ಜಿ.ಕುಮಾರ ನಾಯಕ ಕೈ ಪಟ್ಟಿ ಸೇರಿದ್ರೂ ನಿಂತಿಲ್ಲ ಪೈಪೋಟಿ

| Published : Feb 07 2024, 01:45 AM IST

ಜಿ.ಕುಮಾರ ನಾಯಕ ಕೈ ಪಟ್ಟಿ ಸೇರಿದ್ರೂ ನಿಂತಿಲ್ಲ ಪೈಪೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ತಯಾರಿಸಿದ ಪಟ್ಟಿಯಲ್ಲಿ ಜಿ.ಕುಮಾರ ನಾಯಕ ಹೆಸರು ಇರುವುದು ವಿಶೇಷ. ಪಕ್ಷದಲ್ಲಿನ ಆಕಾಂಕ್ಷಿಗಳು, ಹಿರಿಯರಿಂದ ಟಿಕೆಟ್‌ಗಾಗಿ ತೆರೆಮರೆಯಲ್ಲಿ ನಿಲ್ಲದ ಕಸರತ್ತು.

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್‌ ಸಿದ್ಧಪಡಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರ ನಾಯಕ ಅವರ ಒಂದೇ ಹೆಸರು ಶಿಫಾರಸ್ಸಾಗಿರುವುದು ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಯಚೂರು ಕಾಂಗ್ರೆಸ್‌ ಭದ್ರಕೋಟೆಯಾಗಿದ್ದು ಇಂತಹ ಕ್ಷೇತ್ರದಲ್ಲಿ ಅನುಭವಿ, ಹಿರಿತನಕ್ಕೆ ಹೆಚ್ಚಿನ ಆದ್ಯತೆ ನೀಡುವ ಕಾಂಗ್ರೆಸ್‌ ಈಗ ಹೊಸಬರಿಗೆ ಅವಕಾಶ ನೀಡಿರುವುದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ. ಪಟ್ಟಿಯಲ್ಲಿ ಬಂದಿರುವ ಹೆಸರೇ ಅಂತಿಮವಲ್ಲ ಎನ್ನುವ ಆಶಾಭಾವನೆಯೊಂದಿಗೆ ಕೆಲವು ಆಕಾಂಕ್ಷಿಗಳು ತಮ್ಮದೆಯಾದ ರೀತಿಯಲ್ಲಿ ಟಿಕೆಟ್‌ ಫೈಟ್ ಮುಂದುವರಿಸಿದ್ದಾರೆ.

ನಿಲ್ಲದ ಪೈಪೋಟಿ: ಈ ಹಿಂದೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸಂಸದರಾಗಿದ್ದ ಬಿ.ವಿ.ನಾಯಕ ಅವರು ಬಿಜೆಪಿ ಸೇರಿ ವಿಧಾನಸಭಾ ಚುನಾವಣೆಯಲ್ಲಿ ಮಾನ್ವಿ ಕ್ಷೇತ್ರದಿಂದ ನಿಂತು ಸೋತಿದ್ದಾರೆ. ಇದೀಗ ಬಿಜೆಪಿಯಿಂದ ಲೋಕಸಭೆಗೆ ಸ್ಪರ್ಧಿಸಲು ಪ್ರಯತ್ನ ನಡೆಸಿದ್ದರಿಂದ ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ಹೆಚ್ಚಿದೆ. ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರ ನಾಯಕ, ಜಾರಕಿಹೊಳಿ ಕುಟುಂಬದ ಆಪ್ತರಾಗಿರುವ ರವಿ ಪಾಟೀಲ್‌, ಹಿರಿಯ ಮುಖಂಡ ದೇವಣ್ಣ ನಾಯಕ, ಸುರಪುರದ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತು ಅವರ ಸಹೋದರನ ಪುತ್ರ ರಾಜಾ ಕುಮಾರ ನಾಯಕ ಅವರು ಟಿಕೆಟ್‌ ಪೈಪೋಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರ ಜೊತೆಗೆ ಈ ಹಿಂದೆ ಬೆಂಗಳೂರಿನಲ್ಲಿ ಬಿಡಿಎ ಆಯುಕ್ತರಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಅನಿಲ್‌ ಕುಮಾರ್‌ ಅವರು ಸಹ ಇದೇ ಕ್ಷೇತ್ರ ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸಿದ್ದಾರೆ.

ಕಾಣದ ಕೈ ಅಭಯ: ಗ್ಯಾರಂಟಿಗಳಿಂದ ಮನೆ ಮಾತಾಗಿರುವ ಕಾಂಗ್ರೆಸ್ ಮುಂದಿನ ಲೋಕಚಭಾ ಚುನಾವಣೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆನ್ನುವ ಕಾರಣಕ್ಕಾಗಿ ಆಯ್ದ ಹಾಗೂ ಅಗತ್ಯವಿರುವ ಕ್ಷೇತ್ರಗಳಲ್ಲಿ ಹಾಲಿ ಸಚಿವರು, ಶಾಸಕರನ್ನು ಕಣಕ್ಕಿಳಿಸುವ ರಣತಂತ್ರ ರೂಪಿಸಿದೆ.

ಆ ನಿಟ್ಟಿನಲ್ಲಿಯೇ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನೊಳಗೊಂಡ ರಾಯಚೂರು ಲೋಕಸಭಾ ಕ್ಷೇತ್ರದಿಂದ ಸುರಪುರದ ಕಾಂಗ್ರೆಸ್‌ನ ಹಿರಿಯ ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ರಾಯಚೂರು ಗ್ರಾಮೀಣ ಕ್ಷೇತ್ರದಿಂದ ಸತತ 2 ಸಲ ಗೆದ್ದು ಶಾಸಕರಾಗಿರುವ ಬಸನಗೌಡ ದದ್ದಲ್‌ ಅವರನ್ನು ಕಣಕ್ಕಿಳಿಸುವುದರ ಕುರಿತು ಪಕ್ಷದಲ್ಲಿ ಆಂತರಿಕ ಚರ್ಚೆಗಳು ಸಾಗಿದ್ದ ಗುಸು ಗುಸು ಮಧ್ಯೆಯೇ ಇತ್ತೀಚೆಗೆ ಪಕ್ಷ ಸೇರಿದ ಕುಮಾರ ನಾಯಕ ಅವರ ಹೆಸರನ್ನು ಶಿಫಾರಸು ಮಾಡಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.