ಮನರೇಗಾ ಇದ್ದಾಗ ರಾಜ್ಯದಲ್ಲಿ 4.40 ಲಕ್ಷ ಜಾಬ್‌ ಕಾರ್ಡ್‌ ಬೋಗಸ್‌ ಇತ್ತು. ನುಂಗಣ್ಣರಿಗೆ ಅದು ಆದಾಯದ ಮೂಲವಾಗಿತ್ತು. ಮಹಾತ್ಮ ಗಾಂಧಿ ಅವರ ಕನಸು ನನಸು ಮಾಡಲು ಹಾಗೂ ಹಳ್ಳಿಗಳಲ್ಲಿ ಮೂಲಸೌಲಭ್ಯ ಕಲ್ಪಿಸಲು ನಾವು ಯೋಜನೆಯಲ್ಲಿ ಬದಲಾವಣೆ ಮಾಡಿದ್ದೇವೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.

ಹುಬ್ಬಳ್ಳಿ:

ಮನರೇಗಾ ಇದ್ದಾಗ ರಾಜ್ಯದಲ್ಲಿ 4.40 ಲಕ್ಷ ಜಾಬ್‌ ಕಾರ್ಡ್‌ ಬೋಗಸ್‌ ಇತ್ತು. ನುಂಗಣ್ಣರಿಗೆ ಅದು ಆದಾಯದ ಮೂಲವಾಗಿತ್ತು. ಮಹಾತ್ಮ ಗಾಂಧಿ ಅವರ ಕನಸು ನನಸು ಮಾಡಲು ಹಾಗೂ ಹಳ್ಳಿಗಳಲ್ಲಿ ಮೂಲಸೌಲಭ್ಯ ಕಲ್ಪಿಸಲು ನಾವು ಯೋಜನೆಯಲ್ಲಿ ಬದಲಾವಣೆ ಮಾಡಿದ್ದೇವೆ. ಜಿ ರಾಮ್‌ ಜಿ ಯಿಂದಾಗಿ ಅವ್ಯವಹಾರಕ್ಕೆ ಕಡಿವಾಣ ಬೀಳಲಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಸಮರ್ಥಿಸಿಕೊಂಡರು.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಯೋಜನೆಯಡಿ ಸಾವಿರಾರು ಕೋಟಿ ಹಣ ಲೆಕ್ಕಕ್ಕೆ ಸಿಗದೆ ವೆಚ್ಚವಾಗುತ್ತಿತ್ತು. ಈಗ ಒಂದೊಂದು ರೂಪಾಯಿಯು ಸಹ ಲೆಕ್ಕಾಚಾರಕ್ಕೆ ಬರಲಿದ್ದು, ಪಾರದರ್ಶಕವಾಗಿ ಗ್ರಾಮೀಣ ಜನರಿಗೆ ಉದ್ಯೋಗ ದೊರೆಯುತ್ತದೆ. ಯಾರದ್ದೋ ಹೆಸರಲ್ಲಿ, ಇನ್ಯಾರೋ ಬಿಲ್‌ ಮಾಡುವುದು ತಪ್ಪಲಿದೆ. ಮೊದಲಿಗಿಂತ ಹೆಚ್ಚುವರಿಯಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ ₹17 ಸಾವಿರ ಕೋಟಿ ನೀಡುತ್ತಿದೆ. 14 ದಿನದಲ್ಲಿ ಸಂಬಳ ನೀಡದಿದ್ದರೆ ಬಡ್ಡಿ ಸೇರಿಸಿ ನೀಡಬೇಕು. ಯೋಜನೆ ಬಗ್ಗೆ ಅರಿವಿಲ್ಲದ ಸಿಎಂ ಸಿದ್ದರಾಮಯ್ಯ ಇಷ್ಟೊಂದು ವೀಕ್‌ ಎಂದು ತಿಳಿದಿರಲಿಲ್ಲ ಎಂದು ವ್ಯಂಗ್ಯವಾಡಿದರು.

ಖಂಡನೆ:

ತುಮಕೂರಿನ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣಕ್ಕೆ ಗೃಹ ಸಚಿವ ಜಿ. ಪರಮೇಶ್ವರ ಅವರ ಹೆಸರಿಡಲು ಮುಂದಾಗಿರುರುವುದು, ದೊಡ್ಡವರು ಸಹ ಎಡವುತ್ತಾರೆ ಎನ್ನಲು ನಿದರ್ಶನವಾಗಿದೆ ಎಂದರು. ಜಿ. ಪರಮೇಶ್ವರ ಅವರದ್ದು ಸಾಕಷ್ಟು ಶಿಕ್ಷಣ ಸಂಸ್ಥೆಗಳು ತುಮಕೂರಿನಲ್ಲಿ ಇವೆ. ಅದರಲ್ಲಿ ಯಾವುದಕ್ಕಾದರೂ ಒಂದಕ್ಕೆ ಅವರ ಹೆಸರು ಇಡಬಹುದಿತ್ತು. ದೊಡ್ಡವರು ಸಹ ಎಲ್ಲೋ ಒಂದು ಕಡೆ ಎಡವುತ್ತಾರೆ ಎನ್ನಲು ಇದು ಉದಾಹರಣೆ. ಅತಿ ಬುದ್ಧವಂತರೂ ದಡ್ಡರಾಗುತ್ತಾರೆ. ಅವರು ಇಷ್ಟ ಸಣ್ಣ ತಪ್ಪು ಯಾಕೆ ಮಾಡಿದರು ಎಂದು ತಿಳಿಯುತ್ತಿಲ್ಲ ಎಂದರು.