ಹಳಿಯಾಳದ ಜಿ ಪ್ಲಸ್ 2 ಮನೆಗಳು ಬಹುತೇಕ ಖಾಲಿ ಖಾಲಿ!

| Published : Jan 30 2025, 12:32 AM IST

ಸಾರಾಂಶ

ಸಾರ್ವಜನಿಕರ ಆಕ್ಷೇಪಣೆಗಳಿಂದ ತಪ್ಪಿಸಿಕೊಳ್ಳಲು ಮುಂದಾಗಿರುವ ಪುರಸಭೆಯು ಮನೆಯಲ್ಲಿ ನೆಲೆಸದ ಫಲಾನುಭವಿಗಳಿಗೆ ನೋಟಿಸ್ ನೀಡಲು ಸಿದ್ಧತೆಯನ್ನು ಆರಂಭಿಸಿದೆ.

ಹಳಿಯಾಳ: ಪಟ್ಟಣದಲ್ಲಿ ಪುರಸಭೆಯಿಂದ ನಿರ್ಮಾಣಗೊಂಡಿರುವ ಜಿ- ಪ್ಲಸ್ 2 ಮಾದರಿ ವಸತಿ ಯೋಜನೆಯ ಆಯ್ಕೆಯಾಗಿರುವ ಬಹುತೇಕ ಫಲಾನುಭವಿಗಳು ತಮಗೆ ಮಂಜೂರಾಗಿರುವ ಮನೆಯಲ್ಲಿ ನೆಲೆಸಲು ಹಿಂದೇಟು ಹಾಕುತ್ತಿರುವುದರಿಂದ ಸಾಕಷ್ಟು ಮನೆಗಳು ಖಾಲಿ ಇವೆ.

ಸಾರ್ವಜನಿಕರ ಆಕ್ಷೇಪಣೆಗಳಿಂದ ತಪ್ಪಿಸಿಕೊಳ್ಳಲು ಮುಂದಾಗಿರುವ ಪುರಸಭೆಯು ಮನೆಯಲ್ಲಿ ನೆಲೆಸದ ಫಲಾನುಭವಿಗಳಿಗೆ ನೋಟಿಸ್ ನೀಡಲು ಸಿದ್ಧತೆಯನ್ನು ಆರಂಭಿಸಿದೆ. ಹದಿನೈದು ದಿನದೊಳಗೆ ತಮಗೆ ಮಂಜೂರಾದ ಮನೆಯಲ್ಲಿ ವಾಸಿಸಲು ಆರಂಭಿಸದಿದ್ದರೆ ಆ ಮನೆಯನ್ನು ಮುಟ್ಟುಗೋಲು ಹಾಕಲಾಗುವುದು ಎಂದು ಖಡಕ ಎಚ್ಚರಿಕೆಯನ್ನು ನೀಡಿದೆ. ನೋಟಿಸ್ ನೀಡಲು ಸಿದ್ಧತೆ ಆರಂಭಿಸಿದೆ.

ಸರ್ವರಿಗೂ ಸೂರು ಯೋಜನೆಯಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ವಸತಿರಹಿತರಿಗಾಗಿ ಸೂರು ಕಲ್ಪಿಸುವ ದಿಸೆಯಿಂದ ಪಟ್ಟಣದ ನೂತನ ಸಾರಿಗೆ ಡಿಪೋ ಪಕ್ಕದಲ್ಲಿ ₹12 ಕೋಟಿ ಅನುದಾನದಲ್ಲಿ ಜಿ- ಪ್ಲಸ್ 2 ಮಾದರಿಯ 240 ಮನೆಗಳ ನಿರ್ಮಾಣ ಪೂರ್ಣಗೊಂಡು ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯು ನಡೆದು, ಹಲವು ಫಲಾನುಭವಿಗಳು ಗೃಹಪ್ರವೇಶ ಮಾಡಿದ್ದಾರೆ. ಆದರೆ ಶ್ರೀಮಂತ ಫಲಾನುಭವಿಗಳು ಈ ಮನೆಯಲ್ಲಿ ನೆಲೆಸಲು ಮುಂದಾಗದಿರವುದೇ ಪುರಸಭೆಗೆ ತಲೆನೋವಾಗಿ ಪರಿಣಮಿಸಿದೆ.

