ಸಮಾಜ ಸೇವೆಂದರೆ ಯಾವುದೇ ಪ್ರತಿಫಲ ಅಪೇಕ್ಷಿಸದೇ ಸುತ್ತಲಿನ ಸಮಾಜದ ಒಳಿತಿಗಾಗಿ ಮಾಡುವ ನಿಸ್ವಾರ್ಥ ಸೇವೆಯಾಗಿದೆ. ತಮ್ಮ ಐವತ್ತು ವರ್ಷಗಳ ಸುದೀರ್ಘ ಪತ್ರಿಕಾ ಕ್ಷೇತ್ರದಲ್ಲಿ ಯಾವುದೇ ಪ್ರತಿಫಲವನ್ನು ಬಯಸದೇ ಪ್ರಾಮಾಣಿಕತೆಯಿಂದ ಸಮಾಜವನ್ನು ಒಗ್ಗೂಡಿಸಿ, ಸಮಾಜದ ಕುಂದುಕೊರತೆಗಳನ್ನು ಎತ್ತಿ ತೋರಿಸುವ ಕೆಲಸ ಇವರಿಂದಾಗಿದೆ.
ಹೊನ್ನಾವರ: ಪತ್ರಕರ್ತರು ಸಮಾಜದ ಆಸ್ತಿ. ಹೊನ್ನಾವರದ ಜಿ.ಯು. ಭಟ್ಟರು ಜೀವನದಿಯಂತೆ ಎಲ್ಲರ ಬದುಕಿಗೆ ಮಾದರಿಯಾಗಿ ಬೆಳೆದವರು ಎಂದು ಸಾನ್ ಸಾಲ್ವಾದೊರ್ ಚರ್ಚ್ ಫಾದರ್ ಸಾಲ್ವದೊರ್ ಗೋನ್ಸಾಲ್ವಿಸ್ ಹೇಳಿದರು.ಪಟ್ಟಣದ ಹೊನ್ನಾವರ ನಂಬರ್- ೨ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿ.ಯು. ಭಟ್ ಅವರನ್ನು ಶಾಲೆಯ ಪರವಾಗಿ ಸನ್ಮಾನಿಸಿ ಮಾತನಾಡಿದರು.
ಸಮಾಜ ಸೇವೆಂದರೆ ಯಾವುದೇ ಪ್ರತಿಫಲ ಅಪೇಕ್ಷಿಸದೇ ಸುತ್ತಲಿನ ಸಮಾಜದ ಒಳಿತಿಗಾಗಿ ಮಾಡುವ ನಿಸ್ವಾರ್ಥ ಸೇವೆಯಾಗಿದೆ. ತಮ್ಮ ಐವತ್ತು ವರ್ಷಗಳ ಸುದೀರ್ಘ ಪತ್ರಿಕಾ ಕ್ಷೇತ್ರದಲ್ಲಿ ಯಾವುದೇ ಪ್ರತಿಫಲವನ್ನು ಬಯಸದೇ ಪ್ರಾಮಾಣಿಕತೆಯಿಂದ ಸಮಾಜವನ್ನು ಒಗ್ಗೂಡಿಸಿ, ಸಮಾಜದ ಕುಂದುಕೊರತೆಗಳನ್ನು ಎತ್ತಿ ತೋರಿಸುವ ಕೆಲಸ ಇವರಿಂದಾಗಿದೆ ಎಂದರು.ಮುಖ್ಯ ಅತಿಥಿ ಫಾದರ್ ಡಯಾಸ್ ಮಾತನಾಡಿ, ಪ್ರಾಮಾಣಿಕ ಪತ್ರಕರ್ತರಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಅವರು ಸಮಾಜದ ಕಣ್ಣು, ಮೂಗಿನಂತೆ. ಸದಾ ಕ್ರಿಯಾಶೀಲ ಬರಹಗಾರರಾಗಿ ಸಾಮಾಜಿಕ ಬದಲಾವಣೆಯ ಹರಿಕಾರರಾಗಲು ಸಾಧ್ಯ ಎಂದರು. ಅಂತಹ ಯೋಗ ಮತ್ತು ಯೋಗ್ಯತೆ ಜಿ.ಯು. ಭಟ್ಟರಿಗಿದೆ. ಆ ಕಾರಣಕ್ಕಾಗಿ ರಾಜ್ಯೋತ್ಸವ ಪ್ರಶಸ್ತಿ ಅವರನ್ನರಸಿ ಬಂದಿದೆ ಎಂದರು.ಸನ್ಮಾನ ಸ್ವೀಕರಿಸಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿ.ಯು. ಭಟ್ ಮಾತನಾಡಿ, ಮಾಧ್ಯಮ ಕ್ಷೇತ್ರದಲ್ಲಿ ಸುದೀರ್ಘವಾಗಿ ಕೆಲಸ ಮಾಡಲು ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜದ ಒಳಿತು ಕೆಡುಕನ್ನು ಪತ್ರಿಕೆಯಲ್ಲಿ ಪ್ರಕಟಿಸುವ ಮೂಲಕ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ನಾವು ಒಳ್ಳೆಯದಾಗುವುದರ ಮೂಲಕ ಸಮಾಜಕ್ಕೆ ಒಳ್ಳೆಯದನ್ನೇ ಮಾಡಬೇಕು ಎಂದರು.
ಎಸ್ಡಿಎಂಸಿ ಅಧ್ಯಕ್ಷೆ ನೇತ್ರಾವತಿ ತಾಂಡೇಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಎಸ್ಡಿಎಂಸಿಯ ಜೊಯ್ ಡಿಸೋಜಾ, ಸುಧಾ ಶೇಟ್, ಗುರುನಾಥ ಮೇಸ್ತ, ಶೀಲಾ ಮೇಸ್ತ, ಮಾಲಿನಿ ಮೇಸ್ತ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಿಕ್ಷಕ ಪಿ.ಆರ್. ನಾಯ್ಕ ಸ್ವಾಗತಿಸಿ, ಜಿ.ಯು. ಭಟ್ಟರು ನಡೆದು ಬಂದ ದಾರಿಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸಂಧ್ಯಾ ಹೆಗಡೆ ವಂದಿಸಿದರು.