ಸಾರಾಂಶ
ಕನ್ನಡಪ್ರಭ ವಾರ್ತೆ ಟಿ. ನರಸೀಪುರಗ್ರಾಮೀಣ ಪ್ರದೇಶಗಳಲ್ಲಿನ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸರ್ಕಾರಿ ವೈದ್ಯಕೀಯ ಸೇವೆಯನ್ನು ನೀಡುತ್ತಿರುವ 100 ಹಾಸಿಗೆಯುಳ್ಳ ಟಿ. ನರಸೀಪುರ ಸಾರ್ವಜನಿಕ ಆಸ್ಪತ್ರೆಯನ್ನು 200 ಹಾಸಿಗೆಯ ಅಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು ಎಂದು ಬೆಳಕು ಸೇವಾ ಫೌಂಡೇಶನ್ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಜಿ. ಅರವಿಂದ ಒತ್ತಾಯಿಸಿದ್ದಾರೆ.ಪಟ್ಟಣದ ಶ್ರೀ ಗುಂಜಾ ನರಸಿಂಹಸ್ವಾಮಿ ದೇವಾಲಯದ ಬಳಿ ಸಂಸ್ಥೆಯ ರಕ್ಷಕ್ ಯೋಜನೆಯಡಿ ದೇವಾಲಯದ ಪ್ರವೇಶ ದ್ವಾರಗಳಿಗೆ ಸುರಕ್ಷಿತ ಕನ್ನಡಿ ಅಳವಡಿಕೆ ಮತ್ತು ನದಿಯಲ್ಲಿ ತೆಪ್ಪ ನಡೆಸುವ ಕಾರ್ಮಿಕರಿಗೆ ಲೈಫ್ ಜಾಕೆಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು ಮತ್ತು ವೈದ್ಯಕೀಯ ಕಾಲೇಜು ನಿರ್ಮಿಸುವುದರಿಂದ ಸುತ್ತಮುತ್ತಲಿನ ರೋಗಿಗಳು, ವೈದ್ಯಕೀಯ ಕ್ಷೇತ್ರದ ಆಕಾಂಕ್ಷಿ ವಿದ್ಯಾರ್ಥಿಗಳು ಮತ್ತು ವ್ಯಾಪಾರ ಕ್ಷೇತ್ರಗಳಿಗೆ ಅನುಕೂಲವಾಗಲಿದೆ ಎಂದರು. ಸುರಕ್ಷಿತ ಕನ್ನಡಿಗಳನ್ನು ಅನಾವರಣಗೊಳಿಸಿದ ತಹಸೀಲ್ದಾರ್ ಟಿ.ಜಿ. ಸುರೇಶ್ಆಚಾರ್ ಮಾತನಾಡಿ, ಸರ್ಕಾರೇತರ ಸಂಸ್ಥೆಯ ರಕ್ಷಕ್ ಎಂಬ ಯೋಜನೆ ಚಾಲನೆಗೆ ತಂದಿದೆ. ನುರಿತ ಈಜುಗಾರರನ್ನು ಒಳಗೊಂಡ ಈ ಯೋಜನೆಯು ಕಪಿಲ ನದಿ ದಡದಲ್ಲಿ ಆಕಸ್ಮಿಕವಾಗಿ ಸಂಭವಿಸಬಹುದಾದ ಅವಘಡಗಳಿಗೆ ದೋಣಿ ಬಳಸಿ ಕ್ಷಿಪ್ರ ಕಾರ್ಯಾಚರಣೆ ಮೂಲಕ ರಕ್ಷಿಸುವ ಉತ್ತಮ ಯೋಜನೆಯಾಗಿದ್ದು, ನದಿಯಲ್ಲಿ ಶವ ಎತ್ತುವ ಕಾರ್ಯಕ್ಕೂ ಸಹಕಾರಿಯಾಗಿದೆ ಎಂದು ತಿಳಿಸಿದರು.ಅನಾಥ ಶವಗಳ ಮುಕ್ತಿದಾತ ಮಾದೇಶ್ ಮಾತನಾಡಿ, ಕೆಲವೊಮ್ಮೆ ನದಿಯಲ್ಲಿ ಮುಳುಗುತ್ತಿರುವ ವ್ಯಕ್ತಿಗಳನ್ನು ಉಳಿಸಲು ಹೋಗಿ ಜೀವ ರಕ್ಷಕರೇ ಅಪಾಯಕ್ಕೆ ಸಿಲುಕುತ್ತಾರೆ. ಈ ರೀತಿಯ ಅವಘಡಗಳು ಸಂಭವಿಸಬಾರದೆಂಬ ದೂರದೃಷ್ಟಿಯಿಂದ ಉಚಿತವಾಗಿ ತೆಪ್ಪ ಚಲಾಯಿಸುವವರಿಗೆ ಜೀವರಕ್ಷಕ ಸಾಧನ ನೀಡಲಾಗಿದೆ ಎಂದರು.ಸಂಸ್ಥೆಯ ಕಾರ್ಯದರ್ಶಿ ರವೀಂದ್ರ ಮಾತನಾಡಿದರು. ಅನಾಥ ಶವಗಳ ಮುಕ್ತಿದಾತ ಮಾದೇಶ್, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಜಿ. ಅರವಿಂದ, ಉಪಾಧ್ಯಕ್ಷ ಆಲಗೂಡು ಹರೀಶ್, ಕಾರ್ಯದರ್ಶಿ ರವೀಂದ್ರ, ಸಂಚಾಲಕ ತುಂಬಲ ಸಿದ್ದರಾಮು, ಖಜಾಂಚಿ ಮಹೇಶ್, ಕಾನೂನು ಕಾರ್ಯದರ್ಶಿ ರವಿಶಂಕರ್, ನಿರ್ದೇಶಕರಾದ ಕೃಷ್ಣಕುಮಾರ್, ನವೀನ್, ಆನಂದ್, ಮಾದೇಶ್, ಗಿರೀಶ್, ಮಾಸ್ಟರ್ ರಘುನಂದನ್, ಸದಸ್ಯರಾದ ಭೈರವ ಸ್ಟಿಕರ್ಸ್ ಬಸವರಾಜು, ಜಗದೀಶ, ಮೋಹನ್, ವಿಕಾಸ್, ನುರಿತ ಈಜುಗಾರ ರವಿಕುಮಾರ್, ಆಕಾಶ್, ಶಶಿಕುಮಾರ್, ಮಂಜು, ರಂಗಸ್ವಾಮಿ, ಮಹೇಶ್, ಅವಿನಾಶ್, ಪ್ರಕಾಶ್ ಕುಮಾರ್, ಕುಮಾರ್, ಕೆ. ಶ್ರೀನಿವಾಸ್ ಮೊದಲಾದವರು ಇದ್ದರು.