ಪುರಸಭೆಯು ಆಯ್ಕೆ ಮಾಡಿದ ಫಲಾನುಭವಿಗಳಲ್ಲಿ ಬಹುತೇಕರು ಸ್ಥಿತಿವಂತರೇ, ಶ್ರೀಮಂತರು ಮನೆಗಳನ್ನು ಹೊಂದಿದವರಾಗಿದ್ದು, ಅವರಲ್ಲಿ ಬಹುತೇಕರು ಪಟ್ಟಣದಲ್ಲಿ ಬಂಗ್ಲೆ ಹೊಂದಿದವರು, ಐಷಾರಾಮಿ ವಾಹನ ಹೊಂದಿದವರು, ಗ್ರಾಮೀಣ ಭಾಗದವರು ಆಗಿರುವುದು ಕಂಡುಬರುತ್ತದೆ.

ಕೇವಲ ಪಟ್ಟಣವಾಸಿಗಳಾಗಿ ಮೀಸಲಾಗಿಟ್ಟ ವಸತಿ ಯೋಜನೆಯಲ್ಲಿ ಗ್ರಾಮಾಂತರ ಭಾಗದವರಿಗೂ ಮನೆಯನ್ನು ಕೊಡಲಾಗಿದೆ. ಕೆಲವರು ಗೃಹಪ್ರವೇಶ ಕಾರ್ಯಕ್ರಮ ಮುಗಿಸಿ ಹೋದವರು ಮತ್ತೇ ತಿರುಗಿ ಇತ್ತ ಹಾಯಲಿಲ್ಲ. ಇನ್ನು ಕೆಲವರು ಬೇರೆಯವರಿಗೆ ಮನೆಯನ್ನು ಬಳಸಲು ನೀಡಿರುವ ಬಗ್ಗೆ ದೂರುಗಳು ಪುರಸಭೆಯವರಿಗೆ ತಲುಪಿವೆ.

ನಿರ್ಮಾಣಗೊಂಡ ಜಿ- ಪ್ಲಸ್ 2 ಮನೆಗಳಲ್ಲಿ ಸ್ನಾನದ ಕೊಠಡಿಗಳು ಸೋರಲಾರಂಭಿಸಿದ್ದರಿಂದ ನೆಲಅಂತಸ್ತಿನ ಹಾಗೂ ಮೊದಲ ಅಂತಸ್ತಿನ ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ. ಅದಲ್ಲದೇ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳು ಜಿ- ಪ್ಲಸ್ 2 ನಿವಾಸಿಗಳದ್ದಾಗಿದೆ.

ಮೊನ್ನೆ ನಡೆದ ಆಶ್ರಯ ಸಮಿತಿಯ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಹಿರಿಯ ಶಾಸಕ ಆರ್.ವಿ. ದೇಶಪಾಂಡೆಯವರು ಖಾಲಿ ಇರುವ ಮನೆಗಳ ಸಮೀಕ್ಷೆ ನಡೆಸಿ, ಮನೆ ಖಾಲಿಯೇ ಇಟ್ಟಿರುವ ಫಲಾನುಭವಿಗಳಿಗೆ ನೋಟಿಸ್ ನೀಡುವಂತೆ ಮುಖ್ಯಾಧಿಕಾರಿಗಳಿಗೆ ಖಡಕ್ ತಾಕೀತು ಮಾಡಿದ್ದಾರೆ.

ಬೆಲೆ ಇಲ್ಲ: ಶಾಸಕರ ಮಾರ್ಗದರ್ಶನದಂತೆ ಪುರಸಭೆ ನಡೆದರೆ ಹಳಿಯಾಳ ಆದರ್ಶ ಪಟ್ಟಣವಾಗುತ್ತಿತ್ತು. ಆದರೆ ಯಾರಿಗೂ ಶಾಸಕ ದೇಶಪಾಂಡೆಯವರ ಸಲಹೆಗಳನ್ನು ಕಾರ್ಯರೂಪಕ್ಕೆ ತರುವ ಮನಸ್ಸಿಲ್ಲ. ಹೀಗಿರುವಾಗ ಪುರಸಭೆಯವರಿಗೆ ಅಭಿವೃದ್ಧಿ ಸಲಹೆ ನೀಡಿದ್ದರೂ ಯಾವ ಬೆಲೆಯಿಲ್ಲ ಎಂದು ಆಶ್ರಯ ಸಮಿತಿ ಸದಸ್ಯರಾದ ಉಮೇಶ ಬೊಳಶೆಟ್ಟಿ ತಿಳಿಸಿದರು.