆ ಸ್ಥಾಪಿಸುವುದಾಗಿ ಶಾಸಕ ಎಚ್.ಆರ್. ಗವಿಯಪ್ಪ ಹೇಳಿದ್ದಾರೆ.

ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಇಟ್ಟು 50 ವರ್ಷ ಸಂದ ಹಿನ್ನೆಲೆ ವರ್ಷಪೂರ್ತಿ ನಡೆಯುವ ‘ಕರ್ನಾಟಕ 50ರ ಸಂಭ್ರಮ’ ಅಭಿಯಾನಕ್ಕೆ ಹಂಪಿಯಿಂದಲೇ ಚಾಲನೆ ನೀಡಿದ್ದು ದೇವರಾಜ ಅರಸು ಅವರ ಕಾಲದ ಸನ್ನಿವೇಶವನ್ನು ಮತ್ತೆ ನೆನಪಿಗೆ ತರುವಂತೆ ಮಾಡಿತು. ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಡಿನ ಹೆಮ್ಮೆಗಳಲ್ಲಿ ಒಂದಾಗಿದ್ದರೂ, ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಅದನ್ನು ಪಾರು ಮಾಡುವ ಪ್ರಯತ್ನ ಇಡೀ ವರ್ಷದಲ್ಲಿ ನಡೆಯಲಿಲ್ಲ.

ಭಾರಿ ಅಪಘಾತಗಳು: ಹೊಸಪೇಟೆ ನಗರದ ಹೊರವಲಯದ ವಡ್ಡರಹಳ್ಳಿ ರೈಲ್ವೆ ಸೇತುವೆ ಬಳಿ ಹೊಸಪೇಟೆ– ಬಳ್ಳಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೂ. 30ರಂದು ಟ್ರಕ್ಕೊಂದು ಎರಡು ಆಟೋಗಳಿಗೆ ಡಿಕ್ಕಿ ಹೊಡೆದ ದುರಂತದಲ್ಲಿ ಬಳ್ಳಾರಿಯ ಒಂದೇ ಕುಟುಂಬದ ಐವರ ಸಹಿತ ಒಂಬತ್ತು ಮಂದಿ ಮೃತಪಟ್ಟಿದ್ದರು. ಹೊಸಪೇಟೆ ಸಮೀಪದ ವ್ಯಾಸನಕೆರೆ ರೈಲು ನಿಲ್ದಾಣದ ಬಳಿ ಹೆದ್ದಾರಿಯಲ್ಲಿ ಅ. 9ರಂದು ರಸ್ತೆ ವಿಭಜಕ ದಾಟಿ ಬಂದ ಟಿಪ್ಪರ್ ಒಂದು ಕಾರು ಮತ್ತು ಇನ್ನೊಂದು ಟ್ರಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಕಾರಿನಲ್ಲಿದ್ದ ಒಂದೇ ಕುಟುಂಬದ 7 ಮಂದಿ ಮೃತಪಟ್ಟಿದ್ದು ವರ್ಷದ ಎರಡು ದೊಡ್ಡ ರಸ್ತೆ ಅಪಘಾತಗಳು. ಈ ಎರಡೂ ಅಪಘಾತಗಳಲ್ಲಿ ಇನ್ನೊಂದು ದೊಡ್ಡ ವಾಹನದಿಂದ ಆದ ಆಚಾತುರ್ಯದಿಂದ ಸಣ್ಣ ವಾಹನಗಳ ಚಾಲಕ ಸಹಿತ ಅಮಾಯಕರು ಉಸಿರು ಚೆಲ್ಲುವಂತಾಯಿತು